ಬೆಂಗಳೂರು : ಹಳೆಯ ಶಿಥಿಲಗೊಂಡ ದಾಖಲೆಗಳನ್ನು ಶಾಶ್ವತವಾಗಿ ಡಿಜಿಟಲ್ ರೂಪದಲ್ಲಿ ಉಳಿಸಿಕೊಳ್ಳಲು, ನಕಲಿ ದಾಖಲೆಗಳ ಸೃಷ್ಟಿಯನ್ನು ತಡೆಗಟ್ಟಲು ಮತ್ತು ಅವುಗಳನ್ನು ಆನ್‌ಲೈನ್‌ನಲ್ಲಿ ನಾಗರಿಕರಿಗೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಭೂ ಸುರಕ್ಷಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.
ಭೂಸುರಕ್ಷಾ ಯೋಜನೆಯು ರಾಜ್ಯದ ಕಂದಾಯ ಇಲಾಖೆಯು ಕೈಗೊಂಡಿರುವ ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಯೋಜನೆಯಡಿ ತಾಲೂಕು ಕಚೇರಿಯ ಅಭಿಲೇಖಾಲಯಗಳಲ್ಲಿರುವ ಅತ್ಯಂತ ಪ್ರಮುಖವಾದ, ಹಳೆಯ ಮತ್ತು ಸ್ವಾತಂತ್ರ್ಯಪೂರ್ವದ ಅವಧಿಯ ಭೂ ದಾಖಲೆಗಳನ್ನು ಇಂಡೆಕ್ಸಿಂಗ್, ಕ್ಯಾಟಲಾಗಿಂಗ್, ಸ್ಕ್ಯಾನಿಂಗ್ ಮತ್ತು ಅಪ್ ಲೋಡಿಂಗ್ ಮಾಡಿ ಗಣಕೀಕರಣಗೊಳಿಸಲಾಗುತ್ತಿದೆ.
ಡಿಜಿಟಲೀಕರಣದಿಂದ ಅಭಿಲೇಖಾಲಯದ ಸಿಬ್ಬಂದಿಯನ್ನ ಸಂಪರ್ಕಿಸಿ ದಾಖಲೆಗಳನ್ನು ಪಡೆಯುವುದು ತಪ್ಪುತ್ತದೆ. ಅಲ್ಲದೇ ದಾಖಲೆಗಳ ವ್ಯತ್ಯಾಸ, ರೆಕಾರ್ಡ್ ಮಿಸ್ಸಿಂಗ್, ವಿಳಂಬ ಎಲ್ಲ ಸಮಸ್ಯೆಗಳು ಪರಿಹಾರ ಆಗಲಿದ್ದು, ನಾಗರೀಕರು ದಾಖಲೆಗಳಿಗಾಗಿ ಕಚೇರಿಗೆ ಭೇಟಿ ನೀಡುವ ಬದಲು ಸುಲಭವಾಗಿ ಆನ್ ಲೈನ್ ಮೂಲಕ ದಾಖಲೆಗಳನ್ನು ಡೌನ್ ಲೋಡ್ ಮಾಡಬಹುದು.
ಭೂಸುರಕ್ಷಾ ಯೋಜನೆಯಡಿಯಲ್ಲಿ ಪ್ರತಿ ಜಿಲ್ಲೆಯ 1 ತಾಲೂಕಿನಂತೆ ರಾಜ್ಯದ ಒಟ್ಟು 31 ತಾಲೂಕುಗಳನ್ನು ಪೈಲೆಟ್ ಕಚೇರಿಯಾಗಿ ಆಯ್ಕೆ ಮಾಡಿ, ಫೆಬ್ರವರಿ-2024 ರಿಂದ ಪೈಲೆಟ್ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕಂದಾಯ ಆಯುಕ್ತಾಲಯದ ಭೂಮಿ ಉಸ್ತುವಾರಿ ಕೋಶದಿಂದ "ಕಂದಾಯ ದಾಖಲೆಗಳ ಗಣಕೀಕರಣ" ಎಂಬ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ರಾಜ್ಯಾದ್ಯಂತ ಅನುಷ್ಠಾನಗೊಳಿಸಲಾಗಿದೆ.
"ಕಂದಾಯ ದಾಖಲೆಗಳ ಗಣಕೀಕರಣ" ತಂತ್ರಾಂಶದಲ್ಲಿ ಕಡತ ಮತ್ತು ವಹಿಗಳ ಇಂಡೆಕ್ಸಿಂಗ್, ಕ್ಯಾಟಲಾಗಿಂಗ್, ಸ್ಕ್ಯಾನಿಂಗ್ ಮತ್ತು ಅಪ್ ಲೋಡ್ ಮಾಡುವಂತಹ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಕಚೇರಿ ಟಿಪ್ಪಣಿಗಳು, ಆದೇಶಗಳು, ಸುತ್ತೋಲೆಗಳು, ನಡಾವಳಿಗಳು ಮುಂತಾದ ವಿವಿಧ ರೀತಿಯ ದಾಖಲೆಗಳನ್ನು ಪ್ರತ್ಯೇಕವಾಗಿ ಸ್ಕ್ಯಾನ್ ಮಾಡಿ, ಸೂಕ್ತವಾದ ಕೀವರ್ಡ್ಗಳೊಂದಿಗೆ ಟ್ಯಾಗ್ ಮಾಡಿ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಈ ಕೀವರ್ಡ್ಗಳಿಂದ ತಂತ್ರಾಂಶದಲ್ಲಿ ಅಳವಡಿಸಲಾದ ಸುಲಭವಾಗಿ ಹುಡುಕಬಹುದಾಗಿರುತ್ತದೆ ಹಾಗೂ ಶೀಘ್ರವಾಗಿ ಸಾರ್ವಜನಿಕರಿಗೆ ದಾಖಲೆಗಳನ್ನು ಒದಗಿಸಬಹುದಾಗಿದೆ.
ಕೇಂದ್ರ ಸರ್ಕಾರವು DILRMP ಯೋಜನೆಯಡಿಯಲ್ಲಿ ಒದಗಿಸಿರುವ ಅನುದಾನವನ್ನು ಹಾಗು ರಾಜ್ಯ ಸರ್ಕಾರವು ಒದಗಿಸಿರುವ ಅನುದಾನವನ್ನು ಬಳಸಿಕೊಂಡು ರಾಜ್ಯದ 31 ಪೈಲೆಟ್ ತಾಲೂಕು ಕಚೇರಿಗಳ ಅಭಿಲೇಖಾಲಯಗಳ ಗಣಕೀಕರಣ ಕಾರ್ಯವನ್ನು ಪ್ರಾರಂಭಿಸಲಾಗಿದೆ. ಈ ಪೈಲೆಟ್ ಕಚೇರಿಗಳಿಗೆ 10 ಡೆಸ್ಕ್ಟಾಪ್ ಕಂಪ್ಯೂಟರ್‌ಗಳು, 04 ಸ್ಕ್ಯಾನರ್‌ಗಳು ಮತ್ತು 10 ಡೇಟಾ ಎಂಟ್ರಿ ಆಪರೇಟರ್‌ಗಳನ್ನು ಒದಗಿಸಲಾಗಿದೆ.
31 ಪೈಲೆಟ್ ಕಚೇರಿಗಳ ಪೈಕಿ ಇದುವರೆಗೂ ಕೊಪ್ಪಳ ಜಿಲ್ಲೆಯ ಕಾರಟಗಿ, ಚಿಂಚೋಳಿ, ಯಳಂದೂರು, ಕುರುಗೋಡು, ಯಾದಗಿರಿ, ಹೆಬ್ರಿ ಮತ್ತು ಮೊಳಕಾಲೂರು ಒಟ್ಟು 7 ತಾಲೂಕು ಕಚೇರಿಗಳಲ್ಲಿ ಎ ಮತ್ತು ಬಿ ದಾಖಲೆಗಳ ಗಣಕೀಕರಣ ಪೂರ್ಣಗೊಂಡಿರುತ್ತದೆ. ಎಲ್ಲಾ ಪೈಲೆಟ್ ತಾಲೂಕು ಕಚೇರಿಗಳಿಂದ ಈವರೆಗೆ 14,87,682 ಕಡತಗಳು ಮತ್ತು 1,20,805 ವಹಿಗಳನ್ನು ಒಳಗೊಂಡಂತೆ ಒಟ್ಟು 7.95 ಕೋಟಿ ಪುಟಗಳು ತಂತ್ರಾಂಶದಲ್ಲಿ ಅಳವಡಿಸಲಾಗಿದೆ.
ಪ್ರಸ್ತುತ ರಾಜ್ಯದ ಉಳಿದ 209 ತಾಲೂಕು ಕಚೇರಿಗಳಲ್ಲಿ ಭೂ ದಾಖಲೆಗಳ ಗಣಕೀಕರಣ ಕಾರ್ಯವನ್ನು ಜನವರಿ-2025 ರಿಂದ ಪ್ರಾರಂಭಿಸಲಾಗುತ್ತಿದೆ. ಈ ಕಚೇರಿಗಳಿಗೆ ತಲಾ 6 ಡೆಸ್ಕ್ ಟಾಪ್ ಕಂಪ್ಯೂಟರ್‌ಗಳು, 3 ಸ್ಕ್ಯಾನರ್‌ಗಳು ಮತ್ತು 6 ಡೇಟಾ ಎಂಟ್ರಿ ಆಪರೇಟರ್‌ಗಳನ್ನು ಈಗಾಗಲೇ ಒದಗಿಸಲಾಗಿದೆ. ತಂತ್ರಾಂಶದ ಬಳಕೆಯ ಕುರಿತಂತೆ ಸಂಬಂಧಪಟ್ಟ ಅಧಿಕಾರಿ/ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದೆ. ಈ ಯೋಜನೆಯು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿರುವ ಬಗ್ಗೆ ಕಂದಾಯ ಆಯುಕ್ತಾಲಯದಿಂದ ಅಧಿಕಾರಿ/ಸಿಬ್ಬಂದಿ ತಾಲೂಕು ಕಚೇರಿಗಳನ್ನು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಅಗತ್ಯವಿದ್ದಲ್ಲಿ ಸೂಕ್ತ ನಿರ್ದೇಶನಗಳನ್ನು ನೀಡಲಾಗುತ್ತಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಭೂ ದಾಖಲೆಗಳ ಗಣಕೀಕರಣ ಕಾರ್ಯಕ್ಕಾಗಿ DILRMP ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದ ಅನುದಾನ ಮತ್ತು ರಾಜ್ಯ ಸರ್ಕಾರವು ಒದಗಿಸುವ ಅನುದಾನದಿಂದ ಭೂ ಸುರಕ್ಷಾ ಯೋಜನೆಯನ್ನು ರಾಜ್ಯಾದ್ಯಂತ ನಿರ್ವಹಿಸಲು ಉದ್ದೇಶಿಸಲಾಗಿದೆ. ಈ ಯೋಜನೆಯನ್ನು ರಾಜ್ಯಾದ್ಯಂತ ಯಶಸ್ವಿಯಾಗಿ ನಿರ್ವಹಿಸಲು ಕಂದಾಯ ಇಲಾಖೆಯು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ : ಜ.1ರಿಂದ ಎಲ್ಲಾ ಭೂ ಮಂಜೂರಾತಿ ದಾಖಲೆಗಳ ಡಿಜಿಟಲೀಕರಣ: ಸಚಿವ ಕೃಷ್ಣ ಬೈರೇಗೌಡ - KRISHNA BYREGOWDA