ನ್ಯೂಯಾರ್ಕ್:ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಂದಿನ ತಿಂಗಳು ನಡೆಯಲಿರುವ ತಮ್ಮ ಪದಗ್ರಹಣ ಸಮಾರಂಭಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಆಹ್ವಾನಿಸಿ ಅಚ್ಚರಿ ಮೂಡಿಸಿದ್ದಾರೆ. ಜಿನ್ ಪಿಂಗ್ ಅವರಿಗೆ ಆಹ್ವಾನ ನೀಡಿರುವುದನ್ನು ಟ್ರಂಪ್ ಅವರ ವಕ್ತಾರೆ ಕರೋಲಿನ್ ಲೀವಿಟ್ ಗುರುವಾರ ದೃಢಪಡಿಸಿದ್ದಾರೆ.
ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಭೇಟಿಯಾಗಿದ್ದ ಟ್ರಂಪ್: ಪ್ರಚಾರದ ಸಮಯದಲ್ಲಿ ಮತ್ತು ನಂತರ ಜಿನ್ ಪಿಂಗ್ ಅವರನ್ನು ಟೀಕೆ ಮಾಡುತ್ತಿದ್ದರೂ ಅವರನ್ನು ಪದಗ್ರಹಣ ಸಮಾರಂಭಕ್ಕೆ ಆಹ್ವಾನಿಸಿರುವುದು ಟ್ರಂಪ್ ಅವರ ಅಸಾಂಪ್ರದಾಯಿಕ ರಾಜತಾಂತ್ರಿಕತೆಗೆ ಅನುಗುಣವಾಗಿದೆ. ಹಿಂದಿನ ಅವಧಿಯಲ್ಲಿ ಟ್ರಂಪ್ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರನ್ನು ಭೇಟಿಯಾಗಿ ಅಸಾಂಪ್ರದಾಯಿಕ ರಾಜತಾಂತ್ರಿಕತೆಗೆ ನಾಂದಿ ಹಾಡಿದ್ದರು.
ಕ್ಸಿ ಅವರ ಹೆಸರನ್ನು ಹೇಳದೆ ಕಳುಹಿಸಲಾಗುತ್ತಿರುವ ಆಹ್ವಾನಗಳ ಬಗ್ಗೆ ಟ್ರಂಪ್ ಮಾತನಾಡಿದ್ದು, "ಆಹ್ವಾನ ಕಳುಹಿಸಿರುವುದಕ್ಕೆ ಕೆಲವರು 'ವಾಹ್, ಆದರೆ ಅದು ಸ್ವಲ್ಪ ಅಪಾಯಕಾರಿ ಅಲ್ಲವೇ' ಎಂದು ಹೇಳಿದರು. ಅದಕ್ಕೆ ನಾನು, 'ಇರಬಹುದು. ಏನಾಗುತ್ತದೆ ಎಂದು ನೋಡೋಣ'. ಆದರೆ ನಾವು ಸಣ್ಣ ಪ್ರಮಾಣದ ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡುತ್ತೇವೆ" ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.
ಫಾಕ್ಸ್ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಲೀವಿಟ್, "ಅಧ್ಯಕ್ಷ ಟ್ರಂಪ್ ಮಿತ್ರರಾಷ್ಟ್ರಗಳು ಮಾತ್ರವಲ್ಲದೆ ನಮ್ಮ ವಿರೋಧಿಗಳು ಮತ್ತು ನಮ್ಮ ಪ್ರತಿಸ್ಪರ್ಧಿಗಳೂ ಆಗಿರುವ ದೇಶಗಳ ನಾಯಕರೊಂದಿಗೆ ಮುಕ್ತ ಸಂವಾದ ನಡೆಸುವುದಕ್ಕೆ ಇದೊಂದು ಉದಾಹರಣೆಯಾಗಿದೆ" ಎಂದು ಹೇಳಿದರು.