ವಾಷಿಂಗ್ಟನ್(ಅಮೆರಿಕ): ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕರಿಸಿದ ಮರುದಿನ ಅಂದರೆ ಜ.21 ರಂದು ಕ್ವಾಡ್ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ನಡೆಯಲಿದೆ. ಇದು ಹೊಸ ಸರ್ಕಾರದ ವಿದೇಶಾಂಗ ನೀತಿಯ ಪ್ರಮುಖ ಹೆಜ್ಜೆಯಾಗಿದೆ ಎಂದು ವರದಿಯಾಗಿದೆ. ಭಾರತ, ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕ ಕ್ವಾಡ್ ಸದಸ್ಯ ರಾಷ್ಟ್ರಗಳಾಗಿವೆ.
ಸೋಮವಾರ (ಜನವರಿ 20ರಂದು) ಟ್ರಂಪ್ ಎರಡನೇ ಅವಧಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ವಿದೇಶಾಂಗ ಸಚಿವ ಎಸ್. ಜೈಶಂಕರ್, ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಮತ್ತು ಜಪಾನ್ ವಿದೇಶಾಂಗ ಸಚಿವ ತಕೇಶಿ ಇವಾಯಾ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ತಮ್ಮ ದೇಶಗಳನ್ನು ಪ್ರತಿನಿಧಿಸಲಿದ್ದಾರೆ.
'ಇಂಡೋ -ಪೆಸಿಫಿಕ್ ವಿಷಯದಲ್ಲಿ ಅಮೆರಿಕದ ಬದ್ಧತೆಯು ಹೊಸ ಆಡಳಿತದಲ್ಲಿ ಬದಲಾಗುವುದಿಲ್ಲ' ಎಂಬುದನ್ನು ಸಾರಲು ಕ್ವಾಡ್ ವಿದೇಶಾಂಗ ಸಚಿವರ ಸಭೆಗೆ ಉದ್ದೇಶಿಸಲಾಗಿದೆ ಎಂದು ತಿಳಿದು ಬಂದಿದೆ. ಇದು ವಿದೇಶಿ ನಾಯಕರೊಂದಿಗೆ ಹೊಸ ಆಡಳಿತದ ಮೊದಲ ಪ್ರಮುಖ ಸಂವಾದ ಮತ್ತು ಸಭೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಅಮೆರಿಕ ಕಾಂಗ್ರೆಸ್, ಮಾರ್ಕೊ ರುಬಿಯೊ ಅವರನ್ನು ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಿಸಲಿದ್ದು, ಸೋಮವಾರ ಸಂಜೆ ಅವರೂ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಮಾರ್ಕೊ ರುಬಿಯೊ ಅವರನ್ನು ಅಮೆರಿಕದ ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಅಲ್ಲಿನ ಸಂಸತ್ತಾದ ಕಾಂಗ್ರೆಸ್ ನೇಮಿಸುವ ನಿರೀಕ್ಷೆಯಿದೆ ಮತ್ತು ಸೋಮವಾರ ಸಂಜೆ ಅವರು ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ.
"ಕ್ವಾಡ್ ವಿದೇಶಾಂಗ ಸಚಿವರ ಸಭೆಯು ವಿದೇಶಾಂಗ ಸಂಬಂಧಕ್ಕೆ ಉತ್ತಮ ಸಂಕೇತವಾಗಿದೆ ಮತ್ತು ಕ್ವಾಡ್ ದೇಶಗಳ ನಡುವಿನ ನಿರಂತರ ಸಂಬಂಧವನ್ನು ಇದು ತೋರಿಸುತ್ತದೆ. ಟ್ರಂಪ್ ಅವರ ಮೊದಲ ಅವಧಿಯಲ್ಲಿ ಕ್ವಾಡ್ ಪುನರಾರಂಭವಾಯಿತು. ಇದು ಸಕಾರಾತ್ಮಕ ಸಂಕೇತ" ಎಂದು ಒಆರ್‌ಎಫ್ ಅಮೆರಿಕದ ಕಾರ್ಯನಿರ್ವಾಹಕ ನಿರ್ದೇಶಕ ಧ್ರುವ ಜೈಶಂಕರ್ ತಿಳಿಸಿದ್ದಾರೆ.
ಇದನ್ನೂ ಓದಿ: ಬಹುದಿನಗಳ ಕನಸು ನನಸು: ಬೆಂಗಳೂರಿನಲ್ಲಿ ಅಮೆರಿಕ ಕಾನ್ಸುಲೇಟ್ ಉದ್ಘಾಟನೆ
ಇದನ್ನೂ ಓದಿ: ನಾನು ಟ್ರಂಪ್ ಸೋಲಿಸುತ್ತಿದ್ದೆ: ಅಧ್ಯಕ್ಷ ಜೋ ಬೈಡನ್