ವಾಷಿಂಗ್ಟನ್:ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ನಾಮನಿರ್ದೇಶನ ರೇಸ್‌ನಲ್ಲಿ ಡೊನಾಲ್ಡ್ ಟ್ರಂಪ್ ಮುನ್ನಡೆಯುತ್ತಿದ್ದಾರೆ. ದಕ್ಷಿಣ ಕೆರೊಲಿನಾ ಪ್ರಾಥಮಿಕ ಚುನಾವಣೆಯಲ್ಲೂ ಟ್ರಂಪ್ ಗೆದ್ದಿದ್ದಾರೆ. ತವರು ರಾಜ್ಯದಲ್ಲಿ ನಿಕ್ಕಿ ಹ್ಯಾಲೆ ಸೋಲು ಅನುಭವಿಸಿದ್ದಾರೆ. ಟ್ರಂಪ್ ಈಗಾಗಲೇ ನ್ಯೂ ಹ್ಯಾಂಪ್‌ಶೈರ್, ನೆವಾಡಾ, ಅಯೋವಾ ಮತ್ತು ವರ್ಜಿನ್ದಲ್ಲಿ ಗೆದ್ದಿದ್ದಾರೆ.
ಈ ವರ್ಷದ ನವೆಂಬರ್‌ನಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗಳು ನಡೆಯಲಿವೆ. ಈ ಚುನಾವಣೆಗೂ ಮುನ್ನ ಅಧ್ಯಕ್ಷೀಯ ಅಭ್ಯರ್ಥಿಗಳು ಚುನಾವಣಾ ಪ್ರಚಾರವನ್ನು ತೀವ್ರಗೊಳಿಸಿದ್ದಾರೆ. ಏತನ್ಮಧ್ಯೆ, ದಕ್ಷಿಣ ಕೆರೊಲಿನಾದಲ್ಲಿ ನಡೆದ ರಿಪಬ್ಲಿಕನ್ ಪ್ರೈಮರಿ ಚುನಾವಣೆಯಲ್ಲಿ ಟ್ರಂಪ್ ತಮ್ಮ ಪ್ರತಿಸ್ಪರ್ಧಿ ನಿಕ್ಕಿ ಹ್ಯಾಲೆ ಅವರನ್ನು ಪರಾಭವಗೊಳಿಸಿದ್ದಾರೆ. ದಕ್ಷಿಣ ಕೆರೊಲಿನಾ ನಿಕ್ಕಿ ಹ್ಯಾಲೆ ಅವರ ತವರು ರಾಜ್ಯ ಆಗಿದೆ. ಇಲ್ಲಿಯೇ ಭರ್ಜರಿ ಜಯ ಗಳಿಸುವ ಮೂಲಕ ಟ್ರಂಪ್ ಅವರು ಜೋ ಬೈಡನ್ ಅವರನ್ನು ಎದುರಿಸಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಲು ಬಲವಾದ ಹೆಜ್ಜೆಗಳನ್ನು ಇಟ್ಟಿದ್ದಾರೆ.
ಇನ್ನೂ ನಿಕ್ಕಿ ಹ್ಯಾಲೆ ಸ್ಪರ್ಧೆಯಿಂದ ಹಿಂದೆ ಸರಿದಿಲ್ಲ. ಮಾರ್ಚ್ 5ರಂದು ಹಲವು ರಾಜ್ಯಗಳಲ್ಲಿ ಪ್ರಾಥಮಿಕ ಚುನಾವಣೆ ನಡೆಯಲಿದೆ. ಇದುವರೆಗಿನ ಫಲಿತಾಂಶಗಳ ಪ್ರಕಾರ ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಹಾಗೂ ಟ್ರಂಪ್ ನಡುವೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.
ಎರಡು ಬಾರಿ ರಾಜ್ಯಪಾಲರಾಗಿದ್ದ ಹ್ಯಾಲೆ: ಕ್ರಿಮಿನಲ್ ಆರೋಪಗಳ ಹೊರತಾಗಿಯೂ ಟ್ರಂಪ್ ಇಲ್ಲಿ ದೊಡ್ಡ ಮುನ್ನಡೆ ಸಾಧಿಸಿದ್ದಾರೆ. ಪಕ್ಷ ಪ್ರತಿನಿಧಿಗಳು ಮಾಜಿ ಅಧ್ಯಕ್ಷ ಟ್ರಂಪ್ ಅವರನ್ನು ಬೆಂಬಲಿಸಿದ್ದಾರೆ. ಮತ್ತೊಂದು ಕಡೆ ಎರಡು ಬಾರಿ ಗವರ್ನರ್ ಚುನಾವಣೆಯಲ್ಲಿ ಗೆದ್ದಿದ್ದ ಸೌತ್ ಕೆರೊಲಿನಾ ಮೂಲದ ಹ್ಯಾಲೆ ಅವರು ಟ್ರಂಪ್ ಅವರನ್ನು ಸೋಲಿಸಲು ಸಾಧ್ಯವಾಗಲಿಲ್ಲ. ರಿಪಬ್ಲಿಕನ್ ಪಕ್ಷದಲ್ಲಿ ಟ್ರಂಪ್‌ಗೆ ಸವಾಲೆಸೆದ ಏಕೈಕ ಅಭ್ಯರ್ಥಿ ಹ್ಯಾಲೆ. ಈ ಸೋಲಿನ ನಂತರ ಅವರು ಅಧ್ಯಕ್ಷೀಯ ಅಭ್ಯರ್ಥಿ ರೇಸ್‌ನಿಂದ ಹೊರಗುಳಿಯುವ ಸಾಧ್ಯತೆಯೂ ಹೆಚ್ಚಿದೆ.
ಭರವಸೆ ಬಿಡದ ಹ್ಯಾಲೆ ಅವರು ಈ ವಾರ ತಮ್ಮ ಪ್ರಚಾರವನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ. ಮಾರ್ಚ್ 5 ರಂದು 15 ರಾಜ್ಯಗಳಲ್ಲಿ ನಡೆಯಲಿರುವ ಪ್ರಾಥಮಿಕ ಚುನಾವಣೆಯಲ್ಲಿ ರಿಪಬ್ಲಿಕನ್ನರು ತಮ್ಮ ಪರವಾಗಿ ಮತ ಚಲಾಯಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟ್ರಂಪ್‌ಗೆ ನಿರಂತರ ಗೆಲುವು:ರಿಪಬ್ಲಿಕನ್ ಪಕ್ಷದಿಂದ ಅಧಿಕೃತ ಅಧ್ಯಕ್ಷೀಯ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಟ್ರಂಪ್ ನ್ಯೂ ಹ್ಯಾಂಪ್‌ಶೈರ್ ಪ್ರಾಥಮಿಕ ಚುನಾವಣೆಯಲ್ಲಿ ಗೆದ್ದಿದ್ದರು. ನ್ಯೂ ಹ್ಯಾಂಪ್‌ಶೈರ್ ಪ್ರಾಥಮಿಕ ಚುನಾವಣೆಯಲ್ಲಿ ಒಟ್ಟು ಶೇಕಡಾ 75 ಮತಗಳು ಚಲಾವಣೆಯಾದ್ದವು. ಅದರಲ್ಲಿ ಟ್ರಂಪ್ ಸುಮಾರು ಶೇ 54.4 ರಷ್ಟು ಮತಗಳನ್ನು ಪಡೆದಿದ್ದರು. ಹ್ಯಾಲೆ 43.3 ರಷ್ಟು ಮತಗಳನ್ನು ಗಳಿಸಿದ್ದರು. ಅಯೋವಾ ಕಾಕಸ್ ನಂತರ ನ್ಯೂ ಹ್ಯಾಂಪ್‌ಶೈರ್ ಪ್ರಾಥಮಿಕ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಟ್ರಂಪ್ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಲು ತಮ್ಮ ಸ್ಥಾನ ಬಲಪಡಿಸಿಕೊಂಡಿದ್ದರು.
ಇತ್ತೀಚೆಗಷ್ಟೇ ಜರುಗಿದ್ದ ನೆವಡಾ ರಾಜ್ಯದಲ್ಲಿ ಚುನಾವಣೆಯಲ್ಲೂ ಡೊನಾಲ್ಡ್ ಟ್ರಂಪ್ ವಿಜಯ ಸಾಧಿಸಿದ್ದರು. ಈ ಚುನಾವಣೆಯಿಂದ ದೂರ ಉಳಿದಿದ್ದ ನಿಕ್ಕಿ ಹ್ಯಾಲೆ, ''ಈ ಚುನಾವಣೆ ನ್ಯಾಯಯುತವಾಗಿ ನಡೆದಿಲ್ಲ. ಡೊನಾಲ್ಡ್ ಟ್ರಂಪ್‌ಗೆ ಅನುಕೂಲಕರವಾಗುವಂತೆ ಇತ್ತು'' ಎಂದು ಗಂಭೀರ ಆರೋಪ ಮಾಡಿದ್ದರು. ನೆವಡಾದಲ್ಲಿ ಗೆಲುವು ಸಾಧಿಸಿದ್ದ ಟ್ರಂಪ್‌ಗೆ ರಾಜ್ಯದ ಎಲ್ಲ 26 ಪ್ರತಿನಿಧಿಗಳ ಬೆಂಬಲ ಪಡೆದುಕೊಂಡಿದ್ದರು. ಅಯೋವಾ, ನ್ಯೂ ಹ್ಯಾಂಪ್‌ಶೈರ್, ನೆವಾಡಾ, ಯುಎಸ್ ವರ್ಜಿನ್ ಐಲ್ಯಾಂಡ್ಸ್ ಮತ್ತು ಹ್ಯಾಲೆ ಅವರ ತವರು ರಾಜ್ಯ ಸೌತ್ ಕೆರೊಲಿನಾದಲ್ಲಿ ಟ್ರಂಪ್ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಂಡಿದ್ದಾರೆ.
ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಳ್ಳುವುದಕ್ಕೆ ಟ್ರಂಪ್‌ಗೆ 1,215 ಪ್ರತಿನಿಧಿಗಳ ಬೆಂಬಲ ಪಡೆದುಕೊಳ್ಳಬೇಕಿದೆ. ಮಾರ್ಚ್ ತಿಂಗಳ ವೇಳೆಗೆ ಟ್ರಂಪ್ ಈ ಸಂಖ್ಯೆಯ ಪ್ರತಿನಿಧಿಗಳ ಬೆಂಬಲವನ್ನು ಗಳಿಸುವ ಸಾಧ್ಯತೆ ಹೆಚ್ಚಿದೆ. 2016ರಲ್ಲಿ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಮೊದಲ ಬಾರಿಗೆ ನೇಮಕ ಆಗಿದ್ದರು. 2020ರಲ್ಲಿ ಸೋಲು ಅನುಭವಿಸಿದ್ದರು. ಇದೀಗ 2024ರಲ್ಲಿ ಮತ್ತೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಲು ಬಯಸಿದ್ದಾರೆ.
ಇದನ್ನೂ ಓದಿ:ಉಕ್ರೇನ್ ಮರುನಿರ್ಮಾಣಕ್ಕೆ ಕೆನಡಾದಿಂದ $130 ಮಿಲಿಯನ್ ಧನಸಹಾಯ