ಬೀಜಿಂಗ್: ಚೀನಾದ ಮೂವರು ಗಗನಯಾತ್ರಿಗಳನ್ನು ಒಳಗೊಂಡ ಶೆನ್ ಝೌ-18 ಬಾಹ್ಯಾಕಾಶ ನೌಕೆಯ ಸಿಬ್ಬಂದಿ ಸೋಮವಾರ ಮುಂಜಾನೆ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣದಲ್ಲಿ ಆರು ತಿಂಗಳ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ ನಂತರ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ.
ಗಗನಯಾತ್ರಿಗಳಾದ ಯೆ ಗುವಾಂಗ್ ಫು, ಲಿ ಕಾಂಗ್ ಮತ್ತು ಲಿ ಗುವಾಂಗ್ ಸು ಅವರನ್ನು ಹೊತ್ತ ಶೆನ್ ಝೌ-18 ರ ರಿಟರ್ನ್ ಕ್ಯಾಪ್ಸೂಲ್ ಉತ್ತರ ಚೀನಾದ ಇನ್ನರ್ ಮಂಗೋಲಿಯಾ ಸ್ವಾಯತ್ತ ಪ್ರದೇಶದ ಡಾಂಗ್ ಫೆಂಗ್ ಲ್ಯಾಂಡಿಂಗ್ ಸೈಟ್ನಲ್ಲಿ ಮುಂಜಾನೆ 1:24ಕ್ಕೆ (ಬೀಜಿಂಗ್ ಸಮಯ) ಇಳಿಯಿತು. ಚೀನಾ ಮಾನವಸಹಿತ ಬಾಹ್ಯಾಕಾಶ ಸಂಸ್ಥೆ (ಸಿಎಂಎಸ್ಎ)ಯ ಪ್ರಕಾರ, ಸಿಬ್ಬಂದಿಗಳೆಲ್ಲರೂ ಮುಂಜಾನೆ 2:15ರಷ್ಟೊತ್ತಿಗೆ ರಿಟರ್ನ್ ಕ್ಯಾಪ್ಸೂಲ್ನಿಂದ ಹೊರಗೆ ಬಂದಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
192 ದಿನಗಳ ಕಾಲ ಕಕ್ಷೆಯಲ್ಲಿದ್ದು ಮರಳಿರುವ ಮೂವರೂ ಗಗನಯಾತ್ರಿಗಳ ಆರೋಗ್ಯ ಉತ್ತಮವಾಗಿದೆ ಮತ್ತು ಶೆನ್ ಝೌ-18 ಮಾನವಸಹಿತ ಮಿಷನ್ ಯಶಸ್ವಿಯಾಗಿದೆ ಎಂದು ಸಿಎಂಎಸ್ಎ ತಿಳಿಸಿದೆ. ಶೆನ್ ಝೌ-18 ಮಿಷನ್ ಕಮಾಂಡರ್ ಯೆ, ಒಂದು ವರ್ಷಕ್ಕಿಂತ ಹೆಚ್ಚು ಕಾಲ ಬಾಹ್ಯಾಕಾಶ ಹಾರಾಟದ ಅನುಭವ ಹೊಂದಿರುವ ಮೊದಲ ಚೀನೀ ಗಗನಯಾತ್ರಿಯಾಗಿದ್ದಾರೆ. ಈ ಮೂಲಕ ಅವರು ಕಕ್ಷೆಯಲ್ಲಿ ದೀರ್ಘಕಾಲ ಉಳಿದ ಚೀನಿ ಗಗನಯಾತ್ರಿಯಾಗಿದ್ದಾರೆ. ಅವರು ಅಕ್ಟೋಬರ್ 2021ರಿಂದ ಏಪ್ರಿಲ್ 2022 ರವರೆಗೆ ಶೆನ್ ಝೌ -13 ಮಿಷನ್ನ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ್ದಾರೆ.
"ಚೀನಾದ ಗಗನಯಾತ್ರಿಗಳು ಹಲವಾರು ಕಾರ್ಯಾಚರಣೆಗಳಲ್ಲಿ ಬಾಹ್ಯಾಕಾಶಕ್ಕೆ ಹಾರಿದ್ದಾರೆ. ಅತ್ಯಧಿಕ ಸಮಯ ಕಕ್ಷೆಯಲ್ಲಿರುವ ದಾಖಲೆಯನ್ನು ಮುಂದಿನ ದಿನಗಳಲ್ಲಿ ಮುರಿಯಲಾಗುವುದು ಎಂಬುದು ನನ್ನ ವಿಶ್ವಾಸವಾಗಿದೆ" ಎಂದು ಯೆ ಹೇಳಿದರು.
ಚೀನಾ ಏಪ್ರಿಲ್ 25ರಂದು ಶೆನ್ ಝೌ-18 ಮಾನವಸಹಿತ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿತ್ತು. ಮಿಷನ್ ಸಮಯದಲ್ಲಿ, ಶೆನ್ ಝೌ-18 ಸಿಬ್ಬಂದಿ ಮೈಕ್ರೋಗ್ರಾವಿಟಿ, ಬಾಹ್ಯಾಕಾಶ ವಸ್ತು ವಿಜ್ಞಾನ, ಬಾಹ್ಯಾಕಾಶ ಜೀವ ವಿಜ್ಞಾನ, ಬಾಹ್ಯಾಕಾಶ ಔಷಧ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮೂಲ ಭೌತಶಾಸ್ತ್ರ ಕ್ಷೇತ್ರಗಳಲ್ಲಿ ಹಲವಾರು ಪ್ರಯೋಗಗಳನ್ನು ನಡೆಸಲು ವೈಜ್ಞಾನಿಕ ಪ್ರಯೋಗ ಕ್ಯಾಬಿನೆಟ್ಗಳು ಮತ್ತು ಎಕ್ಸ್ ಟ್ರಾ ವೆಹಿಕಲ್ ಪೇಲೋಡ್ಗಳನ್ನು ಬಳಸಿದ್ದಾರೆ.
ಅವರು ದಹನ ಪ್ರಯೋಗ ಕ್ಯಾಬಿನೆಟ್ನಲ್ಲಿ ಅನಿಲ ಪ್ರಯೋಗಕ್ಕಾಗಿ ಬರ್ನರ್ ಅನ್ನು ಬದಲಾಯಿಸಿದರು ಮತ್ತು ಯೋಜಿಸಿದಂತೆ ದ್ರವ ಭೌತಶಾಸ್ತ್ರ ಪ್ರಯೋಗ ಕ್ಯಾಬಿನೆಟ್ನಲ್ಲಿ ಮಾದರಿಗಳನ್ನು ಪರೀಕ್ಷಿಸಿದರು. ಅವರು ಬಾಹ್ಯಾಕಾಶ ನೌಕೆಯ ಭೇಟಿ ಮತ್ತು ಡಾಕಿಂಗ್ ಬಗ್ಗೆ ಕಕ್ಷೆಯಲ್ಲಿ ತರಬೇತಿಯನ್ನು ಸಹ ನಡೆಸಿದರು. ಶೆನ್ ಝೌ-18 ಗಗನಯಾತ್ರಿಗಳು ಎರಡು ಬಾರಿ ವಾಹನೇತರ ಚಟುವಟಿಕೆಗಳನ್ನು ನಡೆಸಿದರು. ಮೇ ತಿಂಗಳಲ್ಲಿ ಅವರು ಕೈಗೊಂಡ ಮೊದಲ ಬಾಹ್ಯಾಕಾಶ ನಡಿಗೆ ಚೀನಾದ ಗಗನಯಾತ್ರಿಗಳ ಅತಿ ಉದ್ದದ ಏಕೈಕ ಬಾಹ್ಯಾಕಾಶ ನಡಿಗೆ ಎಂಬ ಹೊಸ ದಾಖಲೆಯನ್ನು ನಿರ್ಮಿಸಿತು.
ಇದನ್ನೂ ಓದಿ : ಕೆನಡಾದಲ್ಲಿ ಹಿಂದೂ ದೇವಾಲಯ, ಭಕ್ತರ ಮೇಲೆ ಖಲಿಸ್ತಾನಿಗಳ ದಾಳಿ: ಪ್ರಧಾನಿ ಟ್ರುಡೊ ಸೇರಿ ಹಲವರ ಖಂಡನೆ