ಕ್ವೆಟ್ಟಾ (ಪಾಕಿಸ್ತಾನ): ಪಾಕಿಸ್ತಾನ ಆಡಳಿತದಿಂದ ದಬ್ಬಾಳಿಕೆ ಅನುಭವಿಸುತ್ತಿದ್ದರೂ ಸಾವಿರಕ್ಕೂ ಅಧಿಕ ಬಲೂಚ್ ಪ್ರತಿಭಟನಕಾರರು ಕ್ವೆಟ್ಟಾದಲ್ಲಿ ಹಮ್ಮಿಕೊಂಡಿದ್ದ ಬಲೂಚ್ ರಾಷ್ಟ್ರೀಯ ಕೂಟದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ. "ಬಲೂಚ್ ರಾಷ್ಟ್ರ ಜಗತ್ತಿನೆದುರು ತನ್ನ ಧ್ವನಿಯನ್ನು ಎತ್ತಿದೆ. ಮತ್ತು ಎಂದಿಗೂ ಪಾಕಿಸ್ತಾನದ ದಬ್ಬಾಳಿಕೆಯನ್ನು ಸಹಿಸಿಕೊಂಡು ಮೌನವಾಗಿರುವುದಿಲ್ಲ" ಎಂದು ಬಲೂಚ್ ಯಕ್ಜೆಹ್ತಿ ಸಮಿತಿ ಸರ್ಕಾರಕ್ಕೆ ಕಠಿಣ ಸಂದೇಶವನ್ನು ರವಾನಿಸಿದೆ. ಹಾಗೇ ಈ ಸಂದೇಶವನ್ನು ಬಲೂಚ್ ಯಕ್ಜೆತಿ ಸಮಿತಿ ಎಕ್ಸ್ನಲ್ಲಿ ಪೋಸ್ಟ್ ಮಾಡಿಕೊಂಡಿದೆ.
ಪೋಸ್ಟ್‌ನಲ್ಲಿ ಸಮಿತಿಯು ಬಲೂಚಿಸ್ತಾನದಾದ್ಯಂತ ನಡೆಯುತ್ತಿರುವ ರಾಜ್ಯ ದಬ್ಬಾಳಿಕೆ ವಿರುದ್ಧದ ಪ್ರತಿಭಟನೆಯಲ್ಲಿ ಸಂಪೂರ್ಣವಾಗಿ ಭಾಗವಹಿಸುವಂತೆ ಬಲೂಚ್ ಜನರನ್ನು ಒತ್ತಾಯಿಸಿದೆ. "ಬಲೂಚಿಸ್ತಾನದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಭಾಗವಹಿಸಲು ಮತ್ತು ಬಲೂಚ್ ನರಮೇಧವನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಆಡಳಿತ ಸರ್ಕಾರಕ್ಕೆ ಕಳುಹಿಸಲು ನಾವು ಮತ್ತೊಮ್ಮೆ ಬಲೂಚಿಸ್ತಾನದ ಜನರನ್ನು ವಿನಂತಿಸುತ್ತೇವೆ" ಎಂದು ಹೇಳಿದೆ.
ಬಲೂಚ್ ಕಾರ್ಯಕರ್ತ ಮಹರಂಗ್ ಬಲೂಚ್ ಕರಾಚಿ ಪ್ರೆಸ್ ಕ್ಲಬ್‌ನ ಹೊರಗೆ ಬಲೂಚ್ ಯಕ್ಜೆಹ್ತಿ ಸಮಿತಿಯಿಂದ ನಡೆಯುತ್ತಿದ್ದ ಪತ್ರಿಕಾಗೋಷ್ಠಿಯನ್ನು ತಡೆಯಲು ಭಾರಿ ಪೊಲೀಸ್ ತುಕಡಿಯನ್ನು ನಿಯೋಜಿಸಲಾಗಿತ್ತು ಎಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ. ರಾಷ್ಟ್ರವ್ಯಾಪಿ ಸಭೆಗಳಲ್ಲಿ ನಮ್ಮನ್ನು ಭಾಗವಹಿಸುವುದನ್ನು ತಡೆಯಲು ಪಾಕಿಸ್ತಾನದ ರಕ್ಷಣಾ ಪಡೆಗಳು ಪ್ರಯತ್ನಿಸುತ್ತಿವೆ. ಈ ಕ್ರೂರತನ, ದಬ್ಬಾಳಿಕೆಗೆ ಸರ್ಕಾರ ಮತ್ತು ರಕ್ಷಣಾ ಪಡೆಗಳೆ ಹೊಣೆಗಾರರು ಎಂದು ಪ್ರತಿಭಟನಾಕಾರರು ಇದೇ ವೇಳೆ ಆರೋಪಿಸಿದ್ದಾರೆ.
ಪಾಕಿಸ್ತಾನದ ರಕ್ಷಣಾ ಪಡೆಗಳು ಬಲೂಚ್ ಸಮುದಾಯದ ಮೇಲೆ ಅತ್ಯಂತ ಕ್ರೂರವಾಗಿ ದಬ್ಬಾಳಿಕೆ ನಡೆಸಿದ್ದರಿಂದ ಬಲೂಚಿಸ್ತಾನದ ಪರಿಸ್ಥಿತಿಯು ಹದಗೆಡುತ್ತಲೇ ಇದೆ. ಇದರ ವಿರುದ್ಧ ಬಲೂಚ್ ಜನರು ಹೋರಾಡುತ್ತಲೆ ಇದ್ದಾರೆ. ಈಗಾಗಲೇ ಜುಲೈ 28 ರಿಂದ ಪಾಕಿಸ್ತಾನಿ ಅಧಿಕಾರಿಗಳು ಬಲೂಚ್ ರಾಷ್ಟ್ರೀಯ ಕೂಟಕ್ಕೆ ಸಂಬಂಧಿಸಿದಂತೆ ನೂರಾರು ಜನರನ್ನು ಬಂಧಿಸಿದ್ದಾರೆ. ಇಲ್ಲಿ ಮಾನವ ಹಕ್ಕುಗಳ ವಿರುದ್ಧದ ಕಾರ್ಯಗಳು ಎದ್ದು ಕಾಣುತ್ತಿದೆ.
ಏನಿದು ಬಲೂಚಿ ಹೋರಾಟ:ಬಲೂಚಿಸ್ತಾನ ಪಾಕಿಸ್ತಾನದ ಭಾಗವೇ ಆಗಿದ್ದರೂ ತಾಂತ್ರಿಕವಾಗಿಯಷ್ಟೇ ಅದರ ಭಾಗವಾಗಿದೆ.. ಬಲೂಚಿಗಳು ಸಾಂಸ್ಕೃತಿಕವಾಗಿ ಮತ್ತು ಮಾನಸಿಕವಾಗಿ ಎಂದೂ ಪಾಕ್‌ನ ಭಾಗವಾಗಲು ಇಷ್ಟಪಟ್ಟಿಲ್ಲ. ಇವರದ್ದು ಇಸ್ಲಾಮಾಬಾದ್ಗಿಂತ ವಿಭಿನ್ನ ಮನಸ್ಥಿತಿಯನ್ನು ಹೊಂದಿದ್ದಾರೆ. ಸಂಪ್ರದಾಯ, ಆಚಾರ-ವಿಚಾರಗಳು ಪಾಕ್ಗಿಂತ ತೀರಾ ಭಿನ್ನವಾಗಿಯೇ ಇವೆ. ನೈಸರ್ಗಿಕ ಸಂಪತ್ತು ಹೇರಳವಾಗಿರುವ ಪ್ರದೇಶದ ಮೇಲೆ ತನ್ನ ಹಕ್ಕು ಸಾಧಿಸಲು ಪಾಕಿಸ್ತಾನ ಸೇನಾ ಬಲ ಪ್ರಯೋಗ ಮಾಡುತ್ತಿರುವುದೇ ಬಲೂಚಿಸ್ತಾನ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿದೆ. ಬಲೂಚಿ ರಾಷ್ಟ್ರೀಯವಾದಿಗಳು, ಪಾಕಿಸ್ತಾನ್, ಇರಾನ್ ಜತೆ ಆಗಾಗ ಗೆರಿಲ್ಲಾ ಮಾದರಿಯ ಯುದ್ಧ ಮಾಡುತ್ತಲೇ ಇದ್ದಾರೆ. ಬಲೂಚಿಗಳ ಪ್ರದೇಶವು ಇರಾನ್, ಆಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ಮಧ್ಯೆ ಹಂಚಿಹೊಗಿದ್ದು, ಅದನ್ನೆಲ್ಲ ಒಂದುಗೂಡಿಸಿ ಬಲೂಚಿಸ್ತಾನ ರಾಷ್ಟ್ರವನ್ನಾಗಿಸುವುದು ಅಲ್ಲಿನ ಹೋರಾಟಗಾರರ ಗುರಿ ಆಗಿದೆ.
2003ರಿಂದ ಈ ಹೋರಾಟ ಹೆಚ್ಚು ತೀವ್ರತೆಯನ್ನು ಪಡೆದುಕೊಂಡಿದೆ. ಪಾಕಿಸ್ತಾನವು ಉಗ್ರ ಸಂಘಟನೆ ಎಂದು ಪರಿಗಣಿಸುವ ದಿ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ ಈ ಹೋರಾಟದ ಹಿಂದಿರುವ ಬಹುದೊಡ್ಡ ಶಕ್ತಿ. ಇದನ್ನು ಬಲೂಚ್ ಪ್ರತ್ಯೇಕತಾವಾದಿಗಳ ಗುಂಪು ಎಂದೂ ಕರೆಯಲಾಗುತ್ತದೆ.
ಪಾಕ್‌ನ ಅತಿದೊಡ್ಡ ಪ್ರಾಂತ್ಯ ಈ ಬಲೂಚಿಸ್ತಾನ:ಪಾಕಿಸ್ತಾನದ ನಾಲ್ಕು ಪ್ರಾಂತಗಳ ಪೈಕಿ ಬಲೂಚಿಸ್ತಾನ ಕೂಡ ಒಂದು. ಪಾಕಿಸ್ತಾನದ ಒಟ್ಟು ಭೂ ಪ್ರದೇಶದ ಪೈಕಿ ಬಲೂಚಿಸ್ತಾನವೇ ಶೇ.44ರಷ್ಟು ಭೂ ಭಾಗವನ್ನು ಹೊಂದಿದೆ. ಅಂದರೆ, ಪಾಕ್‌ನ ಅತಿದೊಡ್ಡ ಪ್ರಾಂತವಿದು. ಇಲ್ಲಿರುವ ಜನಸಂಖ್ಯೆ ಒಟ್ಟು 1.3 ಕೋಟಿ. ಅಂದರೆ, ಪಾಕಿಸ್ತಾನದ ಒಟ್ಟು ಜನಸಂಖ್ಯೆಯಲ್ಲಿ ಶೇ.7ರಷ್ಟು. ಬಲೂಚಿಗಳು ಇದೇ ಪ್ರದೇಶದ ಮೂಲ ನಿವಾಸಿಗಳು. ಇವರ ಹೊರತಾಗಿಯೂ ಪಶ್ತೂನ್ ಮತ್ತು ಬ್ರಾಹುಸಿಗಳಿದ್ದಾರೆ. ನೈಸರ್ಗಿಕ ಸಂಪನ್ಮೂಲಗಳಿಂದ ಈ ಪ್ರದೇಶವು ಶ್ರೀಮಂತವಾಗಿದೆ. ಇಲ್ಲಿ ತೈಲ, ಅನಿಲ ಮತ್ತು ಬಂಗಾರದ ನಿಕ್ಷೇಪಗಳಿವೆ. ಈ ಪ್ರದೇಶದ ಬಹುತೇಕ ಆರ್ಥಿಕ ಸ್ಥಿತಿ ಇಲ್ಲಿರುವ ನೈಸರ್ಗಿಕ ಅನಿಲ ನಿಕ್ಷೇಪಗಳ ಮೇಲೆಯೇ ಅವಲಂಬಿತವಾಗಿದೆ. ಪಾಕಿಸ್ತಾನಕ್ಕೆ ಇದೊಂದು ಅತ್ಯಂತ ಆಯಕಟ್ಟಿನ ಭಾಗ. ಪಂಜಾಬ್, ಸಿಂಧ್, ಆಫ್ಘಾನಿಸ್ತಾನ್ ಹಾಗೂ ಇರಾನ್ ಜತೆ ಬಲೂಚಿಸ್ತಾನ ಗಡಿಗಳನ್ನು ಹಂಚಿಕೊಂಡಿದೆ. ಈ ಭಾಗದಲ್ಲಿರುವ ಗ್ವಾದರ್ ಬಂದರು ಪಾಕಿಸ್ತಾನಕ್ಕೆ ಅತ್ಯಂತ ಮಹತ್ವದ್ದಾಗಿದೆ.
ಇದನ್ನೂ ಓದಿ:ಇರಾನ್ ದೇಶದೊಳಗೆ ಇಸ್ರೇಲ್ ನಡೆಸಿದ ರಹಸ್ಯ ಕಾರ್ಯಾಚರಣೆಗಳು ಯಾವವು?: ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ! - ISRAEL SECREAT OPERATIONS