ಪೊಡ್ಗೊರಿಕಾ (ಮಾಂಟೆನೆಗ್ರೊ): ಮಾಂಟೆನೆಗ್ರೊದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 12 ಜನರನ್ನು ಭೀಕರವಾಗಿ ಗುಂಡಿಕ್ಕಿ ಕೊಂದ ನಂತರ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಪಶ್ಚಿಮ ಪಟ್ಟಣ ಸೆಟಿಂಜೆಯಲ್ಲಿ ಬುಧವಾರ ಬಾರ್ವೊಂದರಲ್ಲಿ ನಡೆದ ಜಗಳದ ನಂತರ ನಡೆದ ಈ ಗುಂಡಿನ ದಾಳಿಯಲ್ಲಿ ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಂಡು ಹಾರಿಸಿದ ವ್ಯಕ್ತಿಯನ್ನು 45 ವರ್ಷದ ಅಕೊ ಮಾರ್ಟಿನೊವಿಕ್ ಎಂದು ಗುರುತಿಸಲಾಗಿದ್ದು, ಬಾರ್ ಮಾಲೀಕ, ಬಾರ್ ಮಾಲೀಕನ ಮಕ್ಕಳು ಮತ್ತು ಅವರ ಕುಟುಂಬ ಸದಸ್ಯರನ್ನು ಹತ್ಯೆ ಮಾಡಲಾಗಿದೆ ಎಂದು ಗೃಹ ಸಚಿವ ಡ್ಯಾನಿಲೊ ಸರಾನೊವಿಕ್ ತಿಳಿಸಿದ್ದಾರೆ.
ಪರಾರಿಯಾಗಿದ್ದ ವ್ಯಕ್ತಿ ಸುತ್ತುವರೆದ ಪೊಲೀಸ್; ತಲೆಗೆ ಗುಂಡಿಕ್ಕಿಕೊಂಡ ಹಂತಕ -ಹಿಂಸಾಚಾರದ ನಂತರ ಪರಾರಿಯಾಗಿದ್ದ ದಾಳಿಕೋರನನ್ನು ಪತ್ತೆ ಹಚ್ಚಿದ ಪೊಲೀಸರು ಆತನನ್ನು ಸುತ್ತುವರೆದಿದ್ದರು. ಈ ಸಂದರ್ಭದಲ್ಲಿ ಆತ ತಲೆಗೆ ಗುಂಡು ಹಾರಿಸಿಕೊಂಡು ಆತ ಮೃತಪಟ್ಟಿದ್ದಾನೆ ಎಂದು ಸರನೋವಿಕ್ ಹೇಳಿದರು.
ರಾಜಧಾನಿ ಪೊಡ್ಗೋರಿಕಾದಿಂದ ವಾಯುವ್ಯಕ್ಕೆ 30 ಕಿಲೋಮೀಟರ್ ದೂರದಲ್ಲಿರುವ ಸೆಟಿಂಜೆ ಪಟ್ಟಣದಲ್ಲಿ ದಾಳಿಕೋರನನ್ನು ಹುಡುಕಲು ಪೊಲೀಸರು ವಿಶೇಷ ತಂಡಗಳನ್ನು ಕಳುಹಿಸಿದ್ದರು. ಪೊಲೀಸರು ಬೀದಿ ಬೀದಿಗಳಲ್ಲಿ ಪತ್ತೆ ಕಾರ್ಯಾಚರಣೆ ನಡೆಸಿ ಹಂತಕನನ್ನು ಪತ್ತೆ ಮಾಡಿದ್ದರು. ಗುಂಡು ಹಾರಿಸಿಕೊಂಡು ಗಾಯಗೊಂಡಿದ್ದ ಮಾರ್ಟಿನೊವಿಕ್ ನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಎಂದು ಸರನೊವಿಕ್ ಹೇಳಿದರು.