ನವದೆಹಲಿ: ಸಿಖ್ ಪ್ರತ್ಯೇಕತಾವಾದಿ ಗುರುಪತ್‌ವಂತ್ ಸಿಂಗ್ ಪನ್ನುನ್ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ರಚಿಸಲಾದ ಭಾರತೀಯ ತನಿಖಾ ಸಮಿತಿಯು ಅಮೆರಿಕದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ. ಅಮೆರಿಕ ನೀಡಿರುವ ಮಾಹಿತಿಗಳನ್ನು ತಾನು ಗಂಭೀರವಾಗಿ ಪರಿಗಣಿಸಿರುವುದಾಗಿ ಭಾರತ ಗುರುವಾರ ಹೇಳಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿಯನ್ನು ತಿಳಿಸಿದ್ದಾರೆ. ಗುರುಪತ್‌ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ US ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್ (DoJ) ನ ದೋಷಾರೋಪಣೆಯಲ್ಲಿ ಗುರುತಿಸಲಾದ ವ್ಯಕ್ತಿಯ ಮೇಲಿನ ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯೆಯಾಗಿ, ಜೈಸ್ವಾಲ್ ಅವರು ಆ ವ್ಯಕ್ತಿ ' ಇನ್ನು ಮುಂದೆ ಭಾರತ ಸರ್ಕಾರದ ಉದ್ಯೋಗಿಯಲ್ಲ' ಎಂದು ಖಚಿತಪಡಿಸಿದ್ದಾರೆ. ಪನ್ನುನ್ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಆರೋಪಗಳನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಅಮೆರಿಕ ಈ ಹಿಂದೆ ತಿಳಿಸಿತ್ತು.
ಅಮೆರಿಕದ ಮಾಹಿತಿ ಆಧರಿಸಿ ವಿಚಾರಣಾ ಸಮಿತಿ:ಇನ್ನು ಭಾರತೀಯ ಅಧಿಕಾರಿಗಳ ತಂಡವು ಇತ್ತೀಚೆಗೆ ವಾಷಿಂಗ್ಟನ್‌ನಲ್ಲಿ ವಿದೇಶಾಂಗ ಇಲಾಖೆ ಹಾಗೂ ನ್ಯಾಯಾಂಗ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿತ್ತು. ಅಮೆರಿಕ ಮಾಡಿರುವ ಆರೋಪಗಳ ನಂತರ, ಪ್ರಕರಣದ ಕುರಿತು ಅಮೆರಿಕ ಒದಗಿಸಿದ ಇನ್ಪುಟ್ಗಳನ್ನು ಪರಿಶೀಲಿಸಲು ಭಾರತವು ಉನ್ನತ ಮಟ್ಟದ ವಿಚಾರಣಾ ಸಮಿತಿಯನ್ನು ನೇಮಿಸಿತ್ತು. ಸದ್ಯ ಸಮಿತಿಯ ಇಬ್ಬರು ಸದಸ್ಯರು ಅಮೆರಿಕಕ್ಕೆ ತೆರಳಿದ್ದು, ಅಮೆರಿಕದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ನವೆಂಬರ್ 2023 ರಲ್ಲಿ ಅಮೆರಿಕ ನಮ್ಮೊಂದಿಗೆ ಹಂಚಿಕೊಂಡಿರುವ ಇನ್ಪುಟ್ಗಳನ್ನು ಪರಿಶೀಲಿಸಲು ಸ್ಥಾಪಿಸಲಾದ ಉನ್ನತ ಮಟ್ಟದ ವಿಚಾರಣಾ ಸಮಿತಿಯ ಸದಸ್ಯರು, ಮತ್ತು ನಾವು ಅವರ ಮಾಹಿತಿಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಜೈಸ್ವಾಲ್ ಹೇಳಿದ್ದಾರೆ.