ಜರ್ಮನಿ:ಇಡೀ ಜಗತ್ತನ್ನು ಬೆಚ್ಚಿಬೀಳಿಸಿದ ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ವ್ಯಾಕ್ಸಿನ್ ಕೋಟ್ಯಂತರ ಜೀವಗಳನ್ನು ಉಳಿಸಿದೆ. ಈ ಲಸಿಕೆಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇದರಿಂದ ನಾವು ವೈರಸ್‌ನಿಂದ ಸೋಂಕಿಗೆ ಒಳಗಾಗುವುದಿಲ್ಲ. ಲಸಿಕೆ ಪ್ರಕಾರವನ್ನು ಅವಲಂಬಿಸಿ ಇವುಗಳನ್ನು ವಿವಿಧ ಪ್ರಮಾಣದಲ್ಲಿ ನೀಡಲಾಗುತ್ತದೆ. ಆದರೂ ಕೆಲವರು ಅತಿ ಜಾಗರೂಕರಾಗಿ ಹೇಳಿದ್ದಕ್ಕಿಂತ ಹೆಚ್ಚಾಗಿಯೇ ಲಸಿಕೆ ಹಾಕಿಸಿಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ.
ಹೌದು, ಇಲ್ಲೋರ್ವ ವ್ಯಕ್ತಿ ಎಲ್ಲರನ್ನೂ ಬೆಚ್ಚಿ ಬೀಳಿಸುವಂತೆ ಮಾಡಿದ್ದಾರೆ. ಜರ್ಮನಿಯ ವ್ಯಕ್ತಿಯೊಬ್ಬರು ‘ನಾನು 200ಕ್ಕೂ ಹೆಚ್ಚು ಬಾರಿ ಲಸಿಕೆ ಹಾಕಿಸಿಕೊಂಡಿದ್ದೇನೆ’ ಎಂದು ಘೋಷಿಸಿದ್ದಾರೆ. ಹೀಗಾಗಿ ವಿಜ್ಞಾನಿಗಳು ಆತನ ಮೇಲೆ ಅಧ್ಯಯನ ಮಾಡಿದ್ದು, ಈ ವೇಳೆ ಕೆಲವೊಂದು ಆಸಕ್ತಿದಾಯಕ ವಿಷಯಗಳನ್ನು ಕಂಡುಕೊಂಡಿದ್ದಾರೆ.
ಜರ್ಮನಿಯಲ್ಲಿ 6 ಕೋಟಿಗೂ ಹೆಚ್ಚು ಜನರು ಕೋವಿಡ್ ಲಸಿಕೆ ತೆಗೆದುಕೊಂಡಿದ್ದಾರೆ. ಆದರೂ ಅವರಲ್ಲಿ ಹಲವರಿಗೆ ನಿಗದಿತ ಸಮಯಕ್ಕಿಂತ ಹೆಚ್ಚು ಬಾರಿ ಲಸಿಕೆಯನ್ನು ನೀಡಲಾಯಿತು. ಒಬ್ಬ ವ್ಯಕ್ತಿ ತಾನು ಲಸಿಕೆಯನ್ನು 217 ಬಾರಿ ತೆಗೆದುಕೊಂಡಿದ್ದೇನೆ ಎಂದು ಹೇಳಿದರು. ಅಧಿಕೃತ ವಿವರಗಳ ಪ್ರಕಾರ, ಆ ವ್ಯಕ್ತಿ 134 ಬಾರಿ ಲಸಿಕೆ ಹಾಕಿಸಿಕೊಂಡಿರುವುದು ತಿಳಿದುಬಂದಿದೆ. ಎರ್ಲಾಂಗೆನ್-ನರ್ನ್‌ಬರ್ಗ್‌ನಲ್ಲಿರುವ ಫ್ರೆಡ್ರಿಕ್ ಅಲೆಕ್ಸಾಂಡರ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವು ಈ ವಿಷಯದ ಬಗ್ಗೆ ತಿಳಿದಾಗ ಆ ವ್ಯಕ್ತಿಯನ್ನು ಸಂಪರ್ಕಿಸಿತು. ಹೆಚ್ಚಿನ ಪ್ರಮಾಣದ ಲಸಿಕೆಗಳು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಯಾವ ಪರಿಣಾಮವನ್ನು ಬೀರುತ್ತವೆ ಎಂಬುದನ್ನು ಕಂಡುಹಿಡಿಯಲು ವ್ಯಕ್ತಿಯ ದೇಹದ ಮೇಲೆ ಹಲವಾರು ಪರೀಕ್ಷೆಗಳನ್ನು ಮಾಡಲಾಯಿತು. ಈ ಅಧ್ಯಯನವನ್ನು ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.