ಲಾಹೋರ್(ಪಾಕಿಸ್ತಾನ): ಇಲ್ಲಿನ ಪಂಜಾಬ್ ಪ್ರಾಂತ್ಯದಲ್ಲಿ ಮದುವೆಗೆ ತೆರಳಿದ್ದ ವಾಹನವೊಂದು (ವ್ಯಾನ್) ನಿಯಂತ್ರಣ ಕಳೆದುಕೊಂಡು ಚರಂಡಿಗೆ ಬಿದ್ದು ಕನಿಷ್ಠ ಎಂಟು ಜನ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುರುವಾರ ತಡರಾತ್ರಿ ಲಾಹೋರ್‌ನಿಂದ ಸುಮಾರು 50 ಕಿಲೋ ಮೀಟರ್ ದೂರದಲ್ಲಿರುವ ಕಸೂರ್ ಎಂಬಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ಶುಕ್ರವಾರ ಮಾಹಿತಿ ನೀಡಿದ್ದಾರೆ.
10 ಜನರಿದ್ದ ವ್ಯಾನ್ ಲಾಹೋರ್‌ನಲ್ಲಿ ಏರ್ಪಡಿಸಲಾಗಿದ್ದ ಮದುವೆ ಸಮಾರಂಭ ಮುಗಿಸಿ ಹಿಂತಿರುಗುತ್ತಿತ್ತು. ಈ ವೇಳೆ ಅತಿ ವೇಗದಿಂದ ನಿಯಂತ್ರಣ ಕಳೆದುಕೊಂಡು ಆಳ ಚರಂಡಿಗೆ ಬಿದ್ದಿದೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಎಂಟು ಶವಗಳನ್ನು ಹೊರತೆಗೆದಿದ್ದಾರೆ. ಅಲ್ಲದೇ, ಇಬ್ಬರು ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ವ್ಯಾನ್ ಚರಂಡಿಗೆ ಬೀಳುತ್ತಿದ್ದಂತೆ ಚಾಲಕ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದು, ತಪ್ಪಿಸಿಕೊಳ್ಳುತ್ತಿದ್ದ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.