ಇಸ್ಲಾಮಾಬಾದ್: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಗೆ ಇಂದು ಮತದಾನ ಸಾಗುತ್ತಿದೆ. ಈ ವೇಳೆ ನಡೆದ ಉಗ್ರರ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದಾರೆ. ಇತರೆ ಆರು ಮಂದಿ ಗಾಯಗೊಂಡಿದ್ದಾರೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ಗ್ರಹಾ ಅಸ್ಲಾಮ್ ಮತದಾನ ಕೇಂದ್ರದ ಸಮೀಪ ಪೊಲೀಸ್ ವಾಹನದ ಮೇಲೆ ಬಾಂಬ್ ದಾಳಿ ನಡೆಯಿತು. ಈ ಘಟನೆಯಲ್ಲಿ ನಾಲ್ವರು ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಬಲೂಚಿಸ್ತಾನದಲ್ಲಿ ಚುನಾವಣಾ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಎನ್ಎ-49 ಅಟೊಕ್, ಪಿಎಂಎಲ್ ಮತ್ತು ಪಿಟಿಐ ಕಾರ್ಯಕರ್ತರ ನಡುವಿನ ಗಲಾಟೆಯಿಂದಾಗಿ ಎರಡು ಬೂತ್ನಲ್ಲಿ ಮತದಾನವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದು, ಮತದಾನ ವಿಳಂಬವಾಗಿದೆ. ಸರ್ಕಾರಿ ಬಾಲಕರ ಹೈಸ್ಕೂಲ್ ಭಂಗಿ ಹಜ್ರೋದಲ್ಲಿ ನಡೆದ ಗಲಾಟೆಯಿಂದಾಗಿ ಐದು ಗಂಟೆಗಳಷ್ಟು ತಡವಾಗಿ ಮತದಾನಕ್ಕೆ ಚಾಲನೆ ನೀಡಲಾಗಿದೆ.
ಎನ್ಎ-19 ಟಪ್ಪಿ ಮತದಾನ ಕೇಂದ್ರಗಳನ್ನು ತಾಲಿಬಾನಿಗಳು ವಶಕ್ಕೆ ಪಡೆದಿದ್ದಾರೆ ಎಂದು ನ್ಯಾಷನಲ್ ಡೆಮೋಕ್ರಟಿಕ್ ಮೂವ್ಮೆಂಟ್(ಎನ್ಡಿಎಂ) ಅಧ್ಯಕ್ಷ ಮೊಹ್ಸಿನ್ ದವರ್ ತಿಳಿಸಿದರು. ಅಲ್ಲದೇ, ಉಗ್ರರು ಸ್ಥಳೀಯರಿಗೆ ಮತ್ತು ಮತದಾನ ಸಿಬ್ಬಂದಿಗೂ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.