ವಾಷಿಂಗ್ಟನ್,ಅಮೆರಿಕ: ಅಮೆರಿಕ ಮೊದಲು ನೀತಿಯನ್ನು ಪ್ರತಿಪಾದನೆ ಮಾಡುತ್ತಿರುವ ಅಮೆರಿಕ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಹತ್ವದ ಮಾತುಕತೆ ನಡೆಸಲಿದ್ದಾರೆ. 2 ನೇ ಬಾರಿಗೆ ಅಮೆರಿಕದ ಚುಕ್ಕಾಣಿ ಹಿಡಿದಿರುವ ಡೊನಾಲ್ಡ್ ಟ್ರಂಪ್ ಅವರ ಹೊಸ ವಲಸೆ ನೀತಿ ಹಾಗೂ ಅಮೆರಿಕ ಫಸ್ಟ್ ಎಂಬ ನೀತಿಗಳ ಭೀತಿಯ ನಡುವೆ ಪ್ರಧಾನಿ 2 ದಿನಗಳ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ.
ಟ್ರಂಪ್ ಎರಡನೇ ಅವಧಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಉಭಯ ನಾಯಕರ ನಡುವಿನ ಮೊದಲ ದ್ವಿಪಕ್ಷೀಯ ಮಾತುಕತೆಗಾಗಿ ಪ್ರಧಾನಿ ಮೋದಿ ಗುರುವಾರ ದ್ವೀಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.
ಮೋದಿ ಅವರು ಅಮೆರಿಕದ ರಾಜಧಾನಿ ನಗರದ ಹೃದಯ ಭಾಗದಲ್ಲಿರುವ ಅಮೆರಿಕ ಅಧ್ಯಕ್ಷೀಯ ಅತಿಥಿಗೃಹವಾದ ಬ್ಲೇರ್ ಹೌಸ್‌ನಲ್ಲಿ ತಂಗಿದ್ದಾರೆ. ಟ್ರಂಪ್ ಅವರ ಸುಂಕ ನೀತಿ ಈಗಾಗಲೇ ವಿಶ್ವವನ್ನೇ ತಲ್ಲಣಗೊಳಿಸಿದೆ. ಭಾರತದ ವಿರುದ್ಧ ವಾಷಿಂಗ್ಟನ್‌ನಿಂದ ಯಾವುದೇ ದಂಡನಾತ್ಮಕ ವ್ಯಾಪಾರ ಕ್ರಮವನ್ನು ತಡೆಗಟ್ಟುವುದು ಮೋದಿಯವರ ಪ್ರಮುಖ ಹಾಗೂ ಮೊದಲ ಆದ್ಯತೆಯಾಗಿದೆ.
![US-MODI-LD LANDING](https://etvbharatimages.akamaized.net/etvbharat/prod-images/13-02-2025/202502133326732_1302newsroom_1739406556_211.jpg)
ಭಾರತ - ಅಮೆರಿಕ ಸಂಬಂಧಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಜನರು ಹೆಚ್ಚಿನ ಸುಂಕಗಳನ್ನು ತಪ್ಪಿಸಲು ಮತ್ತು ಒಟ್ಟಾರೆ ವ್ಯಾಪಾರ ವಹಿವಾಟು ವಿಸ್ತರಿಸಲು ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಆಯ್ಕೆಯನ್ನು ಎರಡೂ ಕಡೆಯವರು ಅನ್ವೇಷಿಸುವ ಸಾಧ್ಯತೆಯಿದೆ. ಈ ಸಭೆಯಲ್ಲಿ ಉಭಯ ನಾಯಕರು ವ್ಯಾಪಾರ, ಹೂಡಿಕೆ, ಇಂಧನ, ರಕ್ಷಣೆ, ತಂತ್ರಜ್ಞಾನ ಮತ್ತು ವಲಸೆ ಮುಂತಾದ ಕ್ಷೇತ್ರಗಳಲ್ಲಿ ಭಾರತ - ಅಮೆರಿಕ ಸಹಕಾರವನ್ನು ಹೆಚ್ಚಿಸುವತ್ತ ಗಮನಹರಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಕುತೂಹಲ ಕೆರಳಿಸಿದ ಭೇಟಿ: ಕೆಲವು ಸಂಭಾವ್ಯ ವಲಯ - ನಿರ್ದಿಷ್ಟ ಫಲಿತಾಂಶಗಳ ಹೊರತಾಗಿ, ವೈಯಕ್ತಿಕ ಸ್ನೇಹಕ್ಕೆ ಹೆಸರುವಾಸಿಯಾದ ಮೋದಿ ಮತ್ತು ಟ್ರಂಪ್ ನಡುವಿನ ಸಭೆಯು ಯಾವ ರೀತಿಯ ವಿಶಾಲ ಸಂಕೇತಗಳನ್ನು ನೀಡುತ್ತದೆ ಎಂಬುದನ್ನು ನೋಡುವುದು ಆಸಕ್ತಿದಾಯಕವಾಗಿರುತ್ತದೆ. ವಲಸೆ ಮತ್ತು ಸುಂಕದಂತಹ ಸೂಕ್ಷ್ಮ ವಿಷಯಗಳು ಮಾತುಕತೆಯ ಕೇಂದ್ರ ಬಿಂದುವಾಗಿರುತ್ತವೆ ಎಂದು ನಿರೀಕ್ಷಿಸಲಾಗಿದೆ.
ಟ್ರಂಪ್ ಆಡಳಿತವು 104 ಭಾರತೀಯರನ್ನು ಕೈಕೋಳ ಮತ್ತು ಸಂಕೋಲೆಗಳನ್ನು ತೊಡಿಸಿ, ಮಿಲಿಟರಿ ವಿಮಾನದಲ್ಲಿ ಗಡಿಪಾರು ಮಾಡಿದ ಕೆಲವು ದಿನಗಳ ನಂತರ ಪ್ರಧಾನ ಮಂತ್ರಿಯವರ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಇನ್ನೊಂದೆಡೆ ಅಮೆರಿಕ ಈ ವರ್ತನೆ ಭಾರತದಲ್ಲಿ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ಕಳೆದ ವಾರ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಸಂಸತ್ತಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಭಾರತಕ್ಕೆ ಹಿಂದಿರುಗುವವರನ್ನು ಹಾಗೂ ಗಡೀಪಾರು ಮಾಡುವವರನ್ನು ಯಾವುದೇ ರೀತಿಯಲ್ಲಿ ಕೆಟ್ಟದಾಗಿ ನಡೆಸಿಕೊಳ್ಳದಂತೆ ನೋಡಿಕೊಳ್ಳಲು ನವದೆಹಲಿ ಅಮೆರಿಕದೊಂದಿಗೆ ಸತತವಾಗಿ ಸಂಪರ್ಕದಲ್ಲಿದೆ ಎಂದು ಹೇಳಿದ್ದರು.
ಕಬ್ಬಿಣ ಮತ್ತು ಅಲ್ಯೂಮಿನಿಯಂ ರಫ್ತಿನ ಮೇಲೆ ಶೇ 25 ರಷ್ಟು ಸುಂಕ: ಜಾಗತಿಕ ಉಕ್ಕು ಮತ್ತು ಅಲ್ಯೂಮಿನಿಯಂ ಆಮದಿನ ಮೇಲೆ ಶೇಕಡಾ 25 ರಷ್ಟು ಸುಂಕವನ್ನು ಟ್ರಂಪ್ ಸರ್ಕಾರ ಘೋಷಿಸಿದ ಕೆಲ ದಿನಗಳ ಬಳಿಕ ಪ್ರಧಾನಿ ಮೋದಿ ಅಮೆರಿಕ ಭೇಟಿ ಕೈಗೊಂಡಿದ್ದಾರೆ. ಈ ಕ್ರಮವು ಅಮೆರಿಕಕ್ಕೆ ಉಕ್ಕು ಮತ್ತು ಅಲ್ಯೂಮಿನಿಯಂ ರಫ್ತು ಮಾಡುವ ಭಾರತೀಯ ಸಂಸ್ಥೆಗಳಿಗೆ ಹೊಡೆತ ನೀಡುವ ನಿರೀಕ್ಷೆಯಿದೆ.
ಟ್ರಂಪ್ ಅವರ ಮೊದಲ ಅವಧಿಯಲ್ಲಿ ತನ್ನ ಕಠಿಣ ನಿಲುವಿಗಿಂತ ಭಿನ್ನವಾಗಿ, ಸೂಕ್ಷ್ಮ ವಿಷಯದ ಬಗ್ಗೆ ಹೆಚ್ಚು ಸಮಾಧಾನಕರ ವಿಧಾನವನ್ನು ಅಳವಡಿಸಿಕೊಳ್ಳಲು ಭಾರತ ಈಗಾಗಲೇ ತನ್ನ ಸಿದ್ಧತೆ ಮಾಡಿಕೊಂಡಿದೆ.
ಶ್ವೇತಭವನವು ಪರಸ್ಪರ ಸಹಕಾರ ನೀಡಿದರೆ, ನವದೆಹಲಿ ಕನಿಷ್ಠ ಒಂದು ಡಜನ್ ವಲಯಗಳಲ್ಲಿ ಸುಂಕಗಳನ್ನು ಕಡಿತಗೊಳಿಸುವ ಬಗ್ಗೆ ಪರಿಗಣಿಸಬಹುದು ಎಂದು ತಿಳಿದುಬಂದಿದೆ. ಮೋದಿ ಮತ್ತು ಟ್ರಂಪ್ ಸುಂಕದ ಕುರಿತು ನಿರ್ದಿಷ್ಟ ವಿಷಯಗಳನ್ನು ಚರ್ಚಿಸುವ ಸಾಧ್ಯತೆಯಿಲ್ಲ. ಆದರೆ, ಉಭಯ ನಾಯಕರು ವಿಶಾಲ ದೃಷ್ಟಿಕೋನದ ಬಗ್ಗೆ ಚರ್ಚಿಸಬಹುದು ಎಂಬುದಾಗಿ ತಿಳಿದು ಬಂದಿದೆ.
ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರವು ಕಳೆದ ವರ್ಷ ಸುಮಾರು 130 ಬಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು.
ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚೆ ಸಾಧ್ಯತೆ: ಉಭಯ ನಾಯಕರು ಇಂಡೋ-ಪೆಸಿಫಿಕ್, ಉಕ್ರೇನ್‌ನಲ್ಲಿನ ಒಟ್ಟಾರೆ ಪರಿಸ್ಥಿತಿ ಮತ್ತು ಪಶ್ಚಿಮ ಏಷ್ಯಾದಲ್ಲಿನ ಬೆಳವಣಿಗೆಗಳ ಬಗ್ಗೆಯೂ ಮಾತನಾಡುವ ಸಾಧ್ಯತೆಯಿದೆ.
ಜನವರಿ 27 ರಂದು ನಡೆದ ದೂರವಾಣಿ ಸಂಭಾಷಣೆಯ ಸಂದರ್ಭದಲ್ಲಿ ಮೋದಿ ಮತ್ತು ಟ್ರಂಪ್, ವ್ಯಾಪಾರ, ಇಂಧನ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಭಾರತ- ಅಮೆರಿಕ ಸಹಕಾರ ಹೆಚ್ಚಿಸುವತ್ತ ಗಮನಹರಿಸಿ "ವಿಶ್ವಾಸಾರ್ಹ" ಪಾಲುದಾರಿಕೆಯತ್ತ ಕೆಲಸ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದರು.
ದೂರವಾಣಿ ಮಾತುಕತೆಯ ನಂತರ, ಭಾರತವು ಅಮೆರಿಕ ನಿರ್ಮಿತ ಭದ್ರತಾ ಉಪಕರಣಗಳ ಖರೀದಿಯನ್ನು ಹೆಚ್ಚಿಸುವ ಮತ್ತು ನ್ಯಾಯಯುತ ದ್ವಿಪಕ್ಷೀಯ ವ್ಯಾಪಾರ ಸಂಬಂಧದತ್ತ ಸಾಗುವ ಮಹತ್ವವನ್ನು ಟ್ರಂಪ್ ಒತ್ತಿ ಹೇಳಿದ್ದರು.
ಇಂಧನ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ: ಫೆಬ್ರವರಿ 1 ರಂದು ನವದೆಹಲಿ ತನ್ನ ಪರಮಾಣು ಹೊಣೆಗಾರಿಕೆ ಕಾನೂನನ್ನು ತಿದ್ದುಪಡಿ ಮಾಡುವ ಮತ್ತು ಪರಮಾಣು ಇಂಧನ ಮಿಷನ್ ಸ್ಥಾಪಿಸುವ ಯೋಜನೆಯನ್ನು ಪ್ರಕಟಿಸಿತ್ತು .
ಸುಮಾರು 16 ವರ್ಷಗಳ ಹಿಂದೆ ಎರಡು ರಾಷ್ಟ್ರಗಳ ನಡುವೆ ಐತಿಹಾಸಿಕ ನಾಗರಿಕ ಪರಮಾಣು ಒಪ್ಪಂದದ ಅನುಷ್ಠಾನದಲ್ಲಿ ಮುಂದುವರಿಯುವಲ್ಲಿ ಭಾರತದ ಪರಮಾಣು ಹಾನಿಗಾಗಿ ನಾಗರಿಕ ಹೊಣೆಗಾರಿಕೆ ಕಾಯ್ದೆ, 2010 ರಲ್ಲಿನ ಕೆಲವು ಷರತ್ತುಗಳು ಅಡಚಣೆಗಳಾಗಿವೆ. ಇದನ್ನು ಪರಿಹರಿಸಿಕೊಳ್ಳುವ ಬಗ್ಗೆ ಸಮಾಲೋಚನೆ ಮಾಡುವ ಸಾಧ್ಯತೆಗಳಿವೆ.
ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳಲ್ಲಿ (SMR ಗಳು) ಅಮೆರಿಕದೊಂದಿಗೆ ನಾಗರಿಕ ಪರಮಾಣು ಸಹಕಾರದ ಸಾಧ್ಯತೆಯನ್ನು ಭಾರತ ಎದುರು ನೋಡುತ್ತಿದೆ ಎಂದು ತಿಳಿದುಬಂದಿದೆ.