ವಾಷಿಂಗ್ಟನ್, ಅಮೆರಿಕ:ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಭಾನುವಾರ ತಮ್ಮ 100ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಶತಮಾನಗಳ ತುಂಬು ಜೀವನ ನಡೆಸಿದ್ದ ಮಾಜಿ ಅಧ್ಯಕ್ಷರಾಗಿರುವ ಜಿಮ್ಮಿ ಕಾರ್ಟರ್, ಭಾರತಕ್ಕೆ ಭೇಟಿ ನೀಡಿದ ಮೂರನೇ ಅಮೆರಿಕದ ಅಧ್ಯಕ್ಷರಾಗಿದ್ದಾರೆ.
ಕಾರ್ಟರ್ ಜಾರ್ಜಿಯಾದ ಪ್ಲೇನ್ಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಮರಣ ಹೊಂದಿದ್ದಾರೆ. ಚರ್ಮದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರಿಗೆ ಇತ್ತೀಚೆಗಷ್ಟೇ ಚಿಕಿತ್ಸೆ ನಿಲ್ಲಿಸಲಾಗಿತ್ತು. ಪ್ರಸ್ತುತ ಅವರು ತಮ್ಮ ನಿವಾಸದಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಅವರ ಮರಣವನ್ನು ಅಟ್ಲಾಂಟಾದ ಕಾರ್ಟರ್ ಸೆಂಟರ್ ಅಧಿಕೃತವಾಗಿ ಘೋಷಣೆ ಮಾಡಿದೆ.
ನನ್ನ ತಂದೆ ನನಗೆ ಮಾತ್ರವಲ್ಲದೇ, ವಿಶ್ವದ ಶಾಂತಿ, ಮಾನವ ಹಕ್ಕುಗಳು ಮತ್ತು ನಿಸ್ವಾರ್ಥ ಪ್ರೀತಿ ಬಯಸುವ ಪ್ರತಿಯೊಬ್ಬರಿಗೂ ಹೀರೋ ಆಗಿದ್ದರು ಎಂದು ಮಾಜಿ ಅಧ್ಯಕ್ಷರ ಪುತ್ರ ಚಿಪ್ ಕಾರ್ಟರ್ ಹೇಳಿದ್ದಾರೆ.
ಕಾರ್ಟರ್ ಅವರು 1977 ರಿಂದ 1981 ರವರೆಗೆ ಅಮೆರಿಕದ ಅಧಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇಸ್ರೇಲ್ ಮತ್ತು ಈಜಿಪ್ಟ್ ನಡುವಿನ ಕ್ಯಾಂಪ್ ಡೇವಿಡ್ ಒಪ್ಪಂದಗಳ ಮೂಲಕ ಹೆಸರು ಮಾಡಿದ್ದರು. 2002 ರಲ್ಲಿ ಅವರಿಗೆ ಶಾಂತಿ ನೊಬೆಲ್ ಪ್ರಶಸ್ತಿ ಸಹ ಒಲಿದು ಬಂದಿತ್ತು. ಅಂತಾರಾಷ್ಟ್ರೀಯ ಸಂಘರ್ಷ ಗಳಿಗೆ ಶಾಂತಿಯುತ ಪರಿಹಾರಗಳನ್ನು ಹುಡುಕಲು, ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳನ್ನು ಮುನ್ನಡೆಸಲು ಅವರು ದಶಕಗಳ ಕಾಲ ಅವಿರತವಾಗಿ ಶ್ರಮಿಸಿದ್ದರು. ಅಷ್ಟೇ ಅಲ್ಲ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಸಾಕಷ್ಟು ಹೋರಾಟ ನಡೆಸಿದ್ದರು.
ಪತ್ನಿ ರೊಸಾಲಿನ್ ಕಾರ್ಟರ್ ನವೆಂಬರ್ 2023 ರಲ್ಲಿ ತಮ್ಮ 96 ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಕಾರ್ಟರ್ 1959 ರಲ್ಲಿ ಡ್ವೈಟ್ ಐಸೆನ್‌ಹೋವರ್ ಮತ್ತು 1969 ರಲ್ಲಿ ರಿಚರ್ಡ್ ನಿಕ್ಸನ್ ನಂತರ ಭಾರತಕ್ಕೆ ಭೇಟಿ ನೀಡಿದ ಮೂರನೇ ಅಮೆರಿಕದ ಅಧ್ಯಕ್ಷರು ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದರು.
1978 ರಲ್ಲಿ ಅವರು ಭಾರತಕ್ಕೆ ಭೇಟಿ ನೀಡಿದ್ದರು. ಕಾರ್ಟರ್ ಅವರು ಅಂದಿನ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಮತ್ತು ಪ್ರಧಾನಿ ಮೊರಾರ್ಜಿ ದೇಸಾಯಿ ಅವರನ್ನು ಭೇಟಿಯಾಗಿ ಉಭಯ ರಾಷ್ಟ್ರಗಳ ನಡುವಣ ಬಾಂಧವ್ಯ ಹೆಚ್ಚಿಸಲು ಮಹತ್ವದ ಮಾತುಕತೆ ನಡೆಸಿದ್ದರು. ಅಷ್ಟೇ ಅಲ್ಲ ಸಂಸತ್ತಿನಲ್ಲಿ ಭಾಷಣ ಮಾಡಿದ್ದರು. ಅವರು ಗುರುಗ್ರಾಮ್ ಗೆ ಭೇಟಿ ನೀಡಿದ್ದ ನೆನೆಪಿಗಾಗಿ ಗ್ರಾಮವೊಂದಕ್ಕೆ ಕಾರ್ಟರ್‌ಪುರಿ ಎಂದು ಹೆಸರಿಡಲಾಗಿತ್ತು.
ಇದನ್ನು ಓದಿ:ಅರ್ಧಕ್ಕೆ ಧ್ವಜ ಹಾರಿಸಿ ಮನಮೋಹನ್ ಸಿಂಗ್ಗೆ ಗೌರವ ಸೂಚಿಸಿದ ಮಾರಿಷಸ್ ಸರ್ಕಾರ