ತಿರುವನಂತಪುರಂ (ಕೇರಳ): ರಾಜ್ಯದಲ್ಲಿ ನಡೆಯುವ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದಾರೆ. ಇದನ್ನು ಸಮುದಾಯ ಖಂಡಿಸಬೇಕು ಎಂದು ಶಾಸಕ ಕೆ. ಟಿ. ಜಲೀಲ್ ಹೇಳಿಕೆ ನೀಡಿದ್ದು, ವಿವಾದದ ಕಿಡಿ ಹೊತ್ತಿಸಿದೆ. ಇದನ್ನು ಮುಸ್ಲಿಂ ಲೀಗ್ ಶಾಸಕ ಪಿವಿ ಅನ್ವರ್ ಟೀಕಿಸಿದ್ದಾರೆ.
ಮಲಪ್ಪುರಂನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚಿನ್ನ ಕಳ್ಳಸಾಗಣೆ ಮಾಡುವ ಪ್ರಕರಣಗಳು ಹೆಚ್ಚುತ್ತಿರುವುದನ್ನು ಖಂಡಿಸುವ ವೇಳೆ ಎಡಪಕ್ಷದ ಶಾಸಕ ಕೆ. ಟಿ. ಜಲೀಲ್ ಅವರು ಮುಸ್ಲಿಂ ಸಮುದಾಯವನ್ನು ಟೀಕಿಸಿದ್ದಾರೆ. ಆಡಳಿತಾರೂಢ ಪಕ್ಷದ ಶಾಸಕರಲ್ಲಿ ಚಿನ್ನ ಕಳ್ಳಸಾಗಣೆ ಮತ್ತು ಹವಾಲಾ ದಂಧೆ ನಡೆಸುತ್ತಿರುವವರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದಾರೆ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಇಂತಹ ಅಪರಾಧಗಳಲ್ಲಿ ಭಾಗಿಯಾಗಿರುವ ಜನರನ್ನು ಸಮುದಾಯದ ಮುಖಂಡರೇ ಟೀಕಿಸಬೇಕು ಮತ್ತು ಅವರನ್ನು ನಿಯಂತ್ರಿಸಬೇಕು. ಕ್ರೈಸ್ತ ಸಮುದಾಯದ ಜನರು ಮಾಡಿದ ತಪ್ಪುಗಳನ್ನು ಅದೇ ಜನರು ಟೀಕಿಸಬೇಕು. ಮುಸ್ಲಿಮರು ಮಾಡಿದ ಅಪರಾಧಗಳನ್ನು ಅದೇ ಸಮುದಾಯವರು ಖಂಡಿಸಬೇಕು. ಹಿಂದೂಗಳು ಸಹಿತ ತಮ್ಮ ಸಮುದಾಯದೊಳಗಿನ ತಪ್ಪುಗಳನ್ನು ಪರಿಹರಿಸಿಕೊಳ್ಳಬೇಕು. ಇಲ್ಲವಾದಲ್ಲಿ ಇತರ ಧರ್ಮದ ವ್ಯಕ್ತಿಗಳು ಹಸ್ತಕ್ಷೇಪ ಮಾಡುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಲಪ್ಪುರಂ ಜಿಲ್ಲೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ, ಅವರದ್ದೇ ಪಕ್ಷದ ಶಾಸಕ ನೇರವಾಗಿ ಮುಸ್ಲಿಂ ಸಮುದಾಯದವರನ್ನು ಟೀಕಿಸಿದ್ದಾರೆ. ಮಲಪ್ಪುರಂ ಜಿಲ್ಲೆ ಮುಸ್ಲಿಂ ಬಾಹುಳ್ಯ ಪ್ರದೇಶವಾಗಿದೆ.
ಸ್ಮಗ್ಲರ್ಗಳಲ್ಲಿ ಮುಸ್ಲಿಮರೇ ಹೆಚ್ಚು: ಚಿನ್ನ ಕಳ್ಳಸಾಗಣೆ ಪ್ರಕರಣಗಳಲ್ಲಿ ಸಿಕ್ಕಿಬಿದ್ದವರಲ್ಲಿ ಮುಸ್ಲಿಂ ಸಮುದಾಯದವರೇ ಹೆಚ್ಚು. ಈ ಬಗ್ಗೆ ಧರ್ಮಗುರುಗಳು ಮಾತನಾಡದೆ ಇದ್ದರೆ, ಸುಧಾರಣೆ ಮತ್ತು ಪ್ರಗತಿಯನ್ನು ಸಾಧಿಸಲು ಹೇಗೆ ಸಾಧ್ಯ. ಕಳ್ಳಸಾಗಣೆ ಧರ್ಮ ವಿರೋಧಿ ನಡೆ ಎಂದು ಘೋಷಿಸಬೇಕು. ಇದನ್ನು ಹೇಳಿದಾಗ ಕೆಲವರು ಏಕೆ ಅಸಮಾಧಾನಗೊಂಡಿದ್ದಾರೆ ಎಂಬುದೇ ಆಶ್ಚರ್ಯ ಎಂದಿದ್ದಾರೆ.
ವಿವಾದದ ಬೆನ್ನಲ್ಲೇ ಪೋಸ್ಟ್ ಡಿಲೀಟ್: ಶಾಸಕ ಜಲೀಲ್ ಅವರು ಮಾಡಿದ ಈ ಪೋಸ್ಟ್ ವಿವಾದದ ಸ್ವರೂಪ ಪಡೆಯುತ್ತಲೇ, ಡಿಲೀಟ್ ಮಾಡಿದ್ದಾರೆ. ಇದಕ್ಕೆ ಮುಸ್ಲಿಂ ಲೀಗ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದು ಅತ್ಯಂತ ಅವಹೇಳನಕಾರಿ ಎಂದು ಜರಿದಿದೆ. ಮುಸ್ಲಿಮ್ ಸಮುದಾಯದವರು ಕಳ್ಳಸಾಗಣೆ ನಡೆಸುತ್ತಿದ್ದಾರೆ ಎಂದು ಶಾಸಕರು ಆರೋಪಿಸಿದ್ದಾರೆ. ಈ ಮಾಹಿತಿ ಅವರಿಗೆ ಎಲ್ಲಿ ಸಿಕ್ಕಿತು? ಯಾವ ಆಧಾರದ ಮೇಲೆ ಆರೋಪ ಮಾಡಿದ್ದಾರೆ ಎಂಬುದನ್ನು ಸಾಬೀತು ಪಡಿಸಬೇಕು ಎಂದು ಸವಾಲು ಹಾಕಿದೆ.
ಇದನ್ನೂ ಓದಿ: ಮಾಜಿ ಶಾಸಕ ಮೊಯ್ದಿನ್ ಬಾವ ಸಹೋದರ ನಾಪತ್ತೆ: ಕೂಳೂರು ಸೇತುವೆ ಮೇಲೆ ಕಾರು ಪತ್ತೆ - Moidin Bava Brother Missing