ನವದೆಹಲಿ: ಭಾರತದಲ್ಲಿ ಮುಸ್ಲಿಮರು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ಅಸಡ್ಡೆ ತೋರಿಸುವ ಜನರನ್ನು ಮುಸ್ಲಿಮರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹೇಳಿಕೆಯನ್ನು ಭಾರತ ಬಲವಾಗಿ ಖಂಡಿಸಿದೆ. ಇಂಥ ಹೇಳಿಕೆಗಳು ಮಾಹಿತಿ ಕೊರತೆಯಿಂದ ಕೂಡಿವೆ ಹಾಗು ಇದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ತಿಳಿಸಿದೆ.
ಇರಾನ್ ಹೇಳಿಕೆ ಖಂಡಿಸಿದ ಭಾರತ: ಭಾರತದ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿ, 'ಭಾರತದ ಮೇಲೆ ಬೊಟ್ಟು ಮಾಡಿ ತೋರಿಸುವವರು ಮೊದಲು ತಮ್ಮ ದೇಶದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಕುರಿತ ದಾಖಲೆಗಳನ್ನು ಪರಿಶೀಲಿಸಬೇಕು. ಆಮೇಲೆ ಮತ್ತೊಬ್ಬರ ಮೇಲೆ ಮೇಲೆ ತಮ್ಮ ಅವಲೋಕನಗಳನ್ನು ಮಾಡಬೇಕು' ಎಂದು ಸಲಹೆ ನೀಡಿದೆ. ಅಲ್ಲದೇ, ಭಾರತದಲ್ಲಿ ಅಲ್ಪಸಂಖ್ಯಾತರ ಕುರಿತು ಇರಾನ್‌ನ ಸರ್ವೋಚ್ಚ ನಾಯಕ ನೀಡಿರುವ ಹೇಳಿಕೆಗಳನ್ನು ನಾವು ಬಲವಾಗಿ ತಿರಸ್ಕರಿಸುತ್ತೇವೆ. ಇಂಥ ಹೇಳಿಕೆಗಳನ್ನು ಒಪ್ಪಲಾಗದು' ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ಖಮೇನಿ ಹೇಳಿದ್ದೇನು?: ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಖಮೇನಿ, 'ಇಸ್ಲಾಮಿಕ್ ಉಮ್ಮಾ ಎಂಬ ನಮ್ಮ ಹಂಚಿಕೆಯ ಗುರುತಿನ ಬಗ್ಗೆ ಇಸ್ಲಾಮಿನ ಶತ್ರುಗಳು ಯಾವಾಗಲೂ ನಮ್ಮನ್ನು ಅಸಡ್ಡೆ ಮಾಡಲು ಪ್ರಯತ್ನಿಸುತ್ತಿದ್ದಾರೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದುವರೆದು ತಮ್ಮ ಪೋಸ್ಟ್‌ನಲ್ಲಿ, 'ಮ್ಯಾನ್ಮಾರ್, ಗಾಜಾ, ಭಾರತ ಅಥವಾ ಯಾವುದೇ ಸ್ಥಳಗಳಲ್ಲಿ ಮುಸ್ಲಿಮರು ತೊಂದರೆ ಅನುಭವಿಸುತ್ತಿರುವುದನ್ನು ನಾವು ನೋಡಿ ಸುಮ್ಮನಾದರೆ ನಮ್ಮನ್ನು ನಾವು ಮುಸ್ಲಿಮರೆಂದು ಗುರುತಿಸಿಕೊಳ್ಳಲಾಗದು' ಎಂದಿದ್ದಾರೆ.
ಇದರ ಜೊತೆಗೆ, ಇನ್ನೊಂದು ಪೋಸ್ಟ್‌ನಲ್ಲಿ, ಗಾಜಾ ಮತ್ತು ಪ್ಯಾಲೆಸ್ಟೈನ್ ಬಗ್ಗೆ ಪ್ರತಿಕ್ರಿಯಿಸುತ್ತಾ, 'ಒಗ್ಗಟ್ಟಿನಿಂದ ಮಾತ್ರ ನಾವು ನಮ್ಮ ಮಹತ್ವದ ಗುರಿಯಾದ ಇಸ್ಲಾಮಿಕ್ ಉಮ್ಮಾ ಗೌರವವನ್ನು ಸಾಧಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ದೌರ್ಜನ್ಯಕ್ಕೊಳಗಾದ ಗಾಜಾ ಮತ್ತು ಪ್ಯಾಲೆಸ್ಟೈನ್ ಜನರಿಗೆ ನೆರವು ನೀಡುವುದು ನಮ್ಮ ಕರ್ತವ್ಯ. ಈ ಕರ್ತವ್ಯವನ್ನು ಯಾರು ನಿರ್ಲಕ್ಷಿಸುತ್ತಾರೋ ಅವರನ್ನು ದೇವರು ಪ್ರಶ್ನಿಸುತ್ತಾನೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ:ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಮೊದಲ ವಿದೇಶ ಪ್ರವಾಸ ಇರಾಕ್ಗೆ: ನಾಳೆ ಬಾಗ್ದಾದ್ಗೆ ಭೇಟಿ - Pezeshkian to Visit Iraq