ಇಸ್ಲಾಮಾಬಾದ್ (ಪಾಕಿಸ್ತಾನ) : ಅಲ್-ಖಾದಿರ್ ಟ್ರಸ್ಟ್ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಅವರನ್ನು ದೋಷಿಗಳೆಂದು ಪಾಕಿಸ್ತಾನದ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ. ಅವರಿಗೆ ಕ್ರಮವಾಗಿ 14 ಮತ್ತು 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ವಿವಿಧ ಕಾರಣಗಳಿಂದ ಮೂರು ಬಾರಿ ಮುಂದೂಡಲ್ಪಟ್ಟ ತೀರ್ಪನ್ನು ಇಂದು ಭ್ರಷ್ಟಾಚಾರ ವಿರೋಧಿ ನ್ಯಾಯಾಲಯದ ನ್ಯಾಯಾಧೀಶ ನಾಸಿರ್ ಜಾವೇದ್ ರಾಣಾ ಪ್ರಕಟಿಸಿದ್ದಾರೆ. ಆದಿಲಾ ಜೈಲಿನಲ್ಲಿ ಸ್ಥಾಪಿಸಲಾದ ತಾತ್ಕಾಲಿಕ ನ್ಯಾಯಾಲಯದಲ್ಲಿ ನ್ಯಾಯಾಧೀಶರು ತೀರ್ಪು ಪ್ರಕಟಿಸಿದರು.
ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (NAB) ಡಿಸೆಂಬರ್ 2023ರಲ್ಲಿ ಖಾನ್ (72), ಬೀಬಿ (50) ಮತ್ತು ಇತರ ಆರು ಜನರ ವಿರುದ್ಧ ಪ್ರಕರಣವನ್ನು ದಾಖಲಿಸಿತ್ತು. ಅವರು ದೇಶದ ಖಜಾನೆಗೆ 190 ಮಿಲಿಯನ್ ಪೌಂಡ್ಗಳಷ್ಟು (PRs50 ಶತಕೋಟಿ) ನಷ್ಟ ಉಂಟುಮಾಡಿದ್ದಾರೆ ಎಂದು ಆರೋಪಿಸಿತ್ತು.
ಒಬ್ಬ ಉದ್ಯಮಿ ಸೇರಿದಂತೆ ಉಳಿದವರೆಲ್ಲರೂ ದೇಶದಿಂದ ಹೊರಗಿರುವ ಕಾರಣ ಖಾನ್ ಮತ್ತು ಬೀಬಿ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.
ವ್ಯವಹಾರವೊಂದರ ಇತ್ಯರ್ಥದ ನಂತರ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಂದ 50 ಶತಕೋಟಿ ರೂಪಾಯಿಯನ್ನ ಬ್ರಿಟನ್ನ ರಾಷ್ಟ್ರೀಯ ಅಪರಾಧ ಸಂಸ್ಥೆಯು ಪಾಕಿಸ್ತಾನಕ್ಕೆ ಹಿಂದುರಿಗಿಸಿತ್ತು. ಆ ಹಣವನ್ನ ಇಮ್ರಾನ್ ಖಾನ್ ದಂಪತಿ ಮತ್ತಿತರರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಆರೋಪವಾಗಿದೆ. ಆದರೆ, ಬೀಬಿ ಮತ್ತು ಖಾನ್ಗೆ ವಿಶ್ವವಿದ್ಯಾನಿಲಯ ಸ್ಥಾಪಿಸಲು ಸಹಾಯ ಮಾಡಿದ ಉದ್ಯಮಿಯ ವೈಯಕ್ತಿಕ ಲಾಭಕ್ಕಾಗಿ ಈ ಹಣ ಕೊಡಲಾಗಿದೆ ಎಂದು ಆರೋಪಿಸಲಾಗಿದೆ.
ಬೀಬಿ ಅವರು ಅಲ್ - ಖಾದಿರ್ ಟ್ರಸ್ಟ್ನ ಟ್ರಸ್ಟಿಯಾಗಿ, ಝೀಲಂನಲ್ಲಿರುವ ಅಲ್ - ಖಾದಿರ್ ವಿಶ್ವವಿದ್ಯಾನಿಲಯಕ್ಕಾಗಿ 458 (57 ಎಕರೆ) ಕನಾಲ್ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವುದು ಸೇರಿದಂತೆ ಹಲವು ಲಾಭ ಪಡೆದ ಆರೋಪವಿದೆ.
ಇದನ್ನೂ ಓದಿ : ರಣರಂಗವಾದ ಇಸ್ಲಾಮಾಬಾದ್: ಗುಂಡಿಕ್ಕುವ ಆದೇಶಕ್ಕೂ ಜಗ್ಗದ ಇಮ್ರಾನ್ ಖಾನ್ ಬೆಂಬಲಿಗರು, 6 ಪೊಲೀಸರ ಸಾವು - VIOLENT CLASHES IN ISLAMABAD