ಮಾಸ್ಕೋ(ರಷ್ಯಾ): ಪ್ರಧಾನಿ ನರೇಂದ್ರ ಮೋದಿ ಅವರ 'ಭಾರತ ಮೊದಲು' ನೀತಿ ಮತ್ತು 'ಮೇಕ್ ಇನ್ ಇಂಡಿಯಾ' ಉಪಕ್ರಮವನ್ನು ಶ್ಲಾಘಿಸಿದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಸರಕುಗಳ ಉತ್ಪಾದನೆಗಾಗಿ ಭಾರತದಲ್ಲಿ ಹೂಡಿಕೆ ಮಾಡಲು ರಷ್ಯಾ ಇಚ್ಛಿಸುವುದಾಗಿ ಹೇಳಿದರು. ಮಾಸ್ಕೋದಲ್ಲಿ ನಡೆದ 15ನೇ ವಿಟಿಬಿ ರಷ್ಯಾ ಕಾಲಿಂಗ್ ಇನ್ವೆಸ್ಟ್‌ಮೆಂಟ್ ಫೋರಂ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಪುಟಿನ್, ರಷ್ಯಾದ ಆಮದು ಬದಲಿ ಕಾರ್ಯಕ್ರಮ (Import Substitution Programe) ಮತ್ತು ಭಾರತದ 'ಮೇಕ್ ಇನ್ ಇಂಡಿಯಾ' ಉಪಕ್ರಮದ ನಡುವಿನ ಹೋಲಿಕೆಗಳನ್ನು ವಿವರಿಸಿದರು. ಎರಡು ದಿನಗಳ ಸಮಾವೇಶ ಬುಧವಾರ ಮಾಸ್ಕೋದಲ್ಲಿ ಪ್ರಾರಂಭವಾಗಿದೆ.
"ಪ್ರಧಾನಿ ಮೋದಿ ಅವರು ಮೇಕ್ ಇನ್ ಇಂಡಿಯಾ ಎಂಬ ನಮ್ಮ ರೀತಿಯ ಯೋಜನೆಯೊಂದನ್ನು ಜಾರಿಗೊಳಿಸಿದ್ದಾರೆ. ನಾವೂ ಸಹ ಭಾರತದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಲು ಸಿದ್ಧರಿದ್ದೇವೆ. ಪ್ರಧಾನಮಂತ್ರಿಯವರ ನಾಯಕತ್ವದಲ್ಲಿ ಭಾರತ ಸರ್ಕಾರವು ಭಾರತವನ್ನು ಮೊದಲ ಸ್ಥಾನದಲ್ಲಿರಿಸುವ ನೀತಿಯಿಂದ ಹೂಡಿಕೆಗೆ ಪ್ರಶಸ್ತ ದೇಶವಾಗಿದೆ. ಭಾರತದಲ್ಲಿ ಹೂಡಿಕೆ ಮಾಡುವುದು ಲಾಭದಾಯಕ ಎಂಬುದು ನಮ್ಮ ಭಾವನೆಯಾಗಿದೆ" ಎಂದು ರಷ್ಯಾ ಅಧ್ಯಕ್ಷರು ಹೇಳಿದರು.
ರಷ್ಯಾದ ತೈಲ ದೈತ್ಯ ರೋಸನೆಫ್ಟ್ ಇತ್ತೀಚೆಗೆ ಭಾರತದಲ್ಲಿ 20 ಬಿಲಿಯನ್ ಡಾಲರ್ ಹೂಡಿಕೆ ಮಾಡಿರುವುದನ್ನು ಪುಟಿನ್ ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಗುರಿಯನ್ನು ಹೊಂದಿರುವ 'ಮೇಕ್ ಇನ್ ಇಂಡಿಯಾ' ಯೋಜನೆಯು ಜಾಗತಿಕ ಆರ್ಥಿಕತೆಯಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.