ಪ್ರಯಾಗ್ರಾಜ್ (ಉತ್ತರ ಪ್ರದೇಶ) : ಹಿಂದು ಧರ್ಮೀಯರ ಮಹಾಮಿಲನ ಎಂದೇ ಹೇಳಲಾಗುವ ಮಹಾಕುಂಭದಲ್ಲಿ ಹಲವು ಅಚ್ಚರಿಯ ಘಟನೆಗಳು ಬೆಳಕಿಗೆ ಬರುತ್ತಿವೆ. ಅಘೋರಿಗಳು, ಹಠಸಿದ್ಧಿ ಸಾಧುಗಳ ಕಠಿಣ ನಿಯಮಗಳ ಮಧ್ಯೆ 13 ವರ್ಷದ ಬಾಲಕಿ ತಾನು ಸನ್ಯಾಸಿಯಾಗುವುದಾಗಿ ನಿರ್ಧರಿಸಿದ್ದಾಳೆ.
ರಾಖಿ ಧಾಕ್ರೆ ಎಂಬ 13 ವರ್ಷದ ಬಾಲಕಿ ತನ್ನ ಮನದಾಸೆಯನ್ನು ಮಹಾಂತ ಕೌಶಲ್ ಗಿರಿ ಬಾಬಾ ಅವರ ಹತ್ತಿರ ಹೇಳಿದ್ದಾಳೆ. ಆದರೆ, ಅವರು ಇದನ್ನು ಮೊದಲು ನಿರಾಕರಿಸಿದ್ದಾರೆ. ಸನ್ಯಾಸ ಜೀವನ ಅತಿ ಕಠಿಣ. ಇದು ನಿನ್ನ ವಯಸ್ಸಿಗೆ ಸರಿ ಹೊಂದಲ್ಲ ಎಂದು ತಿಳಿ ಹೇಳಿದ್ದಾರೆ. ಆದರೆ, ದಿಟ್ಟ ನಿರ್ಧಾರಕ್ಕೆ ಬಂದಿರುವ ಬಾಲೆ ತಾನು ಸನ್ಯಾಸಿಯಾಗಲು ನಿರ್ಣಯಿಸಿದ್ದಾಗಿ ತಿಳಿಸಿದ್ದಾಳೆ.
ರಾಖಿ ಧಾಕ್ರೆ ತನ್ನ ಕುಟುಂಬವನ್ನು ತೊರೆದು ತಮ್ಮ ಗುರು ಮಹಾಂತ ಕೌಶಲ್ ಗಿರಿ ಮಹಾರಾಜ್ ಅವರೊಂದಿಗೆ ವಾಸಿಸಲು ನಿಶ್ಚಿಯಿಸಿದ್ದಾರೆ. ಆಧ್ಯಾತ್ಮಿಕ ಜೀವನಕ್ಕೆ ತನ್ನನ್ನು ಸಮರ್ಪಿಸಿಕೊಳ್ಳಲು ರೆಡಿ ಆಗಿದ್ದಾಳೆ.
ನನ್ನ ಬಾಲ್ಯದ ಕನಸು: ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ರಾಖೆ ಧಾಕ್ರೆ ಗೌರಿ ಗಿರಿ, "ನಾನು 11ನೇ ವರ್ಷದಲ್ಲಿ ಗುರು ದೀಕ್ಷೆ ತೆಗೆದುಕೊಂಡಿದ್ದೇನೆ. ಈಗ ನನಗೆ 13 ವರ್ಷ. ಈ ವಯಸ್ಸಿನಲ್ಲಿ ಸನ್ಯಾಸ ತೆಗೆದುಕೊಳ್ಳಲು ಸಿದ್ಧಳಿದ್ದೇನೆ. ಸನ್ಯಾಸಿಯಾಗಿ ಸಂತಳಾಗಬೇಕು ಎಂಬುದು ನನ್ನ ಬಾಲ್ಯದ ಕನಸು. ಆದರೆ, ಚಿಕ್ಕವಳಾದ ಕಾರಣ ನನ್ನ ಕುಟುಂಬ ಸದಸ್ಯರು ನನ್ನ ಮಾತನ್ನು ಕೇಳಲಿಲ್ಲ ಎಂದಿದ್ದಾರೆ.
ಈಗ ಮಹಾಕುಂಭ ಮೇಳದಲ್ಲಿ ನನ್ನ ಮನದ ಇಂಗಿತವನ್ನು ಮಹಾಂತ ಗುರುಗಳಿಗೆ ತಿಳಿಸಿದ್ದೇನೆ. ಅವರು ನಿರಾಕರಿಸಿದರೂ, ನನ್ನ ನಿರ್ಣಯ ನಿಶ್ಚಲವಾಗಿದೆ. ನಾನು ಇನ್ನು ಮುಂದೆ ಸನ್ಯಾಸ ಜೀವನ ಸಾಗಿಸುತ್ತೇನೆ. ಪುರುಷನು ತನ್ನ ಬಯಕೆಗಳ ಯಜಮಾನ. ಅದರಂತೆ ಮಹಿಳೆಯೂ ಸ್ವತಂತ್ರಳು ಎಂಬುದು ಆಕೆಯ ದೃಢ ನಿರ್ಧಾರವಾಗಿದೆ.
ಮಹಂತ್ ಕೌಶಲ್ ಗಿರಿ ಬಾಬಾ ಮಾತನಾಡಿ, ಸನ್ಯಾಸ ಜೀವನ ಕಠಿಣವಾದ ಹಾದಿ. ಮಗುವಾಗಿರುವ ಗೌರಿ ಗಿರಿ ಇದನ್ನು ಅರ್ಥಮಾಡಿಕೊಳ್ಳಬೇಕು. ಈ ಕಠಿಣ ನಿಯಮಗಳನ್ನು ಅನುಸರಿಸಲು ಆಕೆ ಸಿದ್ಧವಾಗಬೇಕು ಎಂದು ಹೇಳಿದ್ದಾರೆ.
ಪುಣ್ಯಸ್ನಾನಕ್ಕೆ ಪ್ರಯಾಗ್ರಾಜ್ ಸರ್ವಸಿದ್ಧ : 12 ವರ್ಷಗಳ ನಂತರ ಮಹಾಕುಂಭ ಮೇಳವನ್ನು ಆಚರಿಸಲಾಗುತ್ತಿದೆ. ಪುಣ್ಯಸ್ನಾನಕ್ಕೆ ಭಾರತದ 45 ಕೋಟಿಗೂ ಅಧಿಕ ಭಕ್ತರು ಉತ್ತರಪ್ರದೇಶದ ಪ್ರಯಾಗ್ರಾಜ್ಗೆ ಆಗಮಿಸುವ ನಿರೀಕ್ಷೆ ಇದೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಭಕ್ತರು ಮಿಂದೆದ್ದು ಕೃತಾರ್ಥತೆ ಪಡೆಯಲಿದ್ದಾರೆ. ಕುಂಭ ಮೇಳದ ಜನವರಿ 14ರ ಮಕರ ಸಂಕ್ರಾಂತಿಯಂದು ಆರಂಭವಾಗಲಿದ್ದು, ಜನವರಿ 29 (ಮೌನಿ ಅಮಾವಾಸ್ಯೆ), ಮತ್ತು ಫೆಬ್ರವರಿ 3 (ಬಸಂತ್ ಪಂಚಮಿ) ಮತ್ತು ಫೆ.26ರಂದು ಸಮಾರೋಪಗೊಳ್ಳಲಿದೆ.
ಇದನ್ನೂ ಓದಿ: ಮಹಾ ಕುಂಭಮೇಳಕ್ಕೆ ತೆರಳುತ್ತಿದ್ದೀರಾ? ಈ ಟಿಪ್ಸ್ ಅನುಸರಿಸಿದರೆ ನಿಮ್ಮ ಪ್ರಯಾಣ ಸುಖಕರ & ಸುರಕ್ಷಿತ