ಢಾಕಾ, ಬಾಂಗ್ಲಾದೇಶ: ಭಾರತಕ್ಕೆ ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ಭಾರತದ ಈಶಾನ್ಯ ರಾಜ್ಯಗಳಲ್ಲಿ ಬಂಡಾಯ ಉತ್ತೇಜಿಸಲು ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಿದ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಬಾಂಗ್ಲಾದೇಶದ ಮಾಜಿ ಸಚಿವ ಲುಟ್ಫೋಝಮಾನ್ ಬಾಬರ್ ಈತನನ್ನು ಗುರುವಾರ ಢಾಕಾದ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ.
ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರದ ಈ ಮತ್ತೊಂದು ವಿವಾದಾತ್ಮಕ ನಿರ್ಧಾರದಿಂದ ಈಗಾಗಲೇ ಅಸ್ಥಿರತೆಯಿಂದ ಬಳಲುತ್ತಿರುವ ಬಾಂಗ್ಲಾದೇಶದ ಮೂಲಭೂತವಾದಿ ಶಕ್ತಿಗಳಿಗೆ ಮತ್ತಷ್ಟು ಬಲ ತುಂಬಲಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಬಾಬರ್ 2004 ರಲ್ಲಿ ಖಲೀದಾ ಜಿಯಾ ನೇತೃತ್ವದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ) ಜಮಾತ್-ಎ-ಇಸ್ಲಾಮಿ ಮೈತ್ರಿ ಸರ್ಕಾರದಲ್ಲಿ ಗೃಹ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಮೇಲೆ ಗ್ರೆನೇಡ್ ದಾಳಿ ಮತ್ತು ಭಾರತದಿಂದ ಅಸ್ಸಾಂ ರಾಜ್ಯವನ್ನು ಪ್ರತ್ಯೇಕಗೊಳಿಸಲು ಕೆಲಸ ಮಾಡುತ್ತಿರುವ ನಿಷೇಧಿತ ಭಯೋತ್ಪಾದಕ ಸಂಘಟನೆ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ (ಉಲ್ಫಾ) ಗೆ ಚಿತ್ತಗಾಂಗ್ ಮೂಲಕ 10 ಟ್ರಕ್ ಲೋಡ್ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ಸಾಗಿಸಿದ ಆರೋಪದ ಮೇಲೆ ಇವರನ್ನು ಮೇ 2007 ರಲ್ಲಿ ಬಂಧಿಸಲಾಗಿತ್ತು.
ಮರಣದಂಡನೆಗೆ ಒಳಗಗಾಗಿದ್ದ ಬಾಬರ್: ಶಸ್ತ್ರಾಸ್ತ್ರ ಕಾಯ್ದೆ ಮತ್ತು ವಿಶೇಷ ಅಧಿಕಾರ ಕಾಯ್ದೆಯಡಿ ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆಗೊಳಗಾಗಿದ್ದ ಈತ ಜೈಲಿನಲ್ಲಿ ಬಂಧಿಯಾಗಿದ್ದ. ಆದರೆ ಕಳೆದ ವರ್ಷದ ಆಗಸ್ಟ್ನಲ್ಲಿ ಹಸೀನಾ ಸರ್ಕಾರ ಪತನವಾಗಿ ಯೂನುಸ್ ನೇತೃತ್ವದ ಮಧ್ಯಂತರ ಆಡಳಿತ ಜಾರಿಗೆ ಬಂದ ನಂತರ ಈತನ ಮೇಲಿನ ಮೇಲಿರುವ ಹಲವಾರು ಪ್ರಕರಣಗಳನ್ನು ಕೈಬಿಡುವ ಪ್ರಕ್ರಿಯೆ ಆರಂಭಿಸಲಾಗಿತ್ತು.
ಕಳೆದ ತಿಂಗಳು, ವಿಶೇಷ ಅಧಿಕಾರ ಕಾಯ್ದೆ ಪ್ರಕರಣದಲ್ಲಿ ಬಾಬರ್ ಮತ್ತು ಇತರ ಆರು ಜನರನ್ನು ಹೈಕೋರ್ಟ್ ಖುಲಾಸೆಗೊಳಿಸಿದ್ದರೆ, ಉಲ್ಫಾ ಮುಖ್ಯಸ್ಥ ಪರೇಶ್ ಬರುವಾ ಅವರ ಶಿಕ್ಷೆಯನ್ನು ಮರಣದಂಡನೆಯಿಂದ ಜೀವಾವಧಿ ಶಿಕ್ಷೆಗೆ ಇಳಿಸಲಾಯಿತು.
ಅಪಾಯಕಾರಿ ವ್ಯಕ್ತಿಯ ಬಿಡುಗಡೆಗೆ ಜನರ ಆಕ್ರೋಶ: ಬಾಬರ್ ಬಿಡುಗಡೆ ನಿರ್ಧಾರವನ್ನು ತೀವ್ರವಾಗಿ ಟೀಕಿಸಿರುವ ಹಲವಾರು ಬಾಂಗ್ಲಾದೇಶಿಯರು, ನ್ಯಾಯ ಮತ್ತು ಕಾನೂನುಬಾಹಿರತೆಯನ್ನು ರಾಜಕೀಯಗೊಳಿಸುವುದು ರೂಢಿಯಾಗಿಬಿಟ್ಟಿರುವ ದೇಶದಲ್ಲಿ ಇದು ಕಾನೂನುಬಾಹಿರ ಸರ್ಕಾರ ಮತ್ತು ಅದರ ಕೈಗೊಂಬೆ ನ್ಯಾಯಾಂಗ ಆಯೋಜಿಸಿದ ಮತ್ತೊಂದು ಅವಮಾನಕರ ಕೃತ್ಯ ಎಂದು ಬಣ್ಣಿಸಿದ್ದಾರೆ. ಬಾಂಗ್ಲಾದೇಶದ ನ್ಯಾಯಾಂಗವು ಈಗ ಬಿಎನ್ ಪಿಯನ್ನು ರಕ್ಷಿಸುವ ಸಾಧನವಾಗಿ ಮಾತ್ರ ಉಳಿದುಕೊಂಡಿದೆ ಎಂದು ಜನ ಆರೋಪಿಸುತ್ತಿದ್ದಾರೆ.
"10 ಟ್ರಕ್ ಶಸ್ತ್ರಾಸ್ತ್ರ ಸಾಗಣೆ ಪ್ರಕರಣದಲ್ಲಿ ಲುಟ್ಫೋಝಮಾನ್ ಬಾಬರ್ ಮತ್ತು ಇತರರನ್ನು ಖುಲಾಸೆಗೊಳಿಸಿರುವುದು ದಕ್ಷಿಣ ಏಷ್ಯಾದ ಅತಿದೊಡ್ಡ ಶಸ್ತ್ರಾಸ್ತ್ರ ಸಾಗಣೆಯ ಪ್ರಕರಣದಲ್ಲಿನ ಸಾಕಷ್ಟು ಪುರಾವೆಗಳನ್ನು ಹೈಕೋರ್ಟ್ ನಿರ್ಲಕ್ಷಿಸಿದಂತಾಗಿದೆ. ಈ ಶಸ್ತ್ರಾಸ್ತ್ರಗಳು ಉಲ್ಫಾ ಮತ್ತು ಎನ್ಎಸ್ಸಿಎನ್-ಐಎಂನಂತಹ ದಂಗೆಕೋರ ಗುಂಪುಗಳಿಗೆ ಮೀಸಲಾಗಿದ್ದು, ರಾಷ್ಟ್ರೀಯ ಮತ್ತು ಪ್ರಾದೇಶಿಕ ಭದ್ರತೆಗೆ ಗಂಭೀರ ಬೆದರಿಕೆಯನ್ನುಂಟುಮಾಡುತ್ತವೆ. ದಕ್ಷಿಣ ಏಷ್ಯಾ ಪ್ರದೇಶದ ಭದ್ರತೆ ಮತ್ತು ಸ್ಥಿರತೆ ಈಗ ದಶಕಗಳಲ್ಲಿಯೇ ಅತ್ಯಂತ ದುರ್ಬಲವಾಗಿದೆ ಎಂಬ ಆತಂಕವನ್ನು ಈ ಬೆಳವಣಿಗೆ ಮತ್ತಷ್ಟು ಬಲಪಡಿಸಿದೆ" ಎಂದು ಬಾಂಗ್ಲಾದೇಶ ವಿದ್ಯಾರ್ಥಿ ಲೀಗ್ ಅಧ್ಯಕ್ಷ ಹುಸೇನ್ ಸದ್ದಾಂ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ವಾರದ ಆರಂಭದಲ್ಲಿ, ಬಾಬರ್ ಅವರನ್ನು 10 ಟ್ರಕ್ ಶಸ್ತ್ರಾಸ್ತ್ರ ಸಾಗಣೆ ಪ್ರಕರಣದಲ್ಲಿ ಖುಲಾಸೆಗೊಳಿಸಲಾಯಿತು. ಈ ಮೂಲಕ ಎಲ್ಲಾ ಕಾನೂನು ಕಟ್ಟಳೆಗಳು ಕೊನೆಗೊಂಡು 17 ವರ್ಷಗಳ ನಂತರ ಗುರುವಾರ ಬಾಬರ್ ಬಿಡುಗಡೆಗೆ ದಾರಿ ಮಾಡಿ ಕೊಡಲಾಗಿದೆ.