ನವದೆಹಲಿ: ಗಾಜಾ ಪಟ್ಟಿ ಮೇಲಿನ ಇಸ್ರೇಲ್ನ ದಾಳಿಯಲ್ಲಿ ಈವರೆಗೆ 31,645 ಪ್ಯಾಲೆಸ್ಟೈನಿಯರು ಸಾವಿಗೀಡಾಗಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ. ಕಳೆದ ರಾತ್ರಿಯಿಡೀ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ 61 ಪ್ಯಾಲೆಸ್ಟೈನಿಯರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 31,645 ಕ್ಕೆ ಏರಿದೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.
"ಐದು ತಿಂಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಯುದ್ಧದಿಂದ ಗಾಜಾ ಪಟ್ಟಿಯಲ್ಲಿ ಭೀಕರ ಮಾನವೀಯ ಬಿಕ್ಕಟ್ಟು ಎದುರಾಗಿದೆ. ಈ ಪ್ರದೇಶದಲ್ಲಿನ 2.4 ಮಿಲಿಯನ್ ಜನ ಆಹಾರ ಕ್ಷಾಮ ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಪದೇ ಪದೇ ಎಚ್ಚರಿಸಿದೆ" ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಗಾಜಾದ ಅತಿದೊಡ್ಡ ಆಸ್ಪತ್ರೆ ಅಲ್-ಶಿಫಾದಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಮತ್ತೆ ಪ್ರಾರಂಭಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಸೋಮವಾರ ತಿಳಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಶಿಫಾ ಆಸ್ಪತ್ರೆಯ ಪ್ರದೇಶದಲ್ಲಿ ತನ್ನ ಸೈನಿಕರು ಪ್ರಸ್ತುತ ನಿಖರವಾದ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಐಡಿಎಫ್ ಹೇಳಿಕೆಯಲ್ಲಿ ತಿಳಿಸಿದೆ. ಹಮಾಸ್ನ ಹಿರಿಯ ಸದಸ್ಯರು ಆಸ್ಪತ್ರೆಯಲ್ಲಿದ್ದಾರೆ ಎಂಬ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಐಡಿಎಫ್ ತಿಳಿಸಿದೆ.