ಕರ್ನಾಟಕ

karnataka

ETV Bharat / international

'ಎಲ್ಲ ಕಪೋಲ ಕಲ್ಪಿತ.. ಟ್ರಂಪ್ - ಪುಟಿನ್ ಮಧ್ಯೆ ಚರ್ಚೆ ನಡೆದಿಲ್ಲ': ರಷ್ಯಾ ಸ್ಪಷ್ಟನೆ

ಪುಟಿನ್ ಮತ್ತು ಟ್ರಂಪ್ ನಡುವೆ ಯಾವುದೇ ದೂರವಾಣಿ ಸಂಭಾಷಣೆ ನಡೆದಿಲ್ಲ ಎಂದು ರಷ್ಯಾ ಅಧಿಕೃತವಾಗಿ ಹೇಳಿದೆ.

ಡೊನಾಲ್ಡ್​ ಟ್ರಂಪ್, ವ್ಲಾದಿಮಿರ್ ಪುಟಿನ್
ಡೊನಾಲ್ಡ್​ ಟ್ರಂಪ್, ವ್ಲಾದಿಮಿರ್ ಪುಟಿನ್ (IANS)

By ETV Bharat Karnataka Team

Published : Nov 11, 2024, 3:43 PM IST

ಮಾಸ್ಕೋ : ಕಳೆದ ವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂಬ ಅಮೆರಿಕದ ಮಾಧ್ಯಮಗಳು ಬಿತ್ತರಿಸಿದ ವರದಿಗಳನ್ನು ರಷ್ಯಾ ಸೋಮವಾರ ತಳ್ಳಿ ಹಾಕಿದೆ.

"ಇಬ್ಬರ ಮಧ್ಯೆ ಯಾವುದೇ ಸಂಭಾಷಣೆ ನಡೆದಿಲ್ಲ... ಇದು ಸಂಪೂರ್ಣವಾಗಿ ಸುಳ್ಳು, ಇದು ಶುದ್ಧ ಕಾಲ್ಪನಿಕ" ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೊವ್ ಮಾಸ್ಕೋದಲ್ಲಿ ದೈನಂದಿನ ಮಾಧ್ಯಮಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ವಿರುದ್ಧದ ನಿರ್ಣಾಯಕ ಚುನಾವಣಾ ವಿಜಯದ ನಂತರ ಟ್ರಂಪ್ ಅವರು ಫ್ಲೋರಿಡಾದ ತಮ್ಮ ಮಾರ್-ಎ-ಲಾಗೋ ಎಸ್ಟೇಟ್ ನಿಂದ ಪುಟಿನ್ ಅವರಿಗೆ ಕರೆ ಮಾಡಿದ್ದಾರೆ ಎಂದು ಅಮೆರಿಕದ ಪ್ರಮುಖ ಮಾಧ್ಯಮ ಪ್ರಕಟಣೆ ಭಾನುವಾರ ತಡರಾತ್ರಿ ವರದಿ ಮಾಡಿದೆ.

ಉಭಯ ನಾಯಕರ ನಡುವೆ ಸಂಭಾಷಣೆ ನಡೆದಿದೆ ಎಂಬ ಕಪೋಲ ಕಲ್ಪಿತ ವರದಿಗಳನ್ನು ಪ್ರಕಟಿಸಿದ ಅಮೆರಿಕ ಮಾಧ್ಯಮಗಳ ವಿಶ್ವಾಸಾರ್ಹತೆಯನ್ನು ರಷ್ಯಾದ ಅಧ್ಯಕ್ಷರ ಪತ್ರಿಕಾ ಕಾರ್ಯದರ್ಶಿಯು ಪ್ರಶ್ನಿಸಿದ್ದಾರೆ. "ಇದು ಈಗಿನ ಮಾಧ್ಯಮಗಳ ಕಳಪೆ ಗುಣಮಟ್ಟದ ವರದಿಗಾರಿಕೆಗೆ ಅತ್ಯಂತ ಸ್ಪಷ್ಟ ಉದಾಹರಣೆ. ಕೆಲವೊಮ್ಮೆ ಸಾಕಷ್ಟು ಗೌರವಾನ್ವಿತ ಮಾಧ್ಯಮಗಳು ಸಹ ಇಂಥ ತಪ್ಪು ಮಾಡುತ್ತಿವೆ" ಎಂದು ಪೆಸ್ಕೊವ್ ರಷ್ಯಾದ ಟಾಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಉಕ್ರೇನ್​ನಲ್ಲಿ ನಡೆಯುತ್ತಿರುವ ಸಂಘರ್ಷವು ಮತ್ತಷ್ಟು ಉಲ್ಬಣಗೊಳ್ಳದಂತೆ ತಪ್ಪಿಸಬೇಕೆಂದು ಟ್ರಂಪ್ ಪುಟಿನ್ ಅವರಿಗೆ ಮನವಿ ಮಾಡಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. ಟ್ರಂಪ್ ಮತ್ತು ಪುಟಿನ್ ತಮ್ಮ ಸಂಭಾಷಣೆಯ ಸಮಯದಲ್ಲಿ, ಯುದ್ಧ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಫೆಬ್ರವರಿ 2022 ರಲ್ಲಿ ಪ್ರಾರಂಭವಾದ ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಮಾಸ್ಕೋದೊಂದಿಗೆ ಹೆಚ್ಚಿನ ಚರ್ಚೆ ನಡೆಸುವ ಆಸಕ್ತಿಯನ್ನು ಟ್ರಂಪ್ ವ್ಯಕ್ತಪಡಿಸಿದರು ಎಂದು ವರದಿಯಲ್ಲಿ ಹೇಳಲಾಗಿದೆ. ಯುರೋಪ್ ನಲ್ಲಿ ಗಣನೀಯ ಯುಎಸ್ ಮಿಲಿಟರಿ ಉಪಸ್ಥಿತಿಯ ಮಹತ್ವವನ್ನು ಟ್ರಂಪ್ ಎತ್ತಿ ತೋರಿಸಿದ್ದಾರೆ ಎಂದು ವರದಿ ಹೇಳಿದೆ.

ರಿಪಬ್ಲಿಕನ್ ನಾಯಕ ಟ್ರಂಪ್ ತನ್ನ ಚುನಾವಣಾ ಪ್ರಚಾರದ ಸಮಯದಲ್ಲಿ ಯುದ್ಧ ಕೊನೆಗೊಳಿಸುವುದು ತಮ್ಮ ಮುಖ್ಯ ಗುರಿಯಾಗಿದೆ ಎಂದು ಹೇಳಿದ್ದರು ಎಂಬುದು ಗಮನಾರ್ಹ. ಏತನ್ಮಧ್ಯೆ, ಟ್ರಂಪ್-ಪುಟಿನ್ ಫೋನ್ ಕರೆ ಬಗ್ಗೆ ಯಾವುದೇ ಪೂರ್ವ ಸೂಚನೆ ಬಂದಿಲ್ಲ ಎಂದು ಉಕ್ರೇನ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ : ಉಕ್ರೇನ್‌ನಲ್ಲಿ ಯುದ್ಧ ನಿಲ್ಲಿಸುವ ಬಗ್ಗೆ ಟ್ರಂಪ್‌-ಪುಟಿನ್ ದೂರವಾಣಿ ಚರ್ಚೆ- ವರದಿ

ABOUT THE AUTHOR

...view details