ಕರ್ನಾಟಕ

karnataka

ETV Bharat / international

ಲೀಟರ್ ಹಾಲಿಗೆ 220 ರೂ., ಕೆಜಿ ಚಿಕನ್​ಗೆ 650 ರೂ.: ಬೆಲೆಯೇರಿಕೆಯಿಂದ ಪಾಕಿಸ್ತಾನ ಜನತೆ ತತ್ತರ - INFLATION IN PAKISTAN

ಪಾಕಿಸ್ತಾನದಲ್ಲಿ ಹಣದುಬ್ಬರ ತೀವ್ರವಾಗಿ ಏರಿಕೆಯಾಗುತ್ತಿದೆ. ಉದ್ದಿನ ಬೇಳೆಗೆ 600 ರೂ ಬೆಲೆ ಇದ್ದರೆ, ತುಪ್ಪಕ್ಕೆ 1500 ರೂ ದರ ಇದೆ.

Pakistan: Rawalpindi grapples with record inflation
ರಾವಲ್ಪಿಂಡಿಯಲ್ಲಿನ ತರಕಾರಿ ಮಳಿಗೆ (ani)

By ANI

Published : Nov 12, 2024, 7:43 PM IST

ರಾವಲ್ಪಿಂಡಿ: ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ದಿನಬಳಕೆಯ ವಸ್ತುಗಳ ಬೆಲೆಗಳು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಜನತೆ ಅಕ್ಷರಶಃ ತಲ್ಲಣಗೊಂಡಿದ್ದಾರೆ. ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಿಸುವುದಾಗಿ ಸರ್ಕಾರ ಹೇಳುತ್ತಿದ್ದರೂ ಬೆಲೆಗಳು ಮಾತ್ರ ಏರಿಕೆಯಾಗುತ್ತಲೇ ಇವೆ ಎಂದು ಎಕ್ಸ್​ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.

ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರಿ ಏರಿಕೆ:ಬೇಳೆಕಾಳುಗಳು, ಅಡುಗೆ ಎಣ್ಣೆ, ಹಿಟ್ಟು ಮತ್ತು ತರಕಾರಿಗಳಂತಹ ಆಹಾರ ಪದಾರ್ಥಗಳ ಬೆಲೆಗಳು ಭಾರಿ ಏರಿಕೆಯಾಗಿವೆ. ಉದ್ದಿನ ಬೇಳೆಯ ಬೆಲೆ ಪ್ರತಿ ಕಿಲೋಗ್ರಾಂಗೆ 600 ಪಾಕಿಸ್ತಾನಿ ರೂಪಾಯಿ (ಪಿಕೆಆರ್) ಮತ್ತು ಕಡಲೆಕಾಯಿ ಬೆಲೆ ಪ್ರತಿ ಕಿಲೋಗ್ರಾಂಗೆ 400 ಪಾಕಿಸ್ತಾನಿ ರೂಪಾಯಿಗಳಿಗೆ ಏರಿಕೆಯಾಗಿವೆ. ಹಾಗೆಯೇ ಅಡುಗೆ ಎಣ್ಣೆ ಪ್ರತಿ ಲೀಟರ್ ಗೆ 520 ಪಿಕೆಆರ್​ಗೆ ತಲುಪಿದೆ ಮತ್ತು ತುಪ್ಪದ ಬೆಲೆ 1500 ಪಿಕೆಆರ್​ಗೆ ಏರಿಕೆಯಾಗಿದೆ. ಇನ್ನು ಎಲ್ಲ ಬ್ರಾಂಡ್​​ಗಳ ತಂಪು ಪಾನೀಯಗಳ ಬೆಲೆ ಈ ಹಿಂದಿನದಕ್ಕಿಂತ 10 ಪಿಕೆಆರ್ ಹೆಚ್ಚಾಗಿದೆ.

ಮಸಾಲೆಗಳ ಬೆಲೆಗಳನ್ನೂ ಕೇಳುವಂತಿಲ್ಲ:ಮಸಾಲೆಗಳ ಮೇಲೂ ಹಣದುಬ್ಬರದ ಅಲೆ ಪರಿಣಾಮ ಬೀರಿದೆ. ಮಸಾಲೆ ಪದಾರ್ಥಗಳ ಬೆಲೆಗಳು ಶೇಕಡಾ 50 ರಷ್ಟು ಹೆಚ್ಚಳವಾಗಿವೆ. ಚಿಕನ್ ಬೆಲೆ ಪ್ರತಿ ಕೆ.ಜಿ.ಗೆ 650 ರೂ., ಮೊಟ್ಟೆಯ ಡಜನ್ ಗೆ 330 ರೂ. ದರದಲ್ಲಿ ಮಾರಾಟವಾಗುತ್ತಿವೆ. ಹಾಲಿಗೆ ಈಗ ಪ್ರತಿ ಲೀಟರ್ ಗೆ 220 ರೂಪಾಯಿ ಮತ್ತು ಕೆಜಿ ಮೊಸರಿಗೆ 240 ರೂಪಾಯಿ ಪಾವತಿಸಬೇಕಿದೆ.

ಬೆಲೆ ನಿಯಂತ್ರಣಕ್ಕೆ ಸರ್ಕಾರದ ಹರಸಾಹಸ:ಈ ಹೆಚ್ಚುತ್ತಿರುವ ಬೆಲೆಗಳನ್ನು ನಿಯಂತ್ರಿಸಲು ಕೇಂದ್ರ ದಿನಸಿ ವ್ಯಾಪಾರಿಗಳ ಸಂಘ, ಮಿಲ್ಕ್ ಮೆನ್ ಮಾರುಕಟ್ಟೆ, ನಾನ್ ಬಾಯಿ, ಮಟನ್ ಬೀಫ್ ಶಾಪ್ಸ್ ಯೂನಿಯನ್ ಮತ್ತು ಕೋಳಿ ಮಾರಾಟ ಒಕ್ಕೂಟ ಸೇರಿದಂತೆ ವಿವಿಧ ಸ್ಥಳೀಯ ಸಂಘಗಳ ಪ್ರತಿನಿಧಿಗಳು ಬೆಲೆ ನಿಯಂತ್ರಣ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿಯೊಂದಿಗೆ ಸಭೆ ನಡೆಸಿದರು. ಆದಾಗ್ಯೂ, ಆಹಾರ, ದಿನಸಿ ಅಥವಾ ಇತರ ಅಗತ್ಯ ವಸ್ತುಗಳ ಅಧಿಕೃತ ಬೆಲೆ ಪಟ್ಟಿಯನ್ನು ಬಿಡುಗಡೆ ಮಾಡದೆ ಸಭೆ ಮುಕ್ತಾಯಗೊಂಡಿದೆ ಎಂದು ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

ಸರ್ಕಾರದ ವಿರುದ್ಧ ಜನರ ಆಕ್ರೋಶ:ನವೆಂಬರ್ 7 ರಂದು ಬರಲಿದೆ ಎಂದು ನಿರೀಕ್ಷಿಸಲಾಗಿದ್ದ ಪರಿಷ್ಕೃತ ದರಪಟ್ಟಿ ಪ್ರಕಟವಾಗುವುದು ವಿಳಂಬವಾಗಿರುವುದು ಜನತೆ ಮತ್ತು ವ್ಯಾಪಾರಿಗಳಲ್ಲಿ ಹತಾಶೆ ಮೂಡಿಸಿದೆ. ದಿನಸಿ ವ್ಯಾಪಾರಿಗಳ ಸಂಘದ ಕೇಂದ್ರ ಅಧ್ಯಕ್ಷ ಸಲೀಂ ಪರ್ವೇಜ್ ಬಟ್ ಸರ್ಕಾರದ ನಿಷ್ಕ್ರಿಯತೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಪರಿಷ್ಕೃತ ಬೆಲೆಗಳು ಸಗಟು ಮಾರುಕಟ್ಟೆ ದರಕ್ಕಿಂತ ಕಡಿಮೆಯಾಗಿದ್ದರೆ ವ್ಯಾಪಾರಿಗಳು ಸರ್ಕಾರಿ ನಿಯಂತ್ರಿತ ಉತ್ಪನ್ನಗಳ ಮಾರಾಟವನ್ನು ಬಹಿಷ್ಕರಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ ಎಂದು ಎಕ್ಸ್ ಪ್ರೆಸ್ ಟ್ರಿಬ್ಯೂನ್ ಹೇಳಿದೆ.

ಪ್ರಸ್ತುತ ಹಣದುಬ್ಬರವು ಜನತೆಯನ್ನು ತೀವ್ರವಾಗಿ ಬಾಧಿಸಿದ್ದು, ಕುಟುಂಬಗಳ ಬಜೆಟ್ ಏರುಪೇರಾಗುತ್ತಿದೆ. ಇಷ್ಟಾದರೂ ಸರ್ಕಾರ ಏನೂ ಮಾಡದೇ ಕುಳಿತಿರುವುದು ಜನರ ಅಸಮಾಧಾನವನ್ನು ಹೆಚ್ಚಿಸಿದೆ.

ಇದನ್ನೂ ಓದಿ :ಗಾಜಾ ಜನರ ನೋವು, ಹಸಿವು, ಸಂಘರ್ಷ: ಕಲಾವಿದರ ಕಲಾಕೃತಿಗಳಲ್ಲಿ ಅನಾವರಣ

ABOUT THE AUTHOR

...view details