ಇಸ್ಲಾಮಾಬಾದ್ (ಪಾಕಿಸ್ತಾನ): ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ಮಂಗಳವಾರ ವೈಮಾನಿಕ ದಾಳಿ ನಡೆಸಿದೆ. ಪಾಕಿಸ್ತಾನಿ ವಾಯುಪಡೆಯ ಫೈಟರ್ ಜೆಟ್‌ಗಳು ಪಕ್ಟಿಕಾ ಪ್ರಾಂತ್ಯದ ಬರ್ಮಾಲ್ ಜಿಲ್ಲೆಯ ಲಾಮನ್ ಸೇರಿದಂತೆ ಏಳು ಗ್ರಾಮಗಳ ಮೇಲೆ ದಾಳಿ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪಾಕಿಸ್ತಾನಿ ಅಧಿಕಾರಿಗಳು ಪಾಕಿಸ್ತಾನಿ ತಾಲಿಬಾನ್ (ಟಿಟಿಪಿ) ತರಬೇತಿ ಶಿಬಿರವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದ್ದು, ಸದ್ಯ ತರಬೇತಿ ಕೇಂದ್ರವನ್ನು ನಾಶಪಡಿಸಿದ್ದಾರೆ. ದಾಳಿಯಲ್ಲಿ ಹಲವಾರು ಭಯೋತ್ಪಾದಕರನ್ನು ಕೊಂದಿದ್ದಾರೆ ಎಂದು ಮಾಹಿತಿ ಹೇಳಿದ್ದಾರೆ.
ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ಡಿಸೆಂಬರ್ 24 ರ ರಾತ್ರಿ ನಡೆದ ಈ ದಾಳಿಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು. ಲಾಮನ್‌ನಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವುದು ವರದಿಯಾಗಿದೆ.
ಮಾರ್ಚ್ ನಂತರ ಪಾಕಿಸ್ತಾನಿ ತಾಲಿಬಾನ್ ಗುರಿಗಳ ಮೇಲೆ ಅಫ್ಘಾನಿಸ್ತಾನದಲ್ಲಿ ನಡೆದ ಎರಡನೇ ದಾಳಿ ಇದಾಗಿದೆ. ಅಫ್ಘಾನಿಸ್ತಾನದೊಳಗಿನ ಗಡಿ ಪ್ರದೇಶಗಳಲ್ಲಿ ಗುಪ್ತಚರ ಆಧಾರದ ಮೇಲೆ ದಾಳಿ ನಡೆಸಲಾಗಿದೆ ಎಂದು ಮಾರ್ಚ್‌ನಲ್ಲಿ ಪಾಕಿಸ್ತಾನ ಹೇಳಿತ್ತು. ಪಾಕಿಸ್ತಾನದ ದಾಳಿಯ ನಂತರ ಅಫ್ಘಾನಿಸ್ತಾನವನ್ನು ಆಳಿದ ತಾಲಿಬಾನ್ ರಕ್ಷಣಾ ಸಚಿವಾಲಯ ಆಕ್ರೋಶ ವ್ಯಕ್ತಪಡಿಸಿದೆ.
ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯವು ಪಾಕಿಸ್ತಾನದ ವೈಮಾನಿಕ ದಾಳಿಯನ್ನು ಖಂಡಿಸಿದೆ. ಬಾಂಬ್ ದಾಳಿಯು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಾಗರಿಕರನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದೆ. ಬಲಿಯಾದವರಲ್ಲಿ ಹೆಚ್ಚಿನವರು ವಜಿರಿಸ್ತಾನ್ ಪ್ರದೇಶದ ನಿರಾಶ್ರಿತರು ಎಂದು ಮಾಧ್ಯಮಗಳು ವರದಿ ಮಾಡಿದೆ. ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನ (ತಾಲಿಬಾನ್ ಆಡಳಿತ) ಇದು ಎಲ್ಲ ಅಂತಾರಾಷ್ಟ್ರೀಯ ತತ್ವಗಳ ವಿರುದ್ಧ ಕ್ರೂರ ಕೃತ್ಯ ಮತ್ತು ಸಂಪೂರ್ಣ ಆಕ್ರಮಣ ಎಂದು ಪರಿಗಣಿಸುತ್ತದೆ ಮತ್ತು ಇದನ್ನು ಬಲವಾಗಿ ಖಂಡಿಸುತ್ತದೆ ಎಂದು ಅಫ್ಘಾನ್ ಸಚಿವಾಲಯ ಹೇಳಿದೆ.
ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಎಕ್ಸ್ನಲ್ಲಿ ಪೋಸ್ಟ್:ಅಫ್ಘಾನ್ ರಕ್ಷಣಾ ಸಚಿವಾಲಯವು ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ಇಂತಹ ಏಕಪಕ್ಷೀಯ ಕ್ರಮಗಳು ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಎಂಬುದನ್ನು ಪಾಕಿಸ್ತಾನ ಅರಿಯಬೇಕು. ಇಸ್ಲಾಮಿಕ್ ಎಮಿರೇಟ್ ಈ ಹೇಡಿತನದ ಕೃತ್ಯವನ್ನು ಉತ್ತರಿಸದೆ ಬಿಡುವುದಿಲ್ಲ. ನಮ್ಮ ಪ್ರದೇಶ ಮತ್ತು ಪ್ರದೇಶದ ರಕ್ಷಣೆಯನ್ನು ತನ್ನ ಅವಿನಾಭಾವ ಹಕ್ಕು ಎಂದು ಅಫ್ಘಾನ್ ಪರಿಗಣಿಸುತ್ತದೆ.
ಅಫ್ಘಾನಿಸ್ತಾನದ ಪಾಕಿಸ್ತಾನದ ವಿಶೇಷ ಪ್ರತಿನಿಧಿ ಮೊಹಮ್ಮದ್ ಸಾದಿಕ್ ಕಾಬೂಲ್‌ಗೆ ಭೇಟಿ ನೀಡಿದ ಕೆಲವೇ ಗಂಟೆಗಳ ನಂತರ ಈ ದಾಳಿ ನಡೆದಿದೆ. ದ್ವಿಪಕ್ಷೀಯ ಮತ್ತು ಸಂಬಂಧಗಳನ್ನು ಸುಧಾರಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲು ಸಾದಿಕ್ ಮಂಗಳವಾರ ಕಾಬೂಲ್‌ಗೆ ಆಗಮಿಸಿದ್ದರು. ಅಲ್ಲಿ ಅವರು ತಾಲಿಬಾನ್ ಆಡಳಿತದ ಅಧಿಕಾರಿಗಳನ್ನು ಭೇಟಿ ಮಾಡಿರುವುದು ಗಮನಾರ್ಹ..
ಇದನ್ನೂ ಓದಿ:ಸಣ್ಣ ವಿಮಾನ ಪತನ: ಕನಿಷ್ಠ 10 ಮಂದಿ ಸಾವು: ಬೆಚ್ಚಿ ಬಿದ್ದ ಪ್ರವಾಸಿಗರ ನಗರ