ಜೆರುಸಲೇಂ(ಇಸ್ರೇಲ್): ಲಿಟಾನಿ ನದಿಯ ಉತ್ತರ ದಿಕ್ಕಿನಲ್ಲಿ ನಿಯೋಜಿಸಲಾಗಿರುವ ಪಡೆಗಳನ್ನು ಹಿಂತೆಗೆದುಕೊಳ್ಳದಿದ್ದರೆ ಇಸ್ರೇಲ್ ಕದನ ವಿರಾಮ ಒಪ್ಪಂದವನ್ನು ಮುರಿಯಲಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹಿಜ್ಬುಲ್ಲಾಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಕದನ ವಿರಾಮದ ನಿಯಮಗಳ ಪ್ರಕಾರ, ಲಿಟಾನಿ ನದಿಯ ಉತ್ತರ ದಿಕ್ಕಿನಲ್ಲಿ ನಿಯೋಜಿಸಲಾಗಿರುವ ಹೋರಾಟಗಾರರು ಮತ್ತು ಶಸ್ತ್ರಾಸ್ತ್ರಗಳನ್ನು ಜನವರಿ 26ರೊಳಗೆ ಹಿಜ್ಬುಲ್ಲಾ ಹಿಂತೆಗೆದುಕೊಳ್ಳಬೇಕಿದೆ. ಅದೇ ದಿನಾಂಕದೊಳಗೆ, ವಿಶ್ವಸಂಸ್ಥೆ ಗುರುತಿಸಿರುವ ಲೆಬನಾನ್ ಮತ್ತು ಇಸ್ರೇಲ್ ನಡುವಿನ ಗಡಿಯಾಗಿರುವ ಬ್ಲೂ ಲೈನ್ನ ದಕ್ಷಿಣ ದಿಕ್ಕಿನಿಂದ ಇಸ್ರೇಲ್ ಕೂಡ ತನ್ನ ಪಡೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕಿದೆ. ನಂತರ ಈ ಪ್ರದೇಶದಲ್ಲಿ ಲೆಬನಾನ್ ಸೇನೆ ತನ್ನ ಪಡೆಗಳನ್ನು ನಿಯೋಜಿಸಲಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇಸ್ರೇಲ್ನ ಉತ್ತರ ಕಮಾಂಡ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಭಾನುವಾರ ಮಾತನಾಡಿದ ಕಾಟ್ಜ್, ಇಸ್ರೇಲ್ ಲೆಬನಾನ್ ಒಪ್ಪಂದವನ್ನು ಎತ್ತಿಹಿಡಿಯಲು ಬಯಸುತ್ತದೆ ಎಂದು ಹೇಳಿದರು. ಆದರೆ ಈಗಲೂ ಹಿಜ್ಬುಲ್ಲಾ ತನ್ನ ಪಡೆಗಳನ್ನು ವಾಪಸು ಕರೆಸಿಕೊಂಡಿಲ್ಲ, ಹಿಜ್ಬುಲ್ಲಾ ಷರತ್ತು ಪಾಲಿಸದಿದ್ದರೆ ಶಾಂತಿ ಒಪ್ಪಂದ ಜಾರಿಯಲ್ಲಿರುವುದಿಲ್ಲ ಎಂದು ಅವರು ತಿಳಿಸಿದರು.
2023ರ ಅಕ್ಟೋಬರ್ನಲ್ಲಿ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಕದನ ಆರಂಭವಾಗಿತ್ತು. ಶಾಂತಿ ಒಪ್ಪಂದದ ನಂತರ ಯುದ್ಧ ನಿಂತಿದೆಯಾದರೂ, ಇಸ್ರೇಲ್ ಈಗಲೂ ಲೆಬನಾನ್ ಮೇಲೆ ಸೀಮಿತ ದಾಳಿಗಳನ್ನು ಮುಂದುವರೆಸಿದೆ. ಕದನ ವಿರಾಮ ಉಲ್ಲಂಘಿಸುತ್ತಿರುವ ಹಿಜ್ಬುಲ್ಲಾ ನೆಲೆಗಳ ಮೇಲೆ ಮಾತ್ರ ಸೀಮಿತ ದಾಳಿ ನಡೆಸುತ್ತಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ. ಆದರೆ ಇಸ್ರೇಲ್ ಹಲವಾರು ಬಾರಿ ಕದನ ವಿರಾಮ ಉಲ್ಲಂಘಿಸಿದೆ ಎಂದು ಲೆಬನಾನ್ ಮತ್ತು ಫ್ರಾನ್ಸ್ ಆರೋಪಿಸಿವೆ.
ಲೆಬನಾನ್ನಲ್ಲಿ ಕದನ ವಿರಾಮ ಒಪ್ಪಂದವನ್ನು ಮುರಿಯುವಂಥ ಎಲ್ಲಾ ಕ್ರಮಗಳನ್ನು ನಿಲ್ಲಿಸಬೇಕೆಂದು ಲೆಬನಾನ್ನಲ್ಲಿನ ವಿಶ್ವಸಂಸ್ಥೆಯ ಮಧ್ಯಂತರ ಪಡೆ (ಯುಎನ್ಐಎಫ್ಐಎಲ್- ಯುನಿಫಿಲ್) ಕರೆ ನೀಡಿದೆ. "ಇಸ್ರೇಲ್ ಮತ್ತು ಲೆಬನಾನ್ ಎರಡೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ 1701 ರ ಸಂಪೂರ್ಣ ಅನುಷ್ಠಾನಕ್ಕೆ ಮತ್ತು ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಬದ್ಧತೆಯನ್ನು ದೃಢಪಡಿಸಿವೆ. ಒಪ್ಪಂದದಲ್ಲಿ ಒಪ್ಪಿಕೊಂಡಂತೆ ಹೊಸದಾಗಿ ಸ್ಥಾಪಿಸಲಾದ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಲು ಎರಡೂ ಪಕ್ಷಗಳಿಗೆ ಕರೆ ನೀಡಲಾಗಿದೆ" ಎಂದು ಯುನಿಫಿಲ್ ಹೇಳಿಕೆಯಲ್ಲಿ ತಿಳಿಸಿದೆ.
ಇಸ್ರೇಲ್ ಮತ್ತು ಲೆಬನಾನ್ ನಡುವಿನ ಕದನ ವಿರಾಮ ಒಪ್ಪಂದದ ಪ್ರಕಾರ ಇಸ್ರೇಲ್ ತನ್ನ ಸೈನ್ಯವನ್ನು ಸಮಯಕ್ಕೆ ಸರಿಯಾಗಿ ಹಿಂತೆಗೆದುಕೊಳ್ಳುವಂತೆ ಮತ್ತು ಲೆಬನಾನ್ ತನ್ನ ಸಶಸ್ತ್ರ ಪಡೆಗಳನ್ನು ದಕ್ಷಿಣ ಲೆಬನಾನ್ನಲ್ಲಿ ನಿಯೋಜಿಸುವಂತೆ ಯುನಿಫಿಲ್ ಒತ್ತಾಯಿಸಿದೆ.
ಇದನ್ನೂ ಓದಿ: ಈ ನಗರದಲ್ಲಿ ಪ್ರಯಾಣಿಸಲು ಸಂಚಾರ ದಟ್ಟಣೆ ಶುಲ್ಕ ಪಾವತಿ ಕಡ್ಡಾಯ: ಎಲ್ಲಿ ಗೊತ್ತಾ? - TRAFFIC CONGESTION FEE