ಹನೋಯಿ, ವಿಯಟ್ನಾಂ: ಉತ್ತರ ಕೊರಿಯಾದಲ್ಲಿ ಕಿಮ್ ಜಾಂಗ್ ಉನ್ ಅವರೊಂದಿಗಿನ ಸಭೆಯ ನಂತರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ವಿಯಟ್ನಾಂನ ಹನೋಯ್‌ಗೆ ಆಗಮಿಸಿದ್ದಾರೆ ಎಂದು ರಷ್ಯಾದ ಅಧ್ಯಕ್ಷರ ಕಚೇರಿ ತಿಳಿಸಿದೆ. ಪ್ರಧಾನ ಕಾರ್ಯದರ್ಶಿ ನ್ಗುಯೆನ್ ಫು ಟ್ರೋಂಗ್ ಅವರ ಆಹ್ವಾನದ ಮೇರೆಗೆ ಪುಟಿನ್ ವಿಯೆಟ್ನಾಂ ರಾಜಧಾನಿಗೆ ಪುಟಿನ್ ಭೇಟಿ ನೀಡುತ್ತಿದ್ದಾರೆ. ಎರಡು ದಿನಗಳ ಭೇಟಿಯ ನಂತರ ಅವರು ಬುಧವಾರ ಸಂಜೆ ಉತ್ತರ ಕೊರಿಯಾದಿಂದ ಹನೋಯ್‌ಗೆ ಪ್ರಯಾಣ ಬೆಳೆಸಿದ್ದರು.
ಗುರುವಾರ, ರಷ್ಯಾದ ನಾಯಕ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥ ಟ್ರೋಂಗ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಇದಕ್ಕೂ ಮೊದಲು ಅಧ್ಯಕ್ಷೀಯ ಭವನದಲ್ಲಿ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಅವರು ವಿಯೆಟ್ನಾಂ ಪ್ರಧಾನಿ ಫಾಮ್ ಮಿನ್ ಚಿನ್ಹ್ ಮತ್ತು ರಷ್ಯಾದಲ್ಲಿ ಅಧ್ಯಯನ ಮಾಡಿದ ವಿಯೆಟ್ನಾಮೀಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಪುಟಿನ್ ಅವರು ವಿಯಟ್ನಾಂ ಸರ್ಕಾರ ಏರ್ಪಡಿಸುವ ಔತಣಕೂಟದಲ್ಲಿ ಭಾಗಿಯಾಗಲಿದ್ದು ಆತಿಥ್ಯವನ್ನು ಸ್ವೀಕರಿಸಲಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರತ್ಯೇಕವಾಗಿರುವ ಪುಟಿನ್ ರಷ್ಯಾದ ಉಳಿದ ಮಿತ್ರರಾಷ್ಟ್ರಗಳಿಂದ ಬೆಂಬಲವನ್ನು ಹೆಚ್ಚಿಸಿಕೊಳ್ಳಲು ಕಾರ್ಯತಂತ್ರ ರೂಪಿಸಿದ್ದಾರೆ. ಈ ಭಾಗವಾಗಿಯೇ ಅವರು ಉತ್ತರಕೊರಿಯಾ ಸೇರಿದಂತೆ ಇನ್ನುಳಿದ ಮಿತ್ರರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದಾರೆ. ಉಕ್ರೇನ್ ವಿರುದ್ಧದ ಆಪಾದಿತ ಯುದ್ಧಾಪರಾಧಗಳಿಗಾಗಿ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ನಿಂದ ಬಂಧನ ವಾರಂಟ್ ಎದುರಿಸುತ್ತಿರುವ ರಷ್ಯಾ ಅಧ್ಯಕ್ಷ ಪುಟಿನ್ ಅವರ ಭೇಟಿಯನ್ನು ಆಯೋಜಿಸುವುದರಿಂದ ವಿಯೆಟ್ನಾಂ ಹೇಗೆ ಲಾಭ ಪಡೆಯುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.