ಒಟ್ಟಾವ(ಕೆನಡಾ): ತಮ್ಮ ಪಕ್ಷದೊಳಗೆ ಅಸಮಾಧಾನ, ಭಿನ್ನಮತ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಅವರು ಈ ವಾರವೇ ಲಿಬರ್ ಪಾರ್ಟಿ ಮುಖ್ಯಸ್ಥನ ಹುದ್ದೆಗೆ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ ಎಂದು ಕೆನಡಾದ ಪ್ರಮುಖ ದಿನಪತ್ರಿಕೆ ದಿ ಗ್ಲೋಬ್ ಆ್ಯಂಡ್ ಮೇಲ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಗುರುತು ಬಹಿರಂಗಪಡಿಸದಂತೆ ಷರತ್ತು ವಿಧಿಸಿ ಪತ್ರಿಕೆಗೆ ಮಾಹಿತಿ ನೀಡಿದ ಕೆನಡಾ ಸರ್ಕಾರದ ಮೂಲಗಳು, ಟ್ರೂಡೋ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಕುರಿತು ನಿಖರ ಸಮಯ ಅನಿಶ್ಚಿತವಾಗಿದೆ. ಆದರೆ ಪಕ್ಷದ ರಾಷ್ಟ್ರೀಯ ನಾಯಕರ ಮಹತ್ವದ ಸಭೆಯಲ್ಲಿ ಈ ಬೆಳವಣಿಗೆ ನಡೆಯುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಇನ್ನೊಂದು ಮೂಲದ ಪ್ರಕಾರ, ತನ್ನ ಪಕ್ಷದ ಸಂಸತ್ ಸದಸ್ಯರಿಂದಲೇ ತಾನು ಉಚ್ಛಾಟಿತನಾದೆ ಎಂಬ ಅವಮಾನದಿಂದ ಪಾರಾಗಲು ತಾನಾಗಿಯೇ ಪಕ್ಷದ ರಾಷ್ಟ್ರೀಯ ನಾಯಕರ ಸಭೆಗೂ ಮುನ್ನವೇ ರಾಜೀನಾಮೆ ಘೋಷಣೆ ಮಾಡುವುವುದು ಒಳಿತೆಂಬುದನ್ನು ಟ್ರೂಡೋ ಅರ್ಥಮಾಡಿಕೊಂಡಿದ್ದಾರೆ. ಅದೇ ರೀತಿ, ಲಿಬರಲ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯು ನಾಯಕತ್ವ ಪರಿವರ್ತನೆಯನ್ನು ನಿರ್ವಹಿಸಲು ಯಾವ ರೀತಿ ಯೋಜನೆ ರೂಪಿಸಿಕೊಂಡಿದೆ ಎಂಬ ಕುರಿತು ಸ್ಪಷ್ಟನೆ ದೊರೆತಿಲ್ಲ. ಜಸ್ಟಿನ್ ಟ್ರೂಡೋ ತಕ್ಷಣವೇ ಹುದ್ದೆಯಿಂದ ಕೆಳಗಿಳೀತಾರಾ ಅಥವಾ ಉತ್ತರಧಿಕಾರಿಯ ಆಯ್ಕೆಯವರೆಗೆ ಪ್ರಧಾನಿಯಾಗಿ ಮುಂದುವರೀತಾರಾ? ಎಂಬುದು ಕೂಡಾ ಅನಿಶ್ಚಿತವಾಗಿದೆ.
ಮುಂದಿನ ನಾಯಕತ್ವದ ವಿಚಾರಗಳನ್ನು ನಿರ್ಧರಿಸುವ ಲಿಬರಲ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಈ ವಾರ ಸಭೆ ಸೇರಲಿದೆ. ಈ ಸಭೆ ಪಕ್ಷದ ಸಂಸತ್ ಸದಸ್ಯರ ಅಧಿವೇಶನದ ನಂತರ ನಡೆಯಲಿದೆ ಎಂದು ದಿ ಗ್ಲೋಬ್ ಆ್ಯಂಡ್ ಮೇಲ್ ವರದಿ ಹೇಳಿದೆ.
ಮುಖ್ಯವಾಗಿ, ರಾಜೀನಾಮೆಗೆ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ ಟ್ರೂಡೋ ಅವರ ಲಿಬರಲ್ ಪಕ್ಷದ ಸದಸ್ಯರು ಬುಧವಾರವೇ ಸಭೆ ಸೇರುವ ಸಾಧ್ಯತೆ ಗೋಚರಿಸಿದೆ. ಇದಕ್ಕಾಗಿ ಎಂಪಿಗಳು ಜನವರಿ 27ಕ್ಕೆ ರಾಜಧಾನಿ ಒಟ್ಟಾವಗೆ ಆಗಮಿಸಬೇಕಿದೆ. ಇದರ ಮಧ್ಯೆ ಪ್ರಮುಖ ಮೂರು ಪ್ರತಿಪಕ್ಷಗಳು ಹಾಲಿ ಸರ್ಕಾರವನ್ನು ಉರುಳಿಸಲು ಪಣ ತೊಟ್ಟಿವೆ ಎಂದು ರೇಡಿಯೋ ಕೆನಡಾ ವರದಿ ತಿಳಿಸಿದೆ.
ಇದನ್ನೂ ಓದಿ: ಯುದ್ಧ ಆರಂಭಕ್ಕೆ ಮುನ್ನವೇ ಯುಎಸ್ ರಹಸ್ಯವಾಗಿ ಉಕ್ರೇನ್ಗೆ ಹಣ, ಶಸ್ತ್ರಾಸ್ತ್ರ ನೀಡಿತ್ತು: ಬ್ಲಿಂಕೆನ್
ಕೆನಡಾದಲ್ಲಿ ಕಳೆದ ಕೆಲವು ತಿಂಗಳುಗಳಿಂದ ರಾಜಕೀಯ ಪ್ರಕ್ಷುಬ್ದತೆ ಇದೆ. ಡಿಸೆಂಬರ್ 16ರಂದು ದೇಶದ ಆರ್ಥಿಕತೆಯ ಕುರಿತು ಹೇಳಿಕೆ ಬಿಡುಗಡೆಯ ಕೆಲವೇ ಗಂಟೆಗಳಿಗೆ ಮುನ್ನ ಮಾಜಿ ಪ್ರಧಾನಿ ಮತ್ತು ಹಣಕಾಸು ಸಚಿವೆ ಕ್ರಿಸ್ಟಿಯಾ ಫ್ರೀಲ್ಯಾಂಡ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದರು. ಅವರು ಪ್ರಧಾನಿ ಟ್ರೂಡೋಗೆ ಬರೆದ ರಾಜೀನಾಮೆ ಪತ್ರದಲ್ಲಿ, "ಕೆನಡಾ, ಸರ್ಕಾರ ಮತ್ತು ಕೆನಡಿಗರಿಗೆ ಸೇವೆ ಸಲ್ಲಿಸಿರುವುದು ನನ್ನ ಜೀವನದ ಶ್ರೇಷ್ಠ ಗೌರವ. ನಾವು ಒಟ್ಟಿಗೆ ಸೇರಿ ಹಲವು ಸಾಧನೆಗಳನ್ನು ಮಾಡಿದ್ದೇವೆ. ಶುಕ್ರವಾರದಂದು, ನಾನು ಹಣಕಾಸು ಸಚಿವೆಯಾಗಿ ಕೆಲಸ ಮಾಡುವುದು ಬೇಡ ಎಂದು ಹೇಳಿ ನನಗೆ ಸಂಪುಟದಲ್ಲಿ ಬೇರೆ ಹುದ್ದೆ ನೀಡಿದಿರಿ. ಇದಾದ ಬಳಿಕ ನಾನು ಸಂಪುಟದಿಂದ ರಾಜೀನಾಮೆ ನೀಡುವುದೊಂದೇ ಪ್ರಾಮಾಣಿಕ ಮತ್ತು ಕಾರ್ಯಸಾಧ್ಯವಾದ ಮಾರ್ಗ ಎಂದು ತೀರ್ಮಾನಿಸಿದೆ. ಒಬ್ಬ ಸಚಿವ ಪ್ರಧಾನ ಮಂತ್ರಿಯ ಪರವಾಗಿ ಆತನಿಂದ ಸಂಪೂರ್ಣ ವಿಶ್ವಾಸ ಪಡೆದಿರಬೇಕು. ಆದರೆ, ನೀವು ನಿಮ್ಮ ನಿರ್ಧಾರವನ್ನು ಮಾಡುವಾಗ, ನಾನು ಇನ್ನು ಮುಂದೆ ಆ ವಿಶ್ವಾಸವನ್ನು ಪಡೆಯುವುದಿಲ್ಲ ಎಂದೆನಿಸಿತು. ಕೆನಡಾಕ್ಕೆ ಉತ್ತಮ ಭವಿಷ್ಯ ಒದಗಿಸುವ ನಿಟ್ಟಿನಲ್ಲಿ ಕಳೆದ ಹಲವು ವಾರಗಳಿಂದ ನಾವಿಬ್ಬರೂ ಸಾಕಷ್ಟು ಭಿನ್ನಾಭಿಪ್ರಾಯ ಹೊಂದಿದ್ದೇವೆ" ಎಂದು ಅವರು ಉಲ್ಲೇಖಿಸಿದ್ದರು.
ಫ್ರೀಲ್ಯಾಂಡ್ ರಾಜೀನಾಮೆಯ ಬಳಿಕ ಲಿಬರಲ್ ಪಕ್ಷವನ್ನು ಹಲವು ವರ್ಷಗಳಿಂದ ಬೆಂಬಲಿಸುತ್ತಿರುವ ಎನ್‌ಡಿಪಿ ನಾಯಕ ಜಗ್‌ಮೀತ್ ಸಿಂಗ್ ಅವರು ಕೂಡಾ ಟ್ರೂಡೋ ರಾಜೀನಾಮೆಗೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವಿರಾ ಎಂಬ ಪ್ರಶ್ನೆಗೆ, ನಮ್ಮ ಮುಂದೆ ಎಲ್ಲ ಆಯ್ಕೆಗಳೂ ಇರುವುದಾಗಿಯೂ ಅವರು ಹೇಳಿದ್ದರು.
ಇದನ್ನೂ ಓದಿ: ಯೆಮೆನ್ನ ಮೂರು ಹೌತಿ ನೆಲೆಗಳ ಮೇಲೆ ಅಮೆರಿಕ ನೌಕಾಪಡೆ ದಾಳಿ