ಇಸ್ಲಾಮಾಬಾದ್ (ಪಾಕಿಸ್ತಾನ):ಹಲವು ಪ್ರಕರಣಗಳಲ್ಲಿ ಜೈಲು ಪಾಲಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ 'ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್' ಪಕ್ಷವನ್ನು ದೇಶ ವಿರೋಧಿ ಚಟುವಟಿಕೆ ಚಟುವಟಿಕೆ ಆರೋಪಗಳ ಮೇಲೆ ನಿಷೇಧಿಸಲು ಅಲ್ಲಿನ ಸರ್ಕಾರ ಮುಂದಾಗಿದೆ.
ಈ ಬಗ್ಗೆ ಸರ್ಕಾರದ ಮಾಹಿತಿ ಇಲಾಖೆ ಸಚಿವ ಅತ್ತಾವುಲ್ಲಾ ತರಾರ್ ಸೋಮವಾರ ಮಾತನಾಡಿದ್ದು, "ಇಮ್ರಾನ್ ಖಾನ್ ಅವರ ಪಕ್ಷವು ದೇಶ ವಿರೋಧಿ ಚಟಿವಟಿಕೆಗಳಲ್ಲಿ ತೊಡಗಿದೆ. ಪಕ್ಷವನ್ನು ನಿಷೇಧಿಸಲು ಪ್ರಧಾನಿ ಶಹಬಾಜ್ ಷರೀಫ್ ನೇತೃತ್ವದ ಸರ್ಕಾರ ಚಿಂತಿಸಿದೆ. ಈ ಬಗ್ಗೆ ಶೀಘ್ರವೇ ಪ್ರಕಟಣೆ ಹೊರಬೀಳಲಿದೆ" ಎಂದು ತಿಳಿಸಿದ್ದಾಗಿ ಅಲ್ಲಿನ ಮಾಧ್ಯಮಗಳು ವರದಿ ಭಿತ್ತರಿಸಿವೆ.
ಖಾನ್ರ ಪಿಟಿಐ ಪಕ್ಷದ ಮೇಲೆ ನಿರ್ಬಂಧ ಹೇರಲು ಹಲವು ಪುರಾವೆಗಳು ಸಿಕ್ಕಿವೆ. ಇವುಗಳ ಆಧಾರದ ಮೇಲೆ ಸರ್ಕಾರ ಕ್ರಮಕ್ಕೆ ಮುಂದಾಗಲಿದೆ ಎಂದು ಪಾಕಿಸ್ತಾನ ಸಚಿವ ಹೇಳಿದ್ದಾರೆ. ಈಚೆಗಷ್ಟೇ ಮೀಸಲು ಸೀಟುಗಳ ಕೇಸ್ ಮತ್ತು ಅಕ್ರಮ ವಿವಾಹ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ರಿಲೀಫ್ ನೀಡಿದ ಬೆನ್ನಲ್ಲೇ, ಇಮ್ರಾನ್ ಖಾನ್ಗೆ ಷರೀಫ್ ಸರ್ಕಾರ ಶಾಕ್ ನೀಡಲು ಮುಂದಾಗಿದೆ.
ಸದ್ಯಕ್ಕೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಅನೇಕ ಪ್ರಕರಣಗಳಲ್ಲಿ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ನಾಲ್ಕು ಪ್ರಕರಣಗಳಲ್ಲಿ ಅವರಿಗೆ 30 ಕ್ಕೂ ಅಧಿಕ ವರ್ಷ ಜೈಲು ಶಿಕ್ಷೆಯಾಗಿದೆ. ಪಕ್ಷವನ್ನು ಮುನ್ನಡೆಸಲು ಸಮರ್ಥ ನಾಯಕತ್ವ ಇಲ್ಲವಾಗಿದ್ದು, ಸಂಕಷ್ಟಕ್ಕೆ ಸಿಲುಕುವಂತಾಗಿದೆ.