ಇಸ್ಲಾಮಾಬಾದ್/ಲಾಹೋರ್:ಸಮ್ಮಿಶ್ರ ಸರ್ಕಾರ ರಚನೆಗೆ ಮಾಜಿ ಪ್ರಧಾನಿ ನವಾಜ್ ಷರೀಫ್ ನೀಡಿರುವ ಕರೆಯನ್ನು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಬೆಂಬಲಿಸಿದ್ದಾರೆ. ಈ ಮೂಲಕ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನಾಯಕನ ಪರವಾಗಿ ಸೇನೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.
ಪಾಕಿಸ್ತಾನವನ್ನು ಪ್ರಸ್ತುತ ಸಂಕಷ್ಟಗಳಿಂದ ಹೊರತರಲು ಕೈಜೋಡಿಸುವಂತೆ ಷರೀಫ್ ತಮ್ಮ ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳಿಗೆ ಶುಕ್ರವಾರ ಮನವಿ ಮಾಡಿದ್ದರು. ಇದರಿಂದ ಸಮ್ಮಿಶ್ರ ಸರ್ಕಾರ ರಚನೆಯ ನಿಟ್ಟಿನಲ್ಲಿ ಪ್ರಯತ್ನಗಳಿಗೆ ವೇಗ ಸಿಕ್ಕಿದೆ. ಗುರುವಾರ ನಡೆದ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು 100 ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ.
''ಚುನಾವಣೆ ಮತ್ತು ಪ್ರಜಾಪ್ರಭುತ್ವ ಪಾಕಿಸ್ತಾನದ ಜನರಿಗೆ ಸೇವೆ ಸಲ್ಲಿಸುವ ಸಾಧನಗಳು. 25 ಕೋಟಿ ಜನರಿರುವ ಪ್ರಗತಿಪರ ದೇಶವನ್ನು ಅರಾಜಕತೆ ಮತ್ತು ಧ್ರುವೀಕರಣದ ರಾಜಕೀಯದಿಂದ ಹೊರ ತರಬೇಕು. ನೂತನ ಸರ್ಕಾರವನ್ನು ಮುನ್ನಡೆಸಲು ಸ್ಥಿರವಾದ ಕೈಗಳಿಗೆ ಹಸ್ತಾಂತರಿಸುವ ಅಗತ್ಯವಿದೆ" ಎಂದು ಅಸಿಮ್ ಮುನೀರ್ ತಿಳಿಸಿದ್ದಾರೆ.