ಬೆಂಗಳೂರು: ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಚಾರಣೆ ಹಾಗೂ ವಿಲೇವಾರಿ ಮಾಡಲು ನೆರವಾಗಲು ವಿದ್ಯುನ್ಮಾನ ಎಲೆಕ್ಟ್ರಾನಿಕ್ ಸಾಕ್ಷ್ಯಾಧಾರಗಳ ಪರಿಶೀಲನೆ ಮತ್ತು ತಪಾಸಣೆಗೆ ರಾಜ್ಯದಲ್ಲಿ ಅಗತ್ಯ ಪ್ರಮಾಣದಲ್ಲಿ ಪರೀಕ್ಷಕರು/ಪರಿಣಿತರನ್ನು ತುರ್ತಾಗಿ ನೇಮಕ ಮಾಡಲು ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಬೆಂಗಳೂರಿನ ಬಾಬುಸ್ಪಾಳ್ಯದ ನಿವಾಸಿ ವಿ. ಶ್ರೀನಿವಾಸ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ವಿಭಾಗೀಯ ಪೀಠ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಯಲ್ಲಿ ಕಂಪ್ಯೂಟರ್ ಹಾಗೂ ಡಿಜಿಟಲ್ ಸ್ವರೂಪದ ಎಲೆಕ್ಟ್ರಾನಿಕ್ ಸಾಕ್ಷ್ಯದ ಸೀಕಾರಾರ್ಹತೆ ಬಗ್ಗೆ ಹಳೆಯ ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 67 (ಬಿ) ಹೇಳುತ್ತದೆ. ಹೊಸದಾಗಿ ಜಾರಿಗೆ ಬಂದಿರುವ ಭಾರತೀಯ ಸಾಕ್ಷ್ಯ ಅಧಿನಿಯಮದ ಸೆಕ್ಷನ್ 64 ರಲ್ಲಿ ಎಲೆಕ್ಟ್ರಾನಿಕ್ ಸಾಕ್ಷ್ಯವನ್ನು ಪರೀಕ್ಷಕರು/ಪರಿಣಿತರು ದೃಢಪಡಿಸಬೇಕಾಗುತ್ತದೆ. ಅದರ ಪ್ರಕಾರ ಎಲೆಕ್ಟ್ರಾನಿಕ್ ಸ್ವರೂಪದಲ್ಲಿ ಯಾವುದೇ ಸಾಕ್ಷ್ಯವನ್ನು ಪರಿಣಿತರು ಮತ್ತು ಪರೀಕ್ಷಕ ಸಹಿಯೊಂದಿಗೆ ದೃಢಪಡಿಸಿ ಪ್ರಮಾಣ ಪತ್ರ ನೀಡಬೇಕು. ಆ ಪ್ರಮಾಣ ಪತ್ರ ಜೊತೆಗಿನ ಎಲೆಕ್ಟ್ರಾನಿಕ್ ಸಾಕ್ಷ್ಯವನ್ನು ಮಾತ್ರ ಕೋರ್ಟ್ನಲ್ಲಿ ಸಾಕ್ಷ್ಯವಾಗಿ ಪರಿಗಣಿಸಲಾಗುತ್ತದೆ ಎಂದು ಪೀಠಕ್ಕೆ ಹೇಳಿದರು.
ಜೊತೆಗೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 79(ಎ) ಅಡಿಯಲ್ಲಿ ಎಲೆಕ್ಟ್ರಾನಿಕ್ ಸಾಕ್ಷ್ಯದ ಪರೀಕ್ಷಕರು/ಪರಿಣಿತರನ್ನು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ನಿಯೋಜಿಸಬೇಕು. ಕೇಂದ್ರ ಸರ್ಕಾರವು ಒಟ್ಟು 16 ಪರೀಕ್ಷಕರು/ಪರಿಣಿತರನ್ನು ನೇಮಕ ಮಾಡಿದೆ. ಆದರೆ, ಕರ್ನಾಟಕದಲ್ಲಿ ಇಡೀ ರಾಜ್ಯಕ್ಕೆ ಸಂಬಂಧಿಸಿದಂತೆ ಕೇವಲ ಒಬ್ಬ ಪರೀಕ್ಷಕರನ್ನು ನಿಯೋಜಿಸಲಾಗಿದೆ. ಬೆಂಗಳೂರಿನ ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಏಕೈಕ ಪರೀಕ್ಷಕರು ಇದ್ದಾರೆ. ಕ್ರಿಮಿನಲ್ ಪ್ರಕರಣದ ವಿಚಾರಣೆಗಾಗಿ ಎಲೆಕ್ಟ್ರಾನಿಕ್ ಸಾಕ್ಷ್ಯವನ್ನು ಅವರಿಂದ ಪ್ರಮಾಣ ಪತ್ರ ಪಡೆಯಬೇಕಾದರೆ ಸಾಕಷ್ಟು ವಿಳಂಬ ಹಾಗೂ ಕಷ್ಟ ಸಾಧ್ಯವಾಗುತ್ತದೆ. ಪ್ರಮಾಣಪತ್ರ ಸಲ್ಲಿಸದೆ ಹೋದರೆ ಕ್ರಿಮಿನಲ್ ಪ್ರಕರಣದ ವಿಚಾರಣೆ ಸಹ ವಿಳಂಬವಾಗುತ್ತದೆ. ಆದ್ದರಿಂದ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 79(ಎ) ಪ್ರಕಾರ ರಾಜ್ಯಕ್ಕೆ ಸಂಬಂಧಿಸಿದಂತೆ ಅಗತ್ಯ ಪ್ರಮಾಣದಲ್ಲಿ ಪರೀಕ್ಷಕರ/ಪರಿಣಿತರನ್ನು ಕಾಲಮಿತಿಯೊಳಗೆ ನಿಯೋಜಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು.
ಈ ವಾದ ಪರಿಗಣಿಸಿದ ನ್ಯಾಯಪೀಠ, ಅರ್ಜಿದಾರರು ಎತ್ತಿರುವ ವಿಚಾರ ಮಹತ್ವದ್ದಾಗಿದೆ. ಕ್ರಿಮಿನಲ್ ಪ್ರಕರಣಗಳ ವಿಚಾರಣೆಯನ್ನು ತ್ವರಿತಗತಿಯಾಗಿ ನಡೆಸಬೇಕಿದೆ. ಎಲೆಕ್ಟ್ರಾನಿಕ್ ಸಾಕ್ಷ್ಯವನ್ನು ನ್ಯಾಯಾಲಯವು ಪರಿಗಣಿಸಬೇಕಾದರೆ, ಅದನ್ನು ಪರೀಕ್ಷಕರು/ಪರಿಣಿತರು ದೃಢೀಕರಿಸಬೇಕಿದೆ. ಇಲ್ಲವಾದರೆ ವಿಚಾರಣೆ ವಿಳಂಬವಾಗುತ್ತದೆ ಎಂದು ಅಭಿಪ್ರಾಯಪಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತು. ಜೊತೆಗೆ, ಫೆ.20ರಂದು ನಡೆಯುವ ವಿಚಾರಣೆ ವೇಳೆ ಅರ್ಜಿ ಕುರಿತ ರಾಜ್ಯ ಸರ್ಕಾರವು ಉತ್ತರಿಸಬೇಕು ಎಂದು ನಿರ್ದೇಶಿಸಿ ಆದೇಶಿಸಿತು.
ಇದನ್ನೂ ಓದಿ: