ನವದೆಹಲಿ: 80 ರಿಂದ 90 ಬಾರಿ ಜನರಿಂದ ತಿರಸ್ಕೃತರಾದವರು ತಮ್ಮ ರಾಜಕೀಯ ಲಾಭಕ್ಕಾಗಿ ಗೂಂಡಾಗಿರಿಯ ಮೂಲಕ ಸಂಸತ್ತನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾಗುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ, "ಅಂಥ ಬೆರಳೆಣಿಕೆಯಷ್ಟು ಜನರು ತಮ್ಮ ಉದ್ದೇಶಗಳಲ್ಲಿ ಯಶಸ್ವಿಯಾಗಲಿಲ್ಲ. ಆದರೆ ದೇಶದ ಜನರು ಅವರ ಕಾರ್ಯಗಳನ್ನು ಗಮನಿಸಿದ್ದು, ತಕ್ಕ ಸಮಯದಲ್ಲಿ ಅವರಿಗೆ ಶಿಕ್ಷೆ ನೀಡಿದ್ದಾರೆ" ಎಂದು ಹೇಳಿದರು.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವು 235 ಸ್ಥಾನಗಳನ್ನು ಗೆದ್ದು, ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿಯನ್ನು 288 ಸದಸ್ಯರ ವಿಧಾನಸಭೆಯಲ್ಲಿ 49 ಸ್ಥಾನಗಳಿಗೆ ಸೀಮಿತಗೊಳಿಸಿದ ಕೆಲವೇ ದಿನಗಳ ನಂತರ ಮೋದಿ ಅವರ ಈ ಹೇಳಿಕೆ ಗಮನಾರ್ಹ. ಇದಕ್ಕೂ ಮುನ್ನ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಅಚ್ಚರಿಯ ಗೆಲುವು ದಾಖಲಿಸಿತ್ತು.
"ಸಂಸತ್ತಿನಲ್ಲಿ ಆರೋಗ್ಯಕರ ಚರ್ಚೆ ನಡೆಯಬೇಕು. ಆದರೆ, ದುರದೃಷ್ಟವಶಾತ್ ಕೆಲ ವ್ಯಕ್ತಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ಸಂಸತ್ತನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಅಡೆತಡೆ ಉಂಟುಮಾಡಿ ಅವ್ಯವಸ್ಥೆ ಸೃಷ್ಟಿಸುತ್ತಿದ್ದಾರೆ" ಎಂದು ಮೋದಿ ಆರೋಪಿಸಿದರು.
"ಅವರ ತಂತ್ರಗಳು ಅಂತಿಮವಾಗಿ ವಿಫಲವಾದರೂ, ಜನರು ಅವರ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ಸಮಯ ಬಂದಾಗ ಸೂಕ್ತ ಪ್ರತಿಕ್ರಿಯೆ ನೀಡುತ್ತಾರೆ" ಎಂದು ಅವರು ಹೇಳಿದರು.
ಸಂಸತ್ತಿನ ಕಾರ್ಯಕಲಾಪಗಳು ಸುಗಮವಾಗಿ ನಡೆಯಬೇಕೆಂದು ತಾವು ವಿರೋಧ ಪಕ್ಷದ ಸಂಸದರನ್ನು ಪದೇ ಪದೆ ಒತ್ತಾಯಿಸಿದ್ದು, ಕೆಲವರು ಇದಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಪ್ರಧಾನಿ ಮೋದಿ ತಿಳಿಸಿದರು.
"ಆದರೆ ಜನರಿಂದ ನಿರಂತರವಾಗಿ ತಿರಸ್ಕರಿಸಲ್ಪಟ್ಟವರು ತಮ್ಮ ಸಹೋದ್ಯೋಗಿಗಳ ಮಾತುಗಳನ್ನು ನಿರ್ಲಕ್ಷಿಸುತ್ತ, ಅವರ ಭಾವನೆಗಳಿಗೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುತ್ತಿದ್ದಾರೆ" ಎಂದು ಪ್ರಧಾನಿ ನುಡಿದರು. ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರ ಪ್ರಾರಂಭವಾಗಿದ್ದು, ಡಿಸೆಂಬರ್ 20 ರವರೆಗೆ ಮುಂದುವರಿಯಲಿದೆ.
ಅದಾನಿ ಚರ್ಚೆಗೆ ಪಟ್ಟು: ಜಾಗತಿಕ ವೇದಿಕೆಯಲ್ಲಿ ಭಾರತದ ಚಿತ್ರಣವನ್ನು ಹಾಳುಮಾಡುವ ಸಾಮರ್ಥ್ಯ ಹೊಂದಿರುವ ಅದಾನಿ ವಿಚಾರಗಳ ಬಗ್ಗೆ ಸಂಸತ್ತಿನಲ್ಲಿ ವಿವರವಾದ ಚರ್ಚೆ ನಡೆಸುವುದು ಈ ಬಾರಿ ಅಧಿವೇಶನದಲ್ಲಿ ಸರ್ಕಾರ ಇಡಬೇಕಾದ ಮೊದಲ ಹೆಜ್ಜೆಯಾಗಬೇಕಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಇದನ್ನೂ ಓದಿ : ಸಂಭಾಲ್ ಹಿಂಸಾಚಾರ: ಹೊರಗಿನವರು ನಗರ ಪ್ರವೇಶಿಸುವಂತಿಲ್ಲ; ಇಂಟರ್ನೆಟ್, ಶಾಲಾ-ಕಾಲೇಜ್ ಬಂದ್