ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಚುನಾವಣೆ ಫೆಬ್ರವರಿ 5ರಂದು ನಡೆದು ಇಂದು ಅದರ ಫಲಿತಾಂಶ ಹೊರ ಬೀಳಲು ಕ್ಷಣಗಣನೆ ಶುರುವಾಗಿದೆ. ದಿಲ್ಲಿ ವಿಧಾನಸಭೆಯ 70 ಸ್ಥಾನಗಳ ಫಲಿತಾಂಶ ಇನ್ನೇನು ಹೊರಗೆ ಬರಲಿದೆ. ಮಧ್ಯಾಹ್ನದ ವೇಳೆಗೆ ದಿಲ್ಲಿ ಕಾ ರಾಜ ಯಾರು ಅನ್ನೋದು ಗೊತ್ತಾಗಲಿದೆ.
ಈ ಚುನಾವಣೆಯ ಫಲಿತಾಂಶ ಮುಂದಿನ ಐದು ವರ್ಷಗಳ ಕಾಲ ರಾಜಧಾನಿಯನ್ನು ಯಾರು ಆಳಲಿದ್ದಾರೆ ಎಂಬುದನ್ನು ಹೇಳಲಿದೆ. ಕಳೆದ 27 ವರ್ಷಗಳಿಂದ ಅಧಿಕಾರದಿಂದ ಹೊರಗುಳಿದಿರುವ ಬಿಜೆಪಿ, ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ತನ್ನ ನೆಲೆಯನ್ನು ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದೆ.
1999 ರ ಬಳಿಕೆ ಅಧಿಕಾರ ಮರೀಚಿಕೆ: ಬಿಜೆಪಿಯ ಪ್ರಮುಖ ನಾಯಕ ಆರ್‌ಪಿ ಸಿಂಗ್, ದೆಹಲಿಯಲ್ಲಿ ಪಕ್ಷವು ಅಧಿಕಾರದಿಂದ ದೂರ ಉಳಿದಿರುವ ಬಗ್ಗೆ ಈಟಿವಿ ಭಾರತದ ಜತೆ ಪ್ರತ್ಯೇಕವಾಗಿ ಮಾತನಾಡಿದರು. ಎಎಪಿಯ ಕಾರ್ಯತಂತ್ರಗಳ ಬಗ್ಗೆ ಟೀಕಿಸಿದರು. ಎಎಪಿ ಈ ಬಾರಿ ಹತಾಶೆಗೊಳಗಾಗಿರುವುದು ಸ್ಪಷ್ಟವಾಗಿದೆ ಎಂದರು. ಸಿಂಗ್ ಪ್ರಕಾರ, 2013 ರಲ್ಲಿ ಬಿಜೆಪಿ ಪ್ರಬಲ ಪ್ರದರ್ಶನ ನೀಡಿತ್ತು. ಆಗ 32 ಸ್ಥಾನಗಳನ್ನು ಪಡೆದುಕೊಂಡಿತ್ತು. ಆದರೆ ಕಾಂಗ್ರೆಸ್‌ನೊಂದಿಗೆ ಎಎಪಿ ಮೈತ್ರಿ ಮಾಡಿಕೊಂಡಿದ್ದು, ಅವರ ಯಶಸ್ಸಿಗೆ ದಾರಿ ಮಾಡಿಕೊಟ್ಟಿತು. ಎಎಪಿ ಭ್ರಷ್ಟಾಚಾರ-ವಿರೋಧಿ ಹೋರಾಟ ಹಾಗೂ ಆಗ ಅವರು ಮಾಡಿದ ಕಾರ್ಯತಂತ್ರ ಯಶಸ್ವಿಯಾಯಿತು. ಅಣ್ಣಾ ಹಜಾರೆಯವರ ಹೋರಾಟದ ಫಲ ಅವರಿಗೆ 2015ರ ಭರ್ಜರಿ ಗೆಲುವಿಗೆ ಭಾರಿ ಕೊಡುಗೆ ನೀಡಿತು.
ಇನ್ನು 2020 ರಲ್ಲಿ ಎಎಪಿಯವರು ಉಚಿತ ನೀರು, ಉಚಿತ ವಿದ್ಯುತ್ ಮತ್ತು ಉತ್ತಮ ಶಾಲೆಗಳಿಗೆ ಭರವಸೆ ನೀಡಿ ಗೆದ್ದು ಬಂದರು. ಆದರೆ ಆಡಳಿತಕ್ಕೆ ಬಂದ ಮೇಲೆ ಕಳೆದ ಐದು ವರ್ಷಗಳಲ್ಲಿ ಇವರ ಆಡಳಿತ ನೋಡಿದ್ದಾರೆ. ಕೊಟ್ಟ ಭರವಸೆ ಈಡೇರಿಸಲು ಅವರು ವಿಫಲರಾಗಿದ್ದಾರೆ. ನೀರು ಕೊಳಕಾಗಿದೆ, ವಿದ್ಯುತ್ ಬಿಲ್‌ಗಳು ಹೆಚ್ಚುತ್ತಿದೆ ಎಂದು ಆರ್ ಪಿ ಸಿಂಗ್ ಲೇವಡಿ ಮಾಡಿದರು.
ಈ ಬಾರಿ ದಿಲ್ಲಿಯಲ್ಲಿ ಮೋದಿ ಮೋಡಿ ಮಾಡುವರೇ: ಕಳೆದ ವಾರ ರಾಜಧಾನಿಯ ರೋಹಿಣಿ ಪ್ರದೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ಆಪ್ದಾ ನಹೀ ಸಾಹೇಂಗೆ, ಬದಲ್ ಕರ್ ರಹೇಂಗೆ" (ಈ ವಿಪತ್ತನ್ನು ನಾವು ಸಹಿಸುವುದಿಲ್ಲ, ನಾವು ಬದಲಾವಣೆ ತರುತ್ತೇವೆ) ಎಂಬ ಹೊಸ ಘೋಷಣೆಯನ್ನು ಮಾಡಿದ್ದರು. ಕೇಜ್ರಿವಾಲ್ ಅವರ ಸರ್ಕಾರ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂದು ನಂಬಿರುವ ಬಿಜೆಪಿ ಬೆಂಬಲಿಗರಲ್ಲಿ ಅವರ ಮಾತುಗಳು ಪ್ರತಿಧ್ವನಿಸುತ್ತಿವೆ.
ಎಎಪಿಯಿಂದ ಜನರು ಮೋಸ ಹೋಗಿದ್ದಾರೆ ಎಂದು ಭಾವಿಸಿದ್ದಾರೆ. ಹೀಗಾಗಿ ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ಸಚಿವ ಸತೀಶ್ ಚಂದ್ರ ದುಬೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೋದಿ ಅವರ ನಾಯಕತ್ವದಲ್ಲಿ ದೆಹಲಿ ಡಬಲ್ ಎಂಜಿನ್ ಸರ್ಕಾರ ಉತ್ತಮವಾಗಿದ್ದನ್ನು ಮಾಡಲಿದೆ ಅಂತಾರೆ ಅವರು
ಸೋತರು ಹೋರಾಟ ಬಿಡದ ಬಿಜೆಪಿ: 1998 ರಿಂದ ದೆಹಲಿಯಲ್ಲಿ ಬಿಜೆಪಿಗೆ ಸರ್ಕಾರ ರಚಿಸಲು ಸಾಧ್ಯವಾಗದಿದ್ದರೂ, ಅದರ ಮತಗಳ ಪ್ರಮಾಣವು ಆಶ್ಚರ್ಯಕರ ರೀತಿಯಲ್ಲಿ ಚೇತರಿಸಿಕೊಂಡಿದೆ. 2015 ರ ಚುನಾವಣೆಯಲ್ಲಿ ಕೇವಲ ಮೂರು ಸ್ಥಾನಗಳನ್ನು ಗೆದ್ದಿದ್ದರೂ ಬಿಜೆಪಿ ಶೇ32.19ರಷ್ಟು ಮತಗಳನ್ನು ಪಡೆದುಕೊಂಡಿತ್ತು . 2020 ರಲ್ಲಿ ಅದು ಶೇ 38.51ರಷ್ಟು ಮತಗಳನ್ನು ಪಡೆದುಕೊಂಡಿತ್ತು. ಆಗ ಬಂದಿದ್ದು ಕೇವಲ 8 ಸ್ಥಾನಗಳಷ್ಟೇ.
ಇನ್ನು ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಇತ್ತೀಚಿನ ಎಲೆಕ್ಷನ್ ಗಳಲ್ಲಿ ದೆಹಲಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಆದರೆ ವಿಧಾನಸಭೆ ಚುನಾವಣೆಯಲ್ಲಿ ಮಾತ್ರ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ಇಂದಿನ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ.
ಇದನ್ನು ಓದಿ:ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ: 8 ಗಂಟೆಗೆ ಮತ ಎಣಿಕೆ ಆರಂಭ, ಭಾರಿ ಬಿಗಿ ಭದ್ರತೆ
ದೆಹಲಿ ಚುನಾವಣೆ; ಈ ಎಲ್ಲ ವಿವಿಐಪಿಗಳ ಭವಿಷ್ಯವೇನು?: ಇಂದಿನ ಫಲಿತಾಂಶದ ಮೇಲಿದೆ ಎಲ್ಲರ ಚಿತ್ತ