ಢಾಕಾ (ಬಾಂಗ್ಲಾದೇಶ): ಮೀಸಲಾತಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ಪ್ರತಿಭಟನಾಕಾರರು ನಡೆಸುತ್ತಿರುವ ಮುಷ್ಕರ ಹಿಂಸಾಚಾರಕ್ಕೆ ತಿರುಗಿದೆ. ಈ ಘರ್ಷಣೆಗಳನ್ನು ನಿಯಂತ್ರಿಸಲು ಬಾಂಗ್ಲಾದೇಶ ಸರ್ಕಾರ ಸೇನೆಯನ್ನು ನಿಯೋಜಿಸಿದೆ. ಇದರ ಬೆನ್ನೆಲ್ಲೇ ಭಾರತ ಸರ್ಕಾರ ಪ್ರತಿಕ್ರಿಯಿಸಿದೆ. ಅಲ್ಲಿರುವ ಎಲ್ಲ ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ಘೋಷಿಸಿದೆ. ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿಯು ಆ ದೇಶದ ಆಂತರಿಕ ವಿಷಯವಾಗಿದೆ. ಅಲ್ಲಿ 15 ಸಾವಿರ ಭಾರತೀಯರಿದ್ದಾರೆ. ಅವರಲ್ಲಿ 8 ಸಾವಿರ ವಿದ್ಯಾರ್ಥಿಗಳು. ಅವರೆಲ್ಲರೂ ಸುರಕ್ಷಿತವಾಗಿದ್ದಾರೆ. ನಾವು ಅವರೊಂದಿಗೆ ಎಲ್ಲ ರೀತಿಯಲ್ಲೂ ಸಹಕರಿಸಲು ಸಿದ್ಧರಿದ್ದೇವೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಸುಧಾರಣೆಗೆ ಒತ್ತಾಯಿಸಿ ಬಾಂಗ್ಲಾದೇಶದಾದ್ಯಂತ ಹಲವು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಬಂದ್‌ಗೆ ಕರೆ ನೀಡಲಾಗಿದೆ. ಸರ್ಕಾರ ಈಗಾಗಲೇ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿದೆ. ಆದರೆ, ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರಿಂದ ಘರ್ಷಣೆ ನಡೆದಿದೆ. ಕೆಲವೆಡೆ ಪೊಲೀಸರು ರಬ್ಬರ್ ಬುಲೆಟ್‌ಗಳನ್ನು ಹಾರಿಸಿದ್ದಾರೆ.
39 ಜನರು ಸಾವು: ಉದ್ಯೋಗಗಳಲ್ಲಿ ಮೀಸಲಾತಿ ರದ್ದುಗೊಳಿಸುವಂತೆ ಒತ್ತಾಯಿಸಿ ಬಾಂಗ್ಲಾದೇಶದ ವಿದ್ಯಾರ್ಥಿಗಳ ಚಳವಳಿ ಹಿಂಸಾಚಾರಕ್ಕೆ ತಿರುಗಿದೆ. ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ, ಪೊಲೀಸರೊಂದಿಗಿನ ಘರ್ಷಣೆಯಲ್ಲಿ 39 ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ. ಸಾವಿರಾರೂ ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ದೊಣ್ಣೆ, ರಾಡ್, ಕಲ್ಲುಗಳೊಂದಿಗೆ ಬೀದಿಗಿಳಿದ ಪ್ರತಿಭಟನಾಕಾರರು ಬಸ್, ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ.
ಇಂಟರ್ನೆಟ್ ಸ್ಥಗಿತ: ಸದ್ಯ ಬಾಂಗ್ಲಾದೇಶದಲ್ಲಿ ಬಸ್, ರೈಲು ಮತ್ತು ಮೆಟ್ರೋ ಸೇವೆಗಳು ಸ್ಥಗಿತಗೊಂಡಿವೆ. ಹೆಚ್ಚುತ್ತಿರುವ ಹಿಂಸಾಚಾರವನ್ನು ತಡೆಯಲು, ಸರ್ಕಾರವು ಮೊಬೈಲ್ ಇಂಟರ್ನೆಟ್ ಸ್ಥಗಿತಗೊಳಿಸಿದೆ. ಶಾಲಾ - ಕಾಲೇಜುಗಳ ಜೊತೆಗೆ ಮದರಸಾಗಳನ್ನೂ ಅನಿರ್ದಿಷ್ಟಾವಧಿಗೆ ಮುಚ್ಚಲಾಗಿದೆ.
ಪ್ರಧಾನಿ ಭಾಷಣ ಬಳಿಕ ಭುಗಿಲೆದ್ದ ಹಿಂಸಾಚಾರ:ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಇತ್ತೀಚೆಗೆ ಸರ್ಕಾರಿ ರಾಷ್ಟ್ರೀಯ ದೂರದರ್ಶನದಲ್ಲಿ ರಾಷ್ಟ್ರ ಉದ್ದೇಶಿಸಿ ಮಾತನಾಡಿದರು. ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದು, ಇದಾದ ಬಳಿಕ ಪ್ರತಿಭಟನಾಕಾರರು ಆಕ್ರೋಶಗೊಂಡರು. ಸರ್ಕಾರಿ ದೂರದರ್ಶನದ ಕಚೇರಿ ಮೇಲೆ ದಾಳಿ ಮಾಡಿ, ವಾಹನಗಳನ್ನು ಸುಟ್ಟು ಹಾಕಿದ್ದಾರೆ. ಪ್ರತಿಭಟನಾಕಾರರು ರಾಜ್ಯ ದೂರದರ್ಶನದ ಕಚೇರಿಗೆ ಬೆಂಕಿ ಹಚ್ಚಿದಾಗ, ಸುಮಾರು 1200 ನೌಕರರು ಮತ್ತು ಅನೇಕ ಪತ್ರಕರ್ತರು ಒಳಗೆ ಸಿಲುಕಿಕೊಂಡಿದ್ದರು. ಪೊಲೀಸರು-ಆಡಳಿತ ಹೇಗೋ ಕಷ್ಟಪಟ್ಟು ಅವರೆಲ್ಲರನ್ನೂ ರಕ್ಷಿಸಿದ್ದಾರೆ.