ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೋಮವಾರ ಸಂಜೆ ಶ್ವೇತಭವನದಲ್ಲಿ ದೀಪಾವಳಿಯನ್ನು ಆಚರಿಸಲಿದ್ದಾರೆ. ದೇಶದಾದ್ಯಂತದ ಹೆಚ್ಚಿನ ಸಂಖ್ಯೆಯ ಭಾರತೀಯ-ಅಮೆರಿಕನ್ನರು ಈ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬೈಡನ್ ಅವರಿಗೆ ಇದು ಅಧ್ಯಕ್ಷರಾಗಿ ಕೊನೆಯ ದೀಪಾವಳಿ ಆಗಲಿದೆ ಎಂದು ಶ್ವೇತಭವನದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ದಿನವು ಭಾರತೀಯ ಪರಂಪರೆ ಮತ್ತು ಸಂಸ್ಕೃತಿಗೆ ನೀಡುವ ಸ್ಮರಣೀಯ ಗೌರವವಾಗಿದೆ. ಅಮೆರಿಕ ಮತ್ತು ಭಾರತೀಯ - ಅಮೆರಿಕನ್ ಸಮುದಾಯದ ನಡುವೆ ಬೆಳೆಯುತ್ತಿರುವ ಬಾಂಧವ್ಯವನ್ನು ಇದು ಒತ್ತಿಹೇಳುತ್ತದೆ ಎಂದು ಶ್ವೇತಭವನ ನೆನಪಿಸಿಕೊಂಡಿದೆ.
ಹಿಂದಿನ ವರ್ಷಗಳ ಸಂಪ್ರದಾಯವನ್ನು ಮುಂದುವರಿಸಲಾಗುತ್ತಿದೆ. ಅಧ್ಯಕ್ಷರು ಬ್ಲೂ ರೂಮ್‌ನಲ್ಲಿ ದೀಪವನ್ನು ಬೆಳಗಿಸುತ್ತಾರೆ ಎಂದು ಶ್ವೇತಭವನ ತಿಳಿಸಿದೆ. ದೀಪ ಬೆಳಗಿದ ಬಳಿಕ ಅವರು, ಭಾರತೀಯ-ಅಮೆರಿಕನ್ನರನ್ನ ಉದ್ದೇಶಿಸಿ ಮಾತನಾಡಲಿದ್ದಾರೆ. ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸದ ಕಾರಣ ಶ್ವೇತಭವನದಲ್ಲಿ ಇದು ಅಧ್ಯಕ್ಷ ಬೈಡನ್ ಅವರ ಕೊನೆಯ ದೀಪಾವಳಿ ಆಚರಣೆ ಆಗಲಿದೆ.