ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ನಡೆದ ಮತದಾನದ ಫಲಿತಾಂಶ ನಾಳೆ(ಶನಿವಾರ) ಪ್ರಕಟವಾಗಲಿದೆ. ದೆಹಲಿ ಮತದಾರರು ಆಮ್ ಆದ್ಮಿ ಪಕ್ಷ (AAP) ವನ್ನು ಸತತ ಮೂರನೇ ಬಾರಿಗೆ ದೆಹಲಿ ಗದ್ದುಗೆಯಲ್ಲಿ ಕೂರಿಸುತ್ತಾರಾ? ಅಥವಾ 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಕಮಲ (ಬಿಜೆಪಿ) ಅರಳುತ್ತಾ? ಎಂಬ ಕುತೂಹಲ ಇದೀಗ ದೇಶಾದ್ಯಂತ ಮನೆ ಮಾಡಿದೆ.
ಇದೇ ವೇಳೆ, ಕಳೆದ ಎರಡು ಚುನಾವಣೆಗಳಲ್ಲಿ ಶೂನ್ಯ ಸುತ್ತಿರುವ ಕಾಂಗ್ರೆಸ್ ಕೂಡಾ ಫಲಿತಾಂಶದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದೆ. ಆದರೆ, ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಬಿಜೆಪಿ ಗೆಲ್ಲುವುದಾಗಿ ಭವಿಷ್ಯ ನುಡಿದಿವೆ.
![Arvind Kejriwal, Parvesh Verma and Sandeep Dikshit](https://etvbharatimages.akamaized.net/etvbharat/prod-images/07-02-2025/23496665_thumbnailmeeg.jpg)
ಎಣಿಕೆ ಸಮಯ: ಬೆಳಗ್ಗೆ 8ರಿಂದ ದೆಹಲಿ ನಗರಿಯ 11 ಜಿಲ್ಲೆಗಳ ಒಟ್ಟು 19 ಕೇಂದ್ರಗಳಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಪಾರದರ್ಶಕತೆ ಮತ್ತು ನಿಖರತೆಯನ್ನು ಖಚಿತಪಡಿಸಿಕೊಳ್ಳಲು, ಭಾರತೀಯ ಚುನಾವಣಾ ಆಯೋಗ (ECI) ಸಂಪೂರ್ಣ ಪ್ರಕ್ರಿಯೆಯ ಮೇಲ್ವಿಚಾರಣೆ ಮಾಡಲಿದೆ. ಅದೇ ಸಮಯದಲ್ಲಿ ತನ್ನ ವೆಬ್‌ಸೈಟ್‌ನಲ್ಲಿ ನೈಜ-ಸಮಯದ ಆಧಾರದ ಮೇಲೆ ಫಲಿತಾಂಶದ ಕುರಿತು ವಿವರಗಳನ್ನು ನೀಡಲಿದೆ.
ನೇರ ಫಲಿತಾಂಶವನ್ನು ಎಲ್ಲಿ ನೋಡಬೇಕು?: ಮತ ಎಣಿಕೆಯ ಲೈವ್ ಮಾಹಿತಿಗಾಗಿ ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ ಗಮನಿಸಬಹುದು. ಇದರಲ್ಲಿ ಕ್ಷೇತ್ರವಾರು ಫಲಿತಾಂಶ ಹಾಗೂ ವಿಜೇತರ ಬಗ್ಗೆ ಕ್ಷಣ ಕ್ಷಣದ ಮಾಹಿತಿ ನೀಡಲಾಗುತ್ತದೆ. ಅದೇ ರೀತಿ, ಫಲಿತಾಂಶಗಳ ಎಲ್ಲಾ ಲೈವ್ ಮಾಹಿತಿಗಾಗಿ ವೀಕ್ಷಕರು ಈಟಿವಿ ಭಾರತ (etvbharat.com) ಅನ್ನು ಸದಾ ಪರಿಶೀಲಿಸುತ್ತಿರಿ.
![Delhi Assembly Elections-2025](https://etvbharatimages.akamaized.net/etvbharat/prod-images/07-02-2025/23496665_thumbnaileeg.jpg)
ಪ್ರಮುಖ ಕ್ಷೇತ್ರಗಳು ಹಾಗೂ ಅಭ್ಯರ್ಥಿಗಳು:
ನವದೆಹಲಿ ಕ್ಷೇತ್ರ: ಎಎಪಿ ಸಂಚಾಲಕ ಹಾಗೂ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಇವರಿಗೆ ಎದುರಾಗಿ ಬಿಜೆಪಿಯಿಂದ ದೆಹಲಿಯ ಮಾಜಿ ಸಿಎಂ ಸಾಹಿಬ್ ಇಸಂಗ್ ವರ್ಮಾ ಅವರ ಪುತ್ರ ಪರ್ವೇಶ್ ವರ್ಮಾ ಹಾಗೂ ಕಾಂಗ್ರೆಸ್ನಿಂದ ಮಾಜಿ ಸಿಎಂ ಶೀಲಾ ದೀಕ್ಷತ್ ಅವರ ಪುತ್ರ ಸಂದೀಪ್ ದೀಕ್ಷಿತ್ ಕಣದಲ್ಲಿದ್ದಾರೆ. ಘಟಾನುಘಟಿ ಅಭ್ಯರ್ಥಿಗಳ ಕಣದಲ್ಲಿರುವ ನವದೆಹಲಿ ಕ್ಷೇತ್ರದ ಫಲಿತಾಂಶ ಪ್ರಮುಖ ಅಂಶವಾಗಲಿದೆ.
ಕಲ್ಕಾಜಿ ಕ್ಷೇತ್ರ: ಕಲ್ಕಾಜಿ ಕ್ಷೇತ್ರದಿಂದ ದೆಹಲಿಯ ಹಾಲಿ ಸಿಎಂ ಅತಿಶಿ ಹಾಗೂ ಕಾಂಗ್ರೆಸ್‌ನ ಅಲ್ಕಾ ಲಂಬಾ ಅಖಾಡದಲ್ಲಿದ್ದಾರೆ.
![Manish Sisodia](https://etvbharatimages.akamaized.net/etvbharat/prod-images/07-02-2025/23496665_thumbnlmeeg.jpg)
ಜಂಗ್ಪುರ ಕ್ಷೇತ್ರ: ಇಲ್ಲಿ ಎಎಪಿ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಬಿಜೆಪಿಯ ತರ್ವಿಂದರ್ ಸಿಂಗ್ ಮಾರ್ವಾ ಮತ್ತು ಕಾಂಗ್ರೆಸ್‌ನ ಫರ್ಹಾದ್ ಸೂರಿ ವಿರುದ್ಧ ಸ್ಪರ್ಧಿಸಿದ್ದಾರೆ.
ಮಾಳವೀಯ ಕ್ಷೇತ್ರ: ಈ ಕ್ಷೇತ್ರದಲ್ಲಿ ಎಎಪಿಯಿಂದ ಮೂರು ಬಾರಿ ಶಾಸಕನಾದ ಸೋಮನಾಥ್ ಭಾರ್ತಿ ಮತ್ತು ಪ್ರತಿಸ್ಪರ್ಧಿಗಳಾಗಿ ಬಿಜೆಪಿಯ ಸತೀಶ್ ಉಪಾಧ್ಯಾಯ ಮತ್ತು ಕಾಂಗ್ರೆಸ್‌ನ ಜಿತೇಂದ್ರ ಕುಮಾರ್ ಕೊಚಾರ್ ನಡುವೆ ತೀವ್ರ ಪೈಪೋಟಿ ಇದೆ.
ಪತ್ಪರ್‌ಗಂಜ್ ಕ್ಷೇತ್ರ: ಹಿಂದೆ ಮನೀಷ್ ಸಿಸೋಡಿಯಾ ಅವರ ಕ್ಷೇತ್ರವಾಗಿದ್ದ ಪತ್ಪರ್‌ಗಂಜ್ ಸಾಂಪ್ರದಾಯಿಕವಾಗಿ ಎಎಪಿಯ ಭದ್ರಕೋಟೆಯಾಗಿತ್ತು. ಈ ಬಾರಿ, ಎಎಪಿಯ ಅವಧ್ ಓಜಾ ಅವರು ಬಿಜೆಪಿಯ ರವೀಂದರ್ ಸಿಂಗ್ ನೇಗಿ ಮತ್ತು ಕಾಂಗ್ರೆಸ್‌ನ ಅನಿಲ್ ಚೌಧರಿ ವಿರುದ್ಧ ಕಣದಲ್ಲಿದ್ದಾರೆ.
![Delhi Assembly Elections-2025](https://etvbharatimages.akamaized.net/etvbharat/prod-images/07-02-2025/23496665_thumbnilmeeg.jpg)
ಬಾಬರ್‌ಪುರ ಕ್ಷೇತ್ರ: ಬಿಜೆಪಿಯ ಅನಿಲ್ ಕುಮಾರ್ ವಶಿಷ್ಠ ಅವರು ಕಾಂಗ್ರೆಸ್‌ನ ಸೀಲಾಂಪುರದ ಮಾಜಿ ಶಾಸಕ ಮೊಹಮ್ಮದ್ ಇಶ್ರಾಕ್ ಖಾನ್ ಮತ್ತು ಹ್ಯಾಟ್ರಿಕ್ ನಿರೀಕ್ಷೆಯಲ್ಲಿರುವ ಎಎಪಿಯ ಗೋಪಾಲ್ ರೈ ವಿರುದ್ಧ ಸ್ಪರ್ಧಿಸಿದ್ದಾರೆ.
ಓಖ್ಲಾ ಕ್ಷೇತ್ರ: ಎಎಪಿಯ ಅಮಾನತುಲ್ಲಾ ಖಾನ್ ಓಖ್ಲಾದಲ್ಲಿ ಸತತ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದು, ಕಾಂಗ್ರೆಸ್‌ನ ಅರಿಬಾ ಖಾನ್, ಬಿಜೆಪಿಯ ಮನೀಶ್ ಚೌಧರಿ ಮತ್ತು ಎಐಎಂಐಎಂನ ಶಿಫಾ ಉರ್ ರೆಹಮಾನ್ ಖಾನ್ ಅವರು ಎದುರಾಳಿಗಳಾಗಿ ಕಣದಲ್ಲಿದ್ದಾರೆ.
50 ಕ್ಷೇತ್ರಗಳಲ್ಲಿ ನಮ್ದೇ ಗೆಲುವು-ಬಿಜೆಪಿ: ಈ ಸಲ ನಾವು ಸುಮಾರು 50 ಕ್ಷೇತ್ರಗಳನ್ನು ಗೆಲ್ಲುವುದಾಗಿ ದೆಹಲಿ ಬಿಜೆಪಿ ಅಧ್ಯಕ್ಷ ವಿರೇಂದ್ರ ಸಚ್‌ದೇವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
![Delhi Chief Minister Atishi](https://etvbharatimages.akamaized.net/etvbharat/prod-images/07-02-2025/23496665_thumbnailmeg.jpg)
ಎಕ್ಸಿಟ್ ಪೋಲ್ ತಿರಸ್ಕರಿಸಿದ ಆಪ್: ಇನ್ನೊಂದೆಡೆ, ಆಮ್ ಆದ್ಮಿ ಪಕ್ಷ ಎಕ್ಸಿಟ್ ಪೋಲ್‌ಗಳ ಭವಿಷ್ಯವನ್ನು ತಿರಸ್ಕರಿಸಿದ್ದು, ನಾವೇ ಮತ್ತೆ ಸರ್ಕಾರ ರಚಿಸಲಿದ್ದೇವೆ. ಮತ್ತು ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತೆ ಸಿಎಂ ಆಗಲಿದ್ದಾರೆ ಎಂದು ಹೇಳಿದೆ.
ಎಣಿಕೆಗೆ 5,000 ಸಿಬ್ಬಂದಿ ನಿಯೋಜನೆ: ಮತ ಎಣಿಕೆಯ ಒಟ್ಟಾರೆ ಪ್ರಕ್ರಿಯೆಯಲ್ಲಿ 5,000 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ದೆಹಲಿ ಮುಖ್ಯ ಚುನಾವಣಾ ಅಧಿಕಾರಿ ಅಲಿಸ್ ವಾಜ್ ತಿಳಿಸಿದ್ದಾರೆ.
ನ್ಯಾಯಯುತ ಮತಎಣಿಕಾ ಪ್ರಕ್ರಿಯೆಗಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ವಿವಿಪ್ಯಾಟ್ (Voter Verifiable Paper Audit Trails) ಯಾದೃಚ್ಚಿಕವಾಗಿ (Random Selection) ತೆಗೆದು ತಾಳೆ ನೋಡಲಾಗುವುದು ಎಂದು ಅವರು ತಿಳಿಸಿದರು. ಅದೇ ರೀತಿ, 10,000 ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಈ ಪೈಕಿ ಎರಡು ಕೇಂದ್ರದ ಪ್ಯಾರಾ ಮಿಲಿಟರಿ ಕಂಪನಿಗಳಿರಲಿವೆ. ಇವುಗಳನ್ನು ಎಲ್ಲ 19 ಎಣಿಕಾ ಕೇಂದ್ರದಲ್ಲಿ ನಿಯೋಜಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಫಲಿತಾಂಶಕ್ಕೂ ಮುನ್ನ ಆಪ್-ಬಿಜೆಪಿ ಜಟಾಪಟಿ: ಆಮ್ ಆದ್ಮಿ ಪಾರ್ಟಿ ಸ್ಪರ್ಧಿಗಳಿಗೆ ಬಿಜೆಪಿ 15 ಕೋಟಿ ರೂಪಾಯಿ ಮತ್ತು ಸಚಿವ ಸ್ಥಾನದ ಆಮಿಷವೊಡ್ಡಿದೆ ಎಂದು ಆ ಪಕ್ಷದ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನಿಖೆಗೆ ಆದೇಶಿಸಿದ್ದಾರೆ.
ಆಪ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಆಪ್ ತನ್ನ ಆರೋಪಗಳನ್ನು ಹಿಂಪಡೆದು ಕ್ಷಮಾಪಣೆ ಕೇಳಬೇಕೆಂದು ಆಗ್ರಹಿಸಿದೆ. ಅದೇ ರೀತಿ, ದೆಹಲಿ ಬಿಜೆಪಿ ಸಾಮಾನ್ಯ ಕಾರ್ಯದರ್ಶಿ ವಿಷ್ಣು ಮಿತ್ತಲ್ ಅವರು ಲೆಫ್ಟಿನೆೆಂಟ್ ಗವರ್ನರ್ ಅವರಿಗೆ ಪತ್ರ ಬರೆದು, ಆಪ್ ಆರೋಪಗಳ ವಿರುದ್ಧ ಎಸಿಬಿಯಿಂದ ತನಿಖೆ ನಡೆಸುವಂತೆ ಪತ್ರ ಬರೆದು ಮನವಿ ಮಾಡಿದ್ದರು.
ದೆಹಲಿಯಲ್ಲಿ ಆಪ್ ಪ್ರಾಬಲ್ಯ: ದೆಹಲಿ ರಾಜಕೀಯ ಭೂಪಟದಿಂದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಹೊರಹಾಕಿರುವ ಆಮ್ ಆದ್ಮಿ ಪಾರ್ಟಿ 2015ರಿಂದಲೂ ಪ್ರಾಬಲ್ಯ ಸಾಧಿಸಿದೆ. 2015ರಲ್ಲಿ ಆಪ್ ಒಟ್ಟು 70 ವಿಧಾನಸಭಾ ಕ್ಷೇತ್ರಗಳ ಪೈಕಿ 67ನ್ನು ಗೆದ್ದು ಇತಿಹಾಸ ಸೃಷ್ಟಿಸಿತ್ತು. ಇದೇ ಪಕ್ಷ 2020ರ ಚುನಾವಣೆಯಲ್ಲೂ 62 ಕ್ಷೇತ್ರಗಳನ್ನು ಗೆದ್ದು ಮತ್ತೆ ಸರ್ಕಾರ ರಚಿಸಿತ್ತು. ದೆಹಲಿಯಲ್ಲಿ ಆಪ್ ದಿಗ್ವಿಜಯ ಕೇಜ್ರಿವಾಲ್ ಅವರಿಗೆ ರಾಷ್ಟ್ರಮಟ್ಟದಲ್ಲಿ ರಾಜಕೀಯ ಪ್ರಸಿದ್ಧಿ ಗಳಿಸಿಕೊಟ್ಟಿತು.
ಒಂದು ವೇಳೆ ಈ ಬಾರಿ ಬಿಜೆಪಿ ಚುನಾವಣೆ ಗೆದ್ದಿದ್ದೇ ಆದಲ್ಲಿ 26 ವರ್ಷಗಳ ನಂತರ ದೆಹಲಿಯಲ್ಲಿ ಕಮಲ ಅರಳಿದ ಇತಿಹಾಸ ಸೃಷ್ಟಿಯಾಗುತ್ತದೆ. ಈ ಮೂಲಕ ಆಪ್‌ನ ದಶಕಗಳ ಹಿಡಿತ ಕೊನೆಗೊಳ್ಳುತ್ತದೆ.
ಈ ಹಿಂದೆ, ದೆಹಲಿಯನ್ನು ಸುಮಾರು 15 ವರ್ಷಗಳ ಕಾಲ ಆಳಿದ ಕಾಂಗ್ರೆಸ್ ಕೂಡಾ ಈ ಚುನಾವಣೆ ಕಮ್‌ಬ್ಯಾಕ್ ಮಾಡಲು ಹವಣಿಸುತ್ತಿದೆ. ಆದರೆ ಕಳೆದ ಎರಡು ಚುನಾವಣೆಗಳನ್ನೂ ಪಕ್ಷ ಕನಿಷ್ಟ 1 ಸ್ಥಾನವನ್ನೂ ಪಡೆಯಲು ವಿಫಲವಾಗಿದೆ. ಬಹುತೇಕ ಎಲ್ಲ ಮತದಾನೋತ್ತರ ಸಮೀಕ್ಷೆಗಳು ಕೂಡಾ ಕಾಂಗ್ರೆಸ್‌ಗೆ ಈ ಬಾರಿ ಯಾವುದೇ ವಿಶೇಷ ಮಹತ್ವ ನೀಡಿಲ್ಲ.
ಇದನ್ನೂ ಓದಿ: ಎಎಪಿ ಅಭ್ಯರ್ಥಿಗಳ ತುರ್ತು ಸಭೆ ಕರೆದ ಕೇಜ್ರಿವಾಲ್; ಬಿಜೆಪಿ ಆಮಿಷದ ತನಿಖೆಗೆ ಎಲ್ಜಿ ಆದೇಶ