ಕರ್ನಾಟಕ

karnataka

ETV Bharat / international

ಶ್ರೀಲಂಕಾ, ಭಾರತ ಮಧ್ಯೆ ಭೂಮಾರ್ಗ ನಿರ್ಮಾಣ ಅಧ್ಯಯನ ಅಂತಿಮ ಹಂತದಲ್ಲಿ: ಲಂಕಾ ಅಧ್ಯಕ್ಷ ವಿಕ್ರಮಸಿಂಘೆ - Lanka India Land Connectivity

ಭಾರತ ಮತ್ತು ಶ್ರೀಲಂಕಾಗಳ ಮಧ್ಯೆ ಭೂಮಾರ್ಗ ನಿರ್ಮಿಸುವ ಯೋಜನೆಯ ಕಾರ್ಯಸಾಧ್ಯತಾ ಅಧ್ಯಯನವು ಅಂತಿಮ ಹಂತದಲ್ಲಿದೆ ಎಂದು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಹೇಳಿದ್ದಾರೆ.

ಶ್ರೀಲಂಕಾ, ಭಾರತ ಮಧ್ಯೆ ಭೂಮಾರ್ಗ ನಿರ್ಮಾಣ ಅಧ್ಯಯನ ಅಂತಿಮ ಹಂತದಲ್ಲಿ: ಲಂಕಾ ಅಧ್ಯಕ್ಷ ವಿಕ್ರಮಸಿಂಘೆ
ಶ್ರೀಲಂಕಾ, ಭಾರತ ಮಧ್ಯೆ ಭೂಮಾರ್ಗ ನಿರ್ಮಾಣ ಅಧ್ಯಯನ ಅಂತಿಮ ಹಂತದಲ್ಲಿ: ಲಂಕಾ ಅಧ್ಯಕ್ಷ ವಿಕ್ರಮಸಿಂಘೆ (IANS (ಶ್ರೀಲಂಕಾ ಧ್ವಜ - ಸಂಗ್ರಹ ಚಿತ್ರ))

By PTI

Published : Jun 16, 2024, 5:12 PM IST

ಕೊಲಂಬೊ: ಶ್ರೀಲಂಕಾ ಹಾಗೂ ಭಾರತವನ್ನು ರಸ್ತೆ ಮಾರ್ಗದ ಮೂಲಕ ಸಂಪರ್ಕಿಸುವ ಪ್ರಸ್ತಾವಿತ ಯೋಜನೆಯ ಕಾರ್ಯಸಾಧ್ಯತಾ ಅಧ್ಯಯನವು ಅಂತಿಮ ಹಂತದಲ್ಲಿದೆ ಎಂದು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಭಾನುವಾರ ಹೇಳಿದ್ದಾರೆ. ಅಭಿವೃದ್ಧಿ ಕಾರ್ಯಗಳ ಪರಿಶೀಲನೆಗಾಗಿ ಈಶಾನ್ಯ ಜಿಲ್ಲೆಯ ಮನ್ನಾರ್​ಗೆ ಪ್ರಯಾಣಿಸುತ್ತಿದ್ದ ವೇಳೆ ಮಾತನಾಡಿದ ವಿಕ್ರಮಸಿಂಘೆ, ಕಾರ್ಯಸಾಧ್ಯತಾ ಅಧ್ಯಯನದ ಪ್ರಾಥಮಿಕ ಕೆಲಸ ಮುಗಿದಿದೆ ಮತ್ತು ಅಂತಿಮ ಹಂತವು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಭಾರತದ ವಿದೇಶಾಂಗ ಸಚಿವ ಎಸ್​. ಜೈಶಂಕರ್ ಇದೇ ವಾರ ಲಂಕಾಗೆ ಭೇಟಿ ನೀಡುವ ಸಾಧ್ಯತೆಯಿದ್ದು, ಭೂಮಾರ್ಗ ಯೋಜನೆಯ ಪ್ರಸ್ತಾಪ ಮತ್ತು ಉಭಯ ದೇಶಗಳ ನಡುವೆ ಪವರ್ ಗ್ರಿಡ್ ಸಂಪರ್ಕದ ಸಾಧ್ಯತೆಯ ಬಗ್ಗೆ ಈ ಸಂದರ್ಭದಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ.

ಶ್ರೀಲಂಕಾದಲ್ಲಿ ಉತ್ಪಾದನೆಯಾಗುತ್ತಿರುವ ಹೆಚ್ಚುವರಿ ನವೀಕರಿಸಬಹುದಾದ ಇಂಧನವನ್ನು ಭಾರತಕ್ಕೆ ಮಾರಾಟ ಮಾಡುವ ವಾಣಿಜ್ಯ ಉದ್ಯಮದ ಬಗ್ಗೆಯೂ ಸಚಿವರ ಭೇಟಿಯ ಸಮಯದಲ್ಲಿ ಚರ್ಚಿಸಲಾಗುವುದು ಎಂದು ವಿಕ್ರಮಸಿಂಘೆ ಹೇಳಿದರು.

ಜೈಶಂಕರ್ ಅವರು ಜೂನ್ 20 ರಂದು ಕೊಲಂಬೊಗೆ ಆಗಮಿಸಲಿದ್ದಾರೆ ಎಂದು ಲಂಕಾ ವಿದೇಶಾಂಗ ಸಚಿವಾಲಯ ಶನಿವಾರ ಪ್ರಕಟಿಸಿದೆ. ಆದಾಗ್ಯೂ, ಜೈಶಂಕರ್ ಅವರ ಭೇಟಿಯ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯದಿಂದ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ. ಜೈಶಂಕರ್ ಶ್ರೀಲಂಕಾ ಭೇಟಿಗೆ ಆಗಮಿಸಿದರೆ, ಈ ತಿಂಗಳ ಆರಂಭದಲ್ಲಿ ಹೊಸ ಸರ್ಕಾರದಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ನೇಮಕಗೊಂಡ ನಂತರ ಇದು ಅವರ ಮೊದಲ ಅಧಿಕೃತ ವಿದೇಶ ಪ್ರವಾಸವಾಗಲಿದೆ.

ಮನ್ನಾರ್​ನಲ್ಲಿ ಅದಾನಿ ಗ್ರೂಪ್​ನ ಪವನ ವಿದ್ಯುತ್ ಯೋಜನೆ ಮತ್ತು ಪೂರ್ವ ಬಂದರು ಜಿಲ್ಲೆ ಟ್ರಿಂಕೋಮಲಿಯಲ್ಲಿ ಕೈಗಾರಿಕಾ ವಲಯ ಸ್ಥಾಪನೆ ಸೇರಿದಂತೆ ಶ್ರೀಲಂಕಾದಲ್ಲಿನ ಎಲ್ಲಾ ಭಾರತೀಯ ಯೋಜನೆಗಳ ಬಗ್ಗೆ ಭೇಟಿಯ ಸಮಯದಲ್ಲಿ ಚರ್ಚಿಸಲಾಗುವುದು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಶ್ರೀಲಂಕಾದ ಕಡಲು ಪ್ರದೇಶದಲ್ಲಿ ಭಾರತೀಯ ಮೀನುಗಾರರು ಅಕ್ರಮ ಮೀನುಗಾರಿಕೆ ನಡೆಸುತ್ತಿರುವ ವಿವಾದಾತ್ಮಕ ವಿಷಯವನ್ನು ಶ್ರೀಲಂಕಾ ಎತ್ತಲಿದೆ ಎಂದು ಮೀನುಗಾರಿಕಾ ಸಚಿವ ಡೌಗ್ಲಾಸ್ ದೇವಾನಂದ ಹೇಳಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ತಮಿಳುನಾಡಿನ್ನು ಶ್ರೀಲಂಕಾದಿಂದ ಬೇರ್ಪಡಿಸುವ ಕಿರಿದಾದ ನೀರಿನ ಪಟ್ಟಿಯಾದ ಪಾಕ್ ಜಲಸಂಧಿಯು ಎರಡೂ ದೇಶಗಳ ಮೀನುಗಾರರಿಗೆ ಸಮೃದ್ಧ ಮೀನುಗಾರಿಕೆ ತಾಣವಾಗಿದೆ. ಪರಸ್ಪರರ ಜಲ ಪ್ರದೇಶಕ್ಕೆ ಅತಿಕ್ರಮಣ ಮಾಡಿದ ಆರೋಪದ ಮೇಲೆ ಎರಡೂ ದೇಶಗಳ ಮೀನುಗಾರರನ್ನು ಆಗಾಗ ಬಂಧಿಸುವ ಘಟನೆಗಳು ನಡೆಯುತ್ತಿರುತ್ತವೆ.

ಇದನ್ನೂ ಓದಿ : ಸಾಮರ್ಥ್ಯ ಮೀರಿ ವಿಪರೀತ ಖರ್ಚು, ಒಟ್ಟು ಆರ್ಥಿಕತೆಯ ಶೇ 110ರಷ್ಟು ಸಾಲ! ಮಾಲ್ಡೀವ್ಸ್‌ಗೆ ವಿಶ್ವಬ್ಯಾಂಕ್ ಎಚ್ಚರಿಕೆ - Maldives Debt

ABOUT THE AUTHOR

...view details