ಮಾಸ್ಕೋ(ರಷ್ಯಾ):ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಸೋಮವಾರ ರಾಜಧಾನಿ ಮಾಸ್ಕೋ ಹೊರವಲಯದಲ್ಲಿರುವ ತಮ್ಮ ಅಧಿಕೃತ ನಿವಾಸ ನೊವೊ-ಒಗರಿಯೋವೊಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
"ಪ್ರಧಾನಿಯಾಗಿ ಮರು ಆಯ್ಕೆಯಾಗಿರುವ ನಿಮ್ಮನ್ನು ಅಭಿನಂದಿಸುತ್ತೇನೆ. ಇದು ನಿಮ್ಮ ಹಲವು ವರ್ಷಗಳ ಕೆಲಸದ ಫಲಿತಾಂಶ" ಎಂದು ನಂತರ ನಡೆದ ಅನೌಪಚಾರಿಕ ಮಾತುಕತೆಯಲ್ಲಿ ಮೋದಿಯನ್ನು ಕೊಂಡಾಡಿದರು.
"ನೀವು ಸ್ವಂತ ಆಲೋಚನೆಗಳನ್ನು ಹೊಂದಿದ್ದೀರಿ. ಶಕ್ತಿಯುತ ವ್ಯಕ್ತಿ ಕೂಡಾ. ಭಾರತ ಮತ್ತು ಭಾರತೀಯರ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತಿದ್ದೀರಿ" ಎಂದು ಇದೇ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
''ತಮ್ಮ ಇಡೀ ಜೀವನವನ್ನು ಸಾರ್ವಜನಿಕ ಸೇವೆಗೆ ಮೀಸಲಿಟ್ಟಿದ್ದೀರಿ. ದೇಶಕ್ಕಾಗಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದೀರಿ'' ಎಂದು ಪುಟಿನ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, "ನೀವು ಹೇಳಿದ್ದು ಸರಿ. ನನ್ನಲ್ಲಿ ಇರುವುದು ಒಂದೇ ಗುರಿ. ಅದು ನನ್ನ ದೇಶದ ಜನರ ಅಭಿವೃದ್ಧಿ" ಎಂದರು.
ಇದಾದ ನಂತರ ಪುಟಿನ್ ಸ್ವತ: ಎಲೆಕ್ಟ್ರಿಕ್ ವಾಹನ ಚಲಾಯಿಸುತ್ತಾ ಮೋದಿ ಅವರನ್ನು ತಮ್ಮ ನಿವಾಸದ ಉದ್ಯಾನದಲ್ಲಿ ಸುತ್ತಾಡಿಸಿದರು. ಕೆಲಹೊತ್ತು ಕಾಲ್ನಡಿಗೆಯಲ್ಲೂ ಸಂಚರಿಸಿದರು. ಈ ಸಂದರ್ಭದಲ್ಲಿ ಇಬ್ಬರೂ ಪರಸ್ಪರ ಇಂಗ್ಲಿಷ್‌ನಲ್ಲಿ ಸಂಭಾಷಣೆ ನಡೆಸಿದ್ದಾರೆ.
ಆತಿಥ್ಯಕ್ಕೆ ಮೋದಿ ಕೃತಜ್ಞತೆ:ಈ ಕುರಿತು 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಆತಿಥ್ಯಕ್ಕಾಗಿ ಪುಟಿನ್ ಅವರಿಗೆ ಕೃತಜ್ಞತೆಗಳು. ಇಂದಿನ ಮಾತುಕತೆಗಾಗಿ ಇಬ್ಬರೂ ಉತ್ಸುಕತೆಯಿಂದ ಕಾಯುತ್ತಿದ್ದೇವೆ. ಭಾರತ ಮತ್ತು ರಷ್ಯಾ ನಡುವಿನ ಸೌಹಾರ್ದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಇದು ಖಂಡಿತವಾಗಿಯೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ರಷ್ಯಾಕ್ಕೆ ಬಂದಿಳಿದ ಪ್ರಧಾನಿ ಮೋದಿ: ಚೀನಾಕ್ಕೆ ಭಾರತದಿಂದ ತೀಕ್ಷ್ಣ ಸಂದೇಶ ರವಾನೆ - PM Modi Russia Visit