ಅಲಾಸ್ಕಾ, ಅಮೆರಿಕ: ಪಶ್ಚಿಮ ಅಲಾಸ್ಕಾದಲ್ಲಿ ಸಣ್ಣ ವಿಮಾನವೊಂದು ಪತನಗೊಂಡಿದೆ. ಪ್ರಯಾಣಿಕ ವಿಮಾನದಲ್ಲಿದ್ದ ಎಲ್ಲಾ 10 ಜನರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕದ ಕೋಸ್ಟ್ ಗಾರ್ಡ್ ಹೇಳಿದೆ.
ಅಲಾಸ್ಕಾದ ಪಶ್ಚಿಮ ಕರಾವಳಿಯಲ್ಲಿ ನಿಯಂತ್ರಣ ಕಳೆದುಕೊಂಡು ನಾಪತ್ತೆಯಾದ ವಿಮಾನ ಪತನವಾಗಿರುವ ಸ್ಥಳವನ್ನು ಅಮೆರಿಕದ ಕೋಸ್ಟ್ ಗಾರ್ಡ್ ಶುಕ್ರವಾರ ಪತ್ತೆ ಹಚ್ಚಿದೆ. ಅಲಾಸ್ಕಾದ ಕೋಸ್ಟ್ ಗಾರ್ಡ್ X ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ವಿಮಾನವು ನೋಮ್‌ನಿಂದ ಆಗ್ನೇಯಕ್ಕೆ 34 ಮೈಲುಗಳಷ್ಟು ದೂರದಲ್ಲಿ ಕಂಡು ಬಂದಿದೆ ಎಂದು ಹೇಳಿದೆ.
ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ನಂಬಲಾಗಿದೆ ಎಂದು ಕೋಸ್ಟ್ ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ. ಕಳಪೆ ಹವಾಮಾನ ಮತ್ತು ಕಡಿಮೆ ಗೋಚರತೆಯಿಂದಾಗಿ ವಿಮಾನ ನಿಯಂತ್ರಣ ಕಳೆದುಕೊಂಡು ಪತನವಾಗಿದೆ. ಅಗ್ನಿಶಾಮಕ ಸಿಬ್ಬಂದಿ ನೋಮ್‌ನಿಂದ ಟಾಪ್‌ಕಾಕ್‌ವರೆಗೆ ತೀವ್ರ ಹುಡುಕಾಟ ನಡೆಸಿತು. ಇನ್ನು ಯುಎಸ್ ಕೋಸ್ಟ್ ಗಾರ್ಡ್ ಫ್ಲೈಟ್ ಸಿಬ್ಬಂದಿ ವಾಯುಪ್ರದೇಶದಲ್ಲಿ ಶೋಧ ಕೈಗೊಂಡಿತ್ತು.
ಅಲಾಸ್ಕಾ ಸಾರ್ವಜನಿಕ ಸುರಕ್ಷತೆ ಇಲಾಖೆಯ ಪ್ರಕಾರ, ಬೆರಿಂಗ್ ಏರ್ ನಿರ್ವಹಿಸುವ ಟರ್ಬೊಪ್ರಾಪ್ ಸೆಸ್ನಾ ಕಾರವಾನ್ ಗುರುವಾರ ಮಧ್ಯಾಹ್ನ ಕಾಣೆಯಾಗಿದೆ ಎಂದು ವರದಿಯಾಗಿತ್ತು.
ಸ್ಥಳೀಯ ಕಾಲಮಾನ ಶುಕ್ರವಾರ ಬೆಳಗ್ಗೆ 9 ಗಂಟೆಗೆ ವಿಮಾನದಲ್ಲಿದ್ದ ಪ್ರತಿಯೊಬ್ಬರ ಕುಟುಂಬಗಳಿಗೆ ಸೂಚನೆ ನೀಡಲಾಗಿದೆ ಎಂದು ನೋಮ್ ಸ್ವಯಂಸೇವಕ ಅಗ್ನಿಶಾಮಕ ಇಲಾಖೆ ತಿಳಿಸಿದೆ. ಅಲಾಸ್ಕಾ ಸ್ಟೇಟ್ ಟ್ರೂಪರ್ ಲೆಫ್ಟಿನೆಂಟ್ ಬೆನ್ ಎಂಡ್ರೆಸ್ ಅವರು ಮಾತನಾಡಿ, ವಿಮಾನದಲ್ಲಿದ್ದವರೆಲ್ಲ ವಯಸ್ಕರು ಎಂದು ಹೇಳಿದರು
ಜನವರಿ ಅಂತ್ಯದಲ್ಲಿ ಸಂಭವಿಸಿತ್ತು ಭೀಕರ ಅಪಘಾತ: ಪ್ಯಾಸೆಂಜರ್ ಜೆಟ್ ಮತ್ತು ಸೇನಾ ಹೆಲಿಕಾಪ್ಟರ್ ನಡುವೆ ಭೀಕರ ಅಪಘಾತ ಸಂಭವಿಸಿ 67 ಮಂದಿ ಸಾವನ್ನಪ್ಪಿದ್ದರು. ಅಮೆರಿಕನ್ ಏರ್ಲೈನ್ಸ್ ವಿಮಾನ ಸಂಖ್ಯೆ 5342 ಮತ್ತು ಬ್ಲಾಕ್ ಹಾವಕ್ ಹೆಲಿಕಾಪ್ಟರ್ ನಡುವೆ ಈ ಡಿಕ್ಕಿ ಸಂಭವಿಸಿತ್ತು.
ಈ ಸಂದರ್ಭದಲ್ಲಿ ಪ್ಯಾಸೆಂಜರ್ ಜೆಟ್‌ನಲ್ಲಿ 67 ಜನರಿದ್ದರು. ಫೆಡರಲ್ ವಿಮಾನ ಆಡಳಿತ (ಎಫ್ಎಎ)ದ ವರದಿ ಪ್ರಕಾರ, ಬುಧವಾರ ರಾತ್ರಿ 9ರ ಸುಮಾರಿಗೆ ಅಪಘಾತವಾಗಿತ್ತು . ಪ್ಯಾಸೆಂಜರ್ ಜೆಟ್ ರೊನಾಲ್ಡ್ ರೀಗನ್ ವಾಷಿಂಗ್ಟನ್ ನ್ಯಾಷನಲ್ ಏರ್ಪೋರ್ಟ್ನ ರನ್‌ವೇ 33ರಲ್ಲಿ ಇಳಿಯುತ್ತಿದ್ದಂತೆ ದುರಂತ ನಡೆದಿತ್ತು.
ಇದನ್ನು ಓದಿ:ಅಮೆರಿಕದಲ್ಲಿ ಮತ್ತೊಂದು ವಿಮಾನ ಅಪಘಾತ: ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನ
ಪ್ಯಾಸೆಂಜರ್ ಜೆಟ್-ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಯಾರೂ ಬದುಕುಳಿದಿಲ್ಲ: ಟ್ರಂಪ್