ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ತಮ್ಮ ಪತ್ನಿ ಹೆಸರಿಗೆ ಅಕ್ರಮವಾಗಿ ನಿವೇಶನ ಪಡೆದ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕರಣವನ್ನು ಸಿಬಿಐ ತನಿಖೆಗೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ಇಂದು ವಜಾಗೊಳಿಸಿ ಆದೇಶಿಸಿದೆ.
ಮುಡಾ ಹಗರಣವನ್ನು ಸಿಬಿಐ ಇಲ್ಲವೇ ಇತರೆ ಸ್ವತಂತ್ರ ಸಂಸ್ಥೆಯಿಂದ ತನಿಖೆ ಮಾಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಲೋಕಾಯುಕ್ತ ಸಂಸ್ಥೆ ಸ್ವತಂತ್ರವಾಗಿದೆಯೇ?, ಸಾಂವಿಧಾನಿಕ ನ್ಯಾಯಾಲಯ (ಹೈಕೋರ್ಟ್, ಸುಪ್ರೀಂ ಕೋರ್ಟ್)ಗಳು ಯಾವ ಸಂದರ್ಭದಲ್ಲಿ ತನಿಖೆ, ಮರು ತನಿಖೆಗೆ ಸಿಬಿಐಗೆ ವಹಿಸಿವೆ?, ಯಾವ ಪ್ರಕರಣದಲ್ಲಿ ನಿರಾಕರಿಸಿವೆ?, ಲೋಕಾಯುಕ್ತ ನಡೆಸಿದ ತನಿಖೆಗಳ ದಾಖಲೆಗಳನ್ನು ಪರಿಶೀಲಿಸಿ ಮರು ತನಿಖೆಗಾಗಿ ವರ್ಗಾಹಿಸಲು ಅರ್ಹವಾಗಿವೆಯೇ? ಎಂಬ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡು, ಅವುಗಳಿಗೆ ಉತ್ತರಿಸಿ ಈ ಆದೇಶಿಸಿದೆ.
ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಈಗಾಗಲೇ ಹಲವು ಪ್ರಕರಣದಲ್ಲಿ ನೀಡಿರುವ ತೀರ್ಪಿನ ಪ್ರಕಾರ ಲೋಕಾಯುಕ್ತ ಸಂಸ್ಥೆಯು ಬಾಹ್ಯ ಪ್ರಭಾವಗಳಿಂದ ಸ್ವಾತಂತ್ರ್ಯ ಮತ್ತು ರಕ್ಷಣೆ ಹೊಂದಿದೆ ಎಂಬುದು ಸ್ಪಷ್ಟಪಡುತ್ತದೆ. ಹಾಲಿ ಮುಖ್ಯಮಂತ್ರಿಯ ವಿರುದ್ಧದ ಅಪರಾಧವನ್ನು ತನಿಖೆ ಮಾಡಲು ಲೋಕಾಯುಕ್ತ ಸಂಸ್ಥೆ ಸಮರ್ಥವಾಗಿದೆ. ಭೂತಕಾಲವು ಚೆನ್ನಾಗಿದ್ದರೆ, ವರ್ತಮಾನವು ದೋಷಪೂರಿತವಾಗಿದೆ ಎಂದು ಕಂಡುಹಿಡಿಯಲಾಗುವುದಿಲ್ಲ. ಲೋಕಾಯುಕ್ತವು ಸ್ವತಂತ್ರ ಸಂಸ್ಥೆಯಾಗಿದ್ದು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಉನ್ನತ ಅಧಿಕಾರಿಗಳ ವಿರುದ್ಧದ ಆರೋಪಗಳನ್ನು ತನಿಖೆ ಮಾಡಲು ಸಮರ್ಥವಾಗಿರುತ್ತದೆ ಎಂದು ಪೀಠ ಹೇಳಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನಡೆಸಿರುವ ತನಿಖಾ ವರದಿಯನ್ನು ಪರಿಶೀಲಿಸಿದಾಗ, ತನಿಖೆಯು ಲೋಪದೋಷಗಳಿಂದ ಅಥವಾ ಪಕ್ಷಪಾತದಿಂದ ಕೂಡಿದೆ ಎಂದು ಕಂಡುಬಂದಿಲ್ಲ. ಹೀಗಾಗಿ, ಪ್ರಕರಣವನ್ನು ಮುಂದುವರಿದ ತನಿಖೆಗಾಗಿ ಅಥವಾ ಮರು ತನಿಖೆ ನಡೆಸುವುದಕ್ಕಾಗಿ ಸಿಬಿಐಗೆ ಆದೇಶಿಸಲು ಅಗತ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಲೋಕಾಯುಕ್ತ ಬಾಹ್ಯಶಕ್ತಿಗಳ ಪ್ರಭಾವಕ್ಕೆ ತುತ್ತಾಗುವ ಸಾಧ್ಯತೆಯ ಬಗ್ಗೆ ಅರ್ಜಿದಾರರು ವ್ಯಕ್ತಪಡಿಸಿರುವ ಅನುಮಾನಗಳಿಗೆ ಈಗಾಗಲೇ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳು ತಮ್ಮ ತೀರ್ಪುಗಳಲ್ಲಿ ಉತ್ತರ ನೀಡಿವೆ. ಲೋಕಾಯುಕ್ತ ಮತ್ತು ಲೋಕಾಯುಕ್ತ ಸಂಸ್ಥೆಯು ಪ್ರಶ್ನಾರ್ಹ ಸ್ವಾತಂತ್ರ್ಯದಿಂದೇನೂ ಬಳಲುತ್ತಿಲ್ಲ. ಅರ್ಜಿದಾರರು ಕೋರಿರುವ ಸಿಬಿಐ ತನಿಖೆಯೇ ಪರಿಹಾರವಲ್ಲ. ಈ ಹಿನ್ನೆಲೆಯಲ್ಲಿ ಈ ಅರ್ಜಿಯನ್ನು ವಜಾ ಮಾಡಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.
ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ ತನಿಖೆಯನ್ನು ಸ್ಥಳೀಯ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಿದೆ. ಆ ಅಪರಾಧ ಪ್ರಕರಣಗಳನ್ನು ಯಾವುದೇ ಸ್ವತಂತ್ರ ಸಂಸ್ಥೆ ತನಿಖೆ ನಡೆಸುತ್ತಿರಲಿಲ್ಲ. ಅದರೂ ಸಿಬಿಐಗೆ ವರ್ಗಾವಣೆ ಮಾಡಬೇಕಾದ ಅರ್ಹ ಪ್ರಕರಣಗಳಲ್ಲಿ ಮಾತ್ರ ತನಿಖೆಯನ್ನು ವರ್ಗಾಯಿಸಲಾಗಿದೆ. ಆದರೂ ಸಹ ಸ್ಥಳೀಯ ಪೊಲೀಸರು ಆರೋಪಗಳು ಅಥವಾ ಪ್ರಕರಣಗಳಲ್ಲಿ ಭಾಗಿಯಾಗಿ, ಅದರಿಂದ ದೊಡ್ಡ ಪರಿಣಾಮಗಳು ಉಂಟಾಗಬಹುದು ಎಂಬ ಪರಿಸ್ಥಿತಿಯಲ್ಲಿ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ.
ಲೋಕಾಯಕ್ತ ಅಥವಾ ಲೋಕಪಾಲ ಅಂತಹ ಸ್ವತಂತ್ರ ತನಿಖಾ ಸಂಸ್ಥೆಯಿಂದ ಮಧ್ಯಭಾಗದಲ್ಲಿ ತನಿಖೆಯನ್ನು ಸಿಬಿಐಗೆ ವಹಿಸಿದಂತಹ ಒಂದು ಪ್ರಕರಣವನ್ನು ನ್ಯಾಯಾಲಯದ ಮುಂದಿಟ್ಟಿಲ್ಲ. ಕಕ್ಷಿದಾರರನ್ನು ಸ್ಥಳೀಯ ಪೊಲೀಸರ ಮೇಲಿನ ಸಾಮಾನ್ಯ ರೀತಿಯಲ್ಲಿ ಆರೋಪ ಮಾಡಿದ ಮಾತ್ರಕ್ಕೆ ತನಿಖೆಯನ್ನು ಸಿಬಿಐಗೆ ವರ್ಗಾವಣೆ ಮಾಡಲಾಗುವುದಿಲ್ಲ. ಅಸಾಧಾರಣ ಹಾಗೂ ವ್ಯಾಪಕ ಪರಿಣಾಮಗಳನ್ನು ಬೀರುವ ಸಂದರ್ಭಗಳಲ್ಲಿ ತನಿಖೆಯನ್ನು ವರ್ಗಾವಣೆ ಮಾಡುವಂತಹ ಅಧಿಕಾರವನ್ನು ನ್ಯಾಯಾಲಯಗಳು ಮಿತ ಹಾಗೂ ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ. ಇಲ್ಲವಾದರೆ ಹೆಚ್ಚಿನ ಸಂಖ್ಯೆಯಲ್ಲಿ ಸಿಬಿಐಗೆ ಬರುತ್ತವೆ. ಆದ್ದರಿಂದ ಆರೋಪಿಗಳಲ್ಲಿ ಒಬ್ಬರು ಹಾಲಿ ಮುಖ್ಯಮಂತ್ರಿಯಾಗಿರುವುದರಿಂದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂಬ ವಾದವು ಸ್ವೀಕಾರಾರ್ಹವಲ್ಲ ಎಂದು ಪೀಠ ಹೇಳಿದೆ.
ಅಲ್ಲದೆ, ಅರ್ಜಿದಾರರು ಲೋಕಾಯುಕ್ತ ಕೋರ್ಟ್‌ಗೆ ದೂರು ಸಲ್ಲಿಸಿ, ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ನಿರ್ದೇಶಿಸುವಂತೆ ಕೋರಿದ್ದರು. ನಂತರ ರಾಜ್ಯಪಾಲರಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ್ದರು. ರಾಜ್ಯಪಾಲರನ್ನು ಅನುಮತಿ ನೀಡಿದ್ದು, ಅದನ್ನು ಪ್ರಶ್ನಿಸಿ ಮುಖ್ಯಮಂತ್ರಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಈ ಆದೇಶದ ಮೇರೆಗೆ ವಿಚಾರಣಾ ನ್ಯಾಯಾಲಯವು ಲೋಕಾಯುಕ್ತ ಪೊಲೀಸರಿಗೆ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ಸಲ್ಲಿಸಲು 2024ರ ಸೆ.25ರಂದು ಆದೇಶಿಸಿತ್ತು. ಮರು ದಿನ ಮಧ್ಯಾಹ್ನ 1.40ಕ್ಕೆ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದರು. ವಿಚಾರಣಾ ನ್ಯಾಯಾಲಯದ ಆದೇಶದ ಮೇಲಿನ ಶಾಹಿ(ಇಂಕ್) ಒಣಗುವ ಮೊದಲೇ, ಎಫ್‌ಐಆರ್ ದಾಖಲಾಗುವ ಒಂದು ಗಂಟೆಯ ಮುನ್ನವೇ ಅರ್ಜಿದಾರರು ಸಿಬಿಐ ತನಿಖೆಗೆ ಕೋರಿ ಹೈಕೋರ್ಟ್‌ಗೆ ಈ ಅರ್ಜಿ ಸಲ್ಲಿಸಿದ್ಧಾರೆ. ಈ ಅರ್ಜಿಯನ್ನು ಬಾಕಿ ಉಳಿಸಿಕೊಂಡು, 2024ರ ನವೆಂಬರ್ 5ರವರೆಗೆ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಮನವಿ ಮಾಡಿಲ್ಲ. ಮೊದಲ ಬಾರಿಗೆ ಈ ಅರ್ಜಿಯು ನವೆಂಬರ್ 5ರಂದು ವಿಚಾರಣೆಗೆ ಬಂದಿತ್ತು ಎಂದು ಪೀಠ ತಿಳಿಸಿದೆ.
ಅಂದರೆ ಅರ್ಜಿದಾರ ಮೊದಲಿಗೆ ಲೋಕಾಯುಕ್ತ ತನಿಖೆಗೆ ಕೋರಿದ್ದರು. ತನಿಖೆ ಏನೆಂದು ತಿಳಿಯದೇ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ ಎಂಬ ಒಂದೇ ಕಾರಣದಿಂದ ಸಿಬಿಐ ತನಿಖೆಗೆ ಕೋರಿದ್ಧಾರೆ. ಮತ್ತು ಲೋಕಾಯುಕ್ತ ತನಿಖಾ ಸಂಸ್ಥೆಯ ಸ್ವಾತಂತ್ರ್ಯವನ್ನು ಪ್ರಶ್ನಿಸಿದ್ದರು ಎಂದು ನ್ಯಾಯಾಪೀಠ ತನ್ನ ಆದೇಶದಲ್ಲಿ ವಿವರಿಸಿದೆ.
ಇದನ್ನೂ ಓದಿ: ಮುಡಾ ಕುರಿತು ಹೈಕೋರ್ಟ್ ಮಹತ್ವದ ತೀರ್ಪು: ಸಚಿವರ ಹೇಳಿಕೆಗಳು
ಇದನ್ನೂ ಓದಿ: ಮುಡಾ ಪ್ರಕರಣ: ಸಿದ್ದರಾಮಯ್ಯ ವಿರುದ್ಧ ಸಿಬಿಐ ತನಿಖೆಗೆ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್