ಟೆಲ್ ಅವೀವ್:ಹಮಾಸ್ನೊಂದಿಗೆ ಕದನ ವಿರಾಮ ಮಾಡಿಕೊಂಡಿರುವುದನ್ನು ವಿರೋಧಿಸಿ ಇಸ್ರೇಲ್ನ ರಾಷ್ಟ್ರೀಯ ಭದ್ರತಾ ಸಚಿವ ಇಟಾಮರ್ ಬೆನ್-ಗ್ವೀರ್ ಭಾನುವಾರ ರಾಜೀನಾಮೆ ಸಲ್ಲಿಸಿದ್ದು, ಅವರ ಪಕ್ಷವು ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಮ್ಮಿಶ್ರ ಸರ್ಕಾರದಿಂದ ಹೊರಬಂದಿದೆ. ಇದರಿಂದ ಸಂಸತ್ತಿನಲ್ಲಿ ನೆತನ್ಯಾಹು ಸರ್ಕಾರದ ಬಹುಮತವು ಕೂದಲೆಳೆ ಅಂತರಕ್ಕೆ ಬಂದಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕದನ ವಿರಾಮ ಮಾಡಿಕೊಂಡಿರುವುದು ಅಪಾಯಕಾರಿ ಮತ್ತು ಇದು ಭಯೋತ್ಪಾದನೆಗೆ ಶರಣಾಗತಿಯನ್ನು ಸೂಚಿಸುವ ಒಪ್ಪಂದವಾಗಿದೆ ಎಂದು ಬೆನ್-ಗ್ವೀರ್ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಯುದ್ಧ ನಿಲ್ಲಿಸುವುದು, ಸೇನಾ ಪಡೆಗಳನ್ನು ಹಿಂತೆಗೆದುಕೊಳ್ಳುವುದು ಮತ್ತು ಇಸ್ರೇಲಿಗಳ ವಿರುದ್ಧದ ದಾಳಿ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಪ್ಯಾಲೆಸ್ಟೈನ್ ಕೈದಿಗಳ ಬಿಡುಗಡೆಯನ್ನು ತಾವು ವಿರೋಧಿಸುವುದಾಗಿ ಬೆನ್-ಗ್ವೀರ್ ಹೇಳಿದರು. ಇದಲ್ಲದೆ ಸ್ಥಳಾಂತರಗೊಂಡ ಪ್ಯಾಲೆಸ್ಟೈನಿಯರು ಉತ್ತರ ಗಾಜಾದಲ್ಲಿನ ತಮ್ಮ ಮನೆಗಳಿಗೆ ಮರಳಲು ಇಸ್ರೇಲ್ ಒಪ್ಪಂದದಲ್ಲಿ ಅವಕಾಶ ನೀಡಿದ್ದನ್ನೂ ವಿರೋಧಿಸುವುದಾಗಿ ಅವರು ತಿಳಿಸಿದ್ದಾರೆ.
ಒಂದೊಮ್ಮೆ ಇಸ್ರೇಲ್ ಹಮಾಸ್ ವಿರುದ್ಧದ ಯುದ್ಧವನ್ನು ಪುನಾರಂಭಿಸಿದರೆ ತಮ್ಮ ಪಕ್ಷವು ಮತ್ತೆ ಸರ್ಕಾರಕ್ಕೆ ಮರಳಬಹುದು ಎಂದು ಅವರು ಹೇಳಿದರು.