ಉಲಾನ್ ಬಾತರ್, ಮಂಗೋಲಿಯಾ: ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಂಗಳವಾರ ಮಂಗೋಲಿಯಾಕ್ಕೆ ಆಗಮಿಸಿದ್ದಾರೆ. ಉಕ್ರೇನ್ ಮೇಲೆ ದಾಳಿ ಮಾಡಿದ್ದಕ್ಕಾಗಿ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ನಿಂದ (ಐಸಿಸಿ) ಅರೆಸ್ಟ್ ವಾರಂಟ್ ಇರುವುದನ್ನು ಲೆಕ್ಕಿಸದೇ ಪುಟಿನ್ ಮಂಗೋಲಿಯಾಗೆ ಭೇಟಿ ನೀಡಿದ್ದಾರೆ. ಏತನ್ಮಧ್ಯೆ ಮಂಗೋಲಿಯಾ ಕೂಡ ಐಸಿಸಿ ಆದೇಶಕ್ಕೆ ಯಾವುದೇ ಬೆಲೆ ನೀಡಿದಂತಿಲ್ಲ.
ಸುಮಾರು 18 ತಿಂಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ಪುಟಿನ್ ವಿರುದ್ಧ ವಾರಂಟ್ ಹೊರಡಿಸಿತ್ತು. ಅದಾದ ನಂತರ ಐಸಿಸಿಯ ಸದಸ್ಯ ರಾಷ್ಟ್ರವೊಂದಕ್ಕೆ ಪುಟಿನ್ ಅವರ ಮೊದಲ ಭೇಟಿ ಇದಾಗಿದೆ.
ಪುಟಿನ್ ಅವರನ್ನು ಬಂಧಿಸಿ ಹೇಗ್ನಲ್ಲಿರುವ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ಗೆ ಹಸ್ತಾಂತರಿಸುವಂತೆ ಪುಟಿನ್ ಭೇಟಿಗೆ ಮುನ್ನ ಉಕ್ರೇನ್ ಮಂಗೋಲಿಯಾಗೆ ಮನವಿ ಮಾಡಿತ್ತು. ಮಂಗೋಲಿಯಾ ವಾರಂಟ್ ಅನ್ನು ಜಾರಿಗೊಳಿಸದಿರುವುದಕ್ಕೆ ಯುರೋಪಿಯನ್ ಯುನಿಯನ್ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ. ವಾರಂಟ್ ಬಗ್ಗೆ ರಷ್ಯಾ ತಲೆಕೆಡಿಸಿಕೊಂಡಿಲ್ಲ ಎಂದು ಪುಟಿನ್ ವಕ್ತಾರರು ಕಳೆದ ವಾರ ಹೇಳಿದ್ದರು.
ಪುಟಿನ್ ವಿರುದ್ಧದ ವಾರಂಟ್ ಮಂಗೋಲಿಯನ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಐಸಿಸಿಯ ಮೂಲ ಕಾಯ್ದೆ ರೋಮ್ ಶಾಸನದ ಪ್ರಕಾರ ಸದಸ್ಯ ರಾಷ್ಟ್ರಗಳು ಅರೆಸ್ಟ್ ವಾರಂಟ್ ಹೊರಡಿಸಲಾದ ವ್ಯಕ್ತಿಯನ್ನು ಬಂಧಿಸುವುದು ಕಡ್ಡಾಯವಾಗಿದೆ. ಆದರೆ, ರಷ್ಯಾದ ಗಡಿಯಲ್ಲಿರುವ ಎಲ್ಲಾ ಕಡೆಯಿಂದಲೂ ಭೂಮಿಯಿಂದ ಸುತ್ತುವರೆಯಲ್ಪಟ್ಟಿರುವ ಮಂಗೋಲಿಯಾ, ಇಂಧನ ಮತ್ತು ಒಂದಿಷ್ಟು ಪ್ರಮಾಣದ ವಿದ್ಯುತ್ತಿಗಾಗಿ ರಷ್ಯಾದ ಮೇಲೆ ಅವಲಂಬಿತವಾಗಿದೆ.