ಮೈಸೂರು : ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಗೂಂಡಾಗಳಿಗೂ ಕೆಲಸ ಸಿಕ್ಕಿದ್ದು, ಅವರು ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರ ಆರನೇ ಭಾಗ್ಯ ಗೂಂಡಾಗಳ ಭಾಗ್ಯ ಎಂದು ಮೈಕ್ರೋ ಫೈನಾನ್ಸ್ನವರ ಕಿರುಕುಳದ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಜಾಗರೂಕತೆ ಇದೆ. ಕಾನೂನು ಸುವ್ಯವಸ್ಧೆ ಸಂಪೂರ್ಣ ಕುಸಿದಿದ್ದು, ರಾಜ್ಯ ಸರ್ಕಾರ ದಿವಾಳಿಯಾಗಿದೆ. ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಾಲ ನೀಡ್ತಿಲ್ಲ. ಹೀಗಾಗಿ ಜನ ಮೈಕ್ರೋ ಫೈನಾನ್ಸ್ನಲ್ಲಿ ಸಾಲ ಮಾಡ್ತಿದ್ದಾರೆ ಎಂದರು.
ಬಿಜೆಪಿಯಲ್ಲಿ ಬಣ ಬಡಿದಾಟ ವಿಚಾರವಾಗಿ ಪ್ರತಿಕ್ರಿಯಿಸಿ, ಮಾಜಿ ಸಚಿವರಾದ ಬಿ ಶ್ರೀರಾಮುಲು ಹಾಗೂ ಗಾಲಿ ಜನಾರ್ದನ ರೆಡ್ಡಿ ಜೊತೆ ಮಾತನಾಡಿದ್ದೇನೆ. ಅವರಿಬ್ಬರೂ ಒಳ್ಳೆ ಸ್ನೇಹಿತರು. ಸಣ್ಣಪುಟ್ಟ ಗೊಂದಲದಿಂದ ಈ ರೀತಿ ಆಗಿದೆ. ಇಬ್ಬರೂ ಕೂಡ ಇದನ್ನು ಇಲ್ಲಿಗೇ ನಿಲ್ಲಿಸುತ್ತಾರೆ. ಶ್ರೀರಾಮುಲು ಜೊತೆ ಇವತ್ತು ಮಾತನಾಡಲು ಕರೆದಿದ್ದೆ. ಯಾರೋ ತೀರಿ ಹೋಗಿದ್ದಾರೆ ಅಲ್ಲಿಗೆ ಹೋಗ್ಬೇಕು ಎಂದು ಹೇಳಿದರು. ನಾಳೆ, ನಾಡಿದ್ದರಲ್ಲಿ ಎಲ್ಲವೂ ಕೂಡ ಸರಿಯಾಗುತ್ತೆ. ರೆಡ್ಡಿ ಮತ್ತು ಶ್ರೀರಾಮುಲು ಒಂದೇ ಜೀವ ಎರಡು ದೇಹ ಇದ್ದ ಹಾಗೆ. ಸಣ್ಣಪುಟ್ಟ ಭಿನ್ನಾಭಿಪ್ರಾಯದಿಂದ ಈ ರೀತಿ ಆಗಿದೆ ಎಂದು ಹೇಳಿದರು.
ನಾಳೆ ಹೈಕೋರ್ಟ್ನಲ್ಲಿ ಮುಡಾ ಪ್ರಕರಣ ವಿಚಾರಣೆ ಕುರಿತು ಮಾತನಾಡಿ, ನಾವು ಹೋರಾಟ ಮಾಡಿದ್ದು ಸಿಬಿಐಗೆ ಕೇಸ್ ವಹಿಸಿ ಅಂತ. ಲೋಕಾಯುಕ್ತ ತನಿಖೆ ಪಾರದರ್ಶಕದಿಂದ ಆಗಿಲ್ಲ. ಸಿದ್ದರಾಮಯ್ಯ ಪರವಾಗಿ ಲೋಕಾಯುಕ್ತ ಅಧಿಕಾರಿಗಳು ವರದಿ ಕೊಡ್ತಾರೆ. ಅಧಿಕಾರಿಗಳಿಗೆ ಪ್ರಮೋಶನ್ ಬೇಕು. ವಿಚಾರಣೆಗೆ ಸಿಎಂ ಟೈಮ್ ಫಿಕ್ಸ್ ಮಾಡಿಕೊಂಡು ಬರ್ತಾರೆ. ಟೈಮ್ ಫಿಕ್ಸ್ ಮಾಡಿಕೊಂಡು ಹೋಗ್ತಾರೆ ಅಂದ್ರೆ ಅರ್ಥ ಏನು? ಎಂದು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ಪರವಾಗಿ ಲೋಕಾಯುಕ್ತ ರಿಪೋರ್ಟ್ ಕೊಡ್ತಾರೆ ಬರೆದಿಟ್ಟುಕೊಳ್ಳಿ. ನಾನು ಈಗಲೇ ಹೇಳುತ್ತಿದ್ದೇನೆ. ಎಲ್ಲಿಂದಲೋ ಬಂದ ಇಡಿ ಇಲ್ಲಿ ಆಸ್ತಿ ಮುಟ್ಟುಗೋಲು ಹಾಕುತ್ತೆ, ಇಲ್ಲೇ ಇರುವಂತಹ ಲೋಕಾಯುಕ್ತ ಏಕೆ ಸುಮ್ಮನೆ ಕೂತಿದೆ ಎಂದು ಲೋಕಾಯುಕ್ತ ಪೊಲೀಸರ ವಿರುದ್ಧ ಅಶೋಕ್ ಗುಡುಗಿದರು.
ಖೋ ಖೋ ವಿಶ್ವಕಪ್ ವಿಜೇತರಿಂದ ಸರ್ಕಾರಕ್ಕೆ ಬಹುಮಾನ ವಾಪಸ್ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯ ಪರವಾಗಿ ನಾನು ನಿಮಗೆ ಮನವಿ ಮಾಡ್ತೀನಿ, ದಯಮಾಡಿ ಬಹುಮಾನ ತೆಗೆದುಕೊಳ್ಳಿ. ಈ ಸರ್ಕಾರ ಪಾಪರ್ ಸರ್ಕಾರ, ಪೇಪರ್ ತೆಗೆದುಕೊಳ್ಳಲು ಕೂಡ ಕಾಸ್ ಇಲ್ಲ. ವಾಪಸ್ ಕೊಟ್ರೆ ಅದೂ ಸಿಗಲ್ಲ. ಮುಂದೆ ಬಿಜೆಪಿ ಸರ್ಕಾರ ಬರುತ್ತದೆ. ಅವಾಗ ಉತ್ತೇಜನ ನೀಡುತ್ತೇವೆ. ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳು ಸಮೃದ್ಧವಾಗಿವೆ. ಅದಕ್ಕೆ ಹೆಚ್ಚಿಗೆ ನೀಡಿದ್ದಾರೆ. ನಮ್ಮಲ್ಲಿ ಸರ್ಕಾರ ದಿವಾಳಿ ಆಗಿದೆ. ಕೇಂದ್ರ ಸರ್ಕಾರ ದುಡ್ಡು ಕೊಡಬೇಕು ಅಂತ ಡಿ ಕೆ ಶಿವಕುಮಾರ್ ಹೇಳ್ತಾರೆ. ಹಿಂದೆ ಮನಮೋಹನ್ ಸಿಂಗ್ ಇದ್ದಾಗ ಎಷ್ಟು ಅನುದಾನ ತಂದಿದಪ್ಪ ಡಿ. ಕೆ ಶಿವಕುಮಾರ್ ಎಂದು ಪ್ರಶ್ನಿಸಿದರು.
ಬೆಂಗಳೂರು ಅರಮನೆ ಟಿಡಿಆರ್ ವಿಚಾರವಾಗಿ ಪ್ರತಿಕ್ರಿಯಿಸಿ, ಅರಮನೆ ಟಾರ್ಗೆಟ್ ಆಗ್ತಿದೆ. ಇದು ಟಾರ್ಗೆಟ್ ರಾಜಕಾರಣ. ರಾಜ್ಯಕ್ಕೆ ಮೈಸೂರು ರಾಜಮನೆತನ ಹಲವು ಕೊಡುಗೆಗಳನ್ನು ನೀಡಿದೆ. ಸಿದ್ದರಾಮಯ್ಯ ಬಂದಾಗಲೆಲ್ಲ ಈ ರೀತಿ ಟಾರ್ಗೆಟ್ ಆಗೋದು ಸಹಜ. ಅವರಿಗೆ ಟಿಪ್ಪು ಇಷ್ಟ. ಅವರ ಕಡೆಯವರು ಕೇಳಿದ್ರೆ ಏನು ಬೇಕಾದ್ರೂ ಕೊಡ್ತಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.