ಮಾಸ್ಕೋ (ರಷ್ಯಾ):ರಾಜಧಾನಿಯ ಈಶಾನ್ಯ ಇವಾನೊವೊ ಪ್ರದೇಶದ ಬಳಿ 15 ಜನರಿದ್ದ ರಷ್ಯಾದ ಮಿಲಿಟರಿ ಸರಕು ವಿಮಾನವೊಂದು ಮಂಗಳವಾರ ಪತನಗೊಂಡಿದ್ದು, ಎಲ್ಲರೂ ಸಾವನ್ನಪ್ಪಿದ್ದಾರೆ. Il-76 ವಿಮಾನವು ಟೇಕ್ ಆಫ್ ಆದ ಕೆಲ ಸಮಯದಲ್ಲೇ ಇಂಜಿನ್‌ನಲ್ಲಿ ಬೆಂಕಿ ಹೊತ್ತಿಕೊಂಡು ಪತನಗೊಂಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
ಇವಾನೊವೊ ಗವರ್ನರ್ ಸ್ಟಾನಿಸ್ಲಾವ್ ವೊಸ್ಕ್ರೆಸೆನ್ಸ್ಕಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಟೇಕಾಫ್ ವೇಳೆ ಎಂಜಿನ್‌ನಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಅಪಘಾತಕ್ಕೆ ಕಾರಣ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಅಧಿಕಾರಿಗಳ ತಂಡವು ತನಿಖೆ ನಡೆಸಲು ಇವಾನೊವೊಗೆ ತೆರಳಿದೆ.
ಸೇನಾ ಕಾರ್ಗೋ ವಿಮಾನ ಪತನವಾದಾಗ ಎಂಟು ಸಿಬ್ಬಂದಿ ಮತ್ತು ಏಳು ಮಂದಿ ಪ್ರಯಾಣಿಕರು ಸೇರಿದಂತೆ 15 ಜನರು ವಿಮಾನದಲ್ಲಿದ್ದರು. ಪ್ರಯಾಣಿಕರು ಯಾರು, ಮತ್ತು ಎಲ್ಲಿಗೆ ಹೋಗುತ್ತಿದ್ದರು ಎಂಬುದು ಸ್ಪಷ್ಟವಾಗಿಲ್ಲ. ರಷ್ಯಾದ ಮಾಧ್ಯಮ ನ್ಯೂಯಾರ್ಕ್ ಪೋಸ್ಟ್ ವಿಮಾನದ ಎಂಜಿನ್ ಹೊತ್ತಿ ಉರಿಯುತ್ತಿರುವ ವಿಡಿಯೋವೊಂದನ್ನು ಪ್ರಸಾರ ಮಾಡಿದೆ. ನಾಲ್ಕು- ಎಂಜಿನ್ Il-76 ಹೆವಿ-ಲಿಫ್ಟ್ ಸಾರಿಗೆ ವಿಮಾನ ಇದಾಗಿದ್ದು, 1970 ರ ದಶಕದಿಂದ ಸೋವಿಯತ್ ಮತ್ತು ನಂತರ ರಷ್ಯಾದ ವಾಯುಪಡೆಯೊಂದಿಗೆ ಸೇವೆಯಲ್ಲಿತ್ತು ಎಂದು ಆನ್‌ಲೈನ್ ಸುದ್ದಿವಾಹಿನಿಗಳಲ್ಲಿ ವರದಿಯಾಗಿದೆ.