ಟೆಲ್ ಅವಿವ್(ಇಸ್ರೇಲ್):ಒಪ್ಪಂದದ ಪ್ರಕಾರ ನಮ್ಮ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ, ಕದನ ವಿರಾಮದಿಂದ ಹೊರಬಂದು ಮರು ಯುದ್ಧ ನಡೆಸಲು ಸಿದ್ಧ ಎಂದು ಹಮಾಸ್ ಉಗ್ರರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಲ್ಲಿ ವಿಳಂಬ ಮತ್ತು ನಿರಾಕರಣೆ ತೋರುತ್ತಿರುವ ಹಮಾಸ್ ಉಗ್ರರಿಗೆ ಕೊನೆಯ ಗಡುವು ನೀಡಿದ್ದಾರೆ. ಶನಿವಾರ ಮಧ್ಯಾಹ್ನದೊಳಗೆ ಒತ್ತೆ ಇಟ್ಟುಕೊಂಡಿರುವ ನಮ್ಮವರನ್ನು ಬಿಡುಗಡೆ ಮಾಡದೇ ಹೋದಲ್ಲಿ ಕದನ ವಿರಾಮ ಉಲ್ಲಂಘನೆ ಆರೋಪದ ಮೇಲೆ ಮರು ದಾಳಿ ಆರಂಭಿಸಲಾಗುವುದು. ಹಮಾಸ್‌ನ ಅಂತಿಮ ಸೋಲಿನವರೆಗೂ ಹೋರಾಟ ನಡೆಸಲಾಗುವುದು ಎಂದು ಗುಡುಗಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಇಸ್ರೇಲ್ ಪ್ರಧಾನಿ, ಕದನ ವಿರಾಮದ ವೇಳೆ ಒಪ್ಪಿದಂತೆ ಉಭಯರ ಕಡೆಯಿಂದ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು. ಆದರೆ, ಹಮಾಸ್ ಉಲ್ಲಂಘಿಸುತ್ತಿದೆ. ಹೀಗಾಗಿ, ಗಾಜಾ ಪಟ್ಟಿಯ ಸುತ್ತಲೂ ಮತ್ತು ಒಳಗೆ ಸೇನೆಯನ್ನು ಸಜ್ಜುಗೊಳಿಸಲು ಸೂಚನೆ ನೀಡಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ, "ಹಮಾಸ್ ಉಗ್ರರು ಶನಿವಾರ ಮಧ್ಯಾಹ್ನದೊಳಗೆ ನಮ್ಮ ಒತ್ತೆಯಾಳುಗಳನ್ನು ಕಳುಹಿಸದಿದ್ದರೆ, ಕದನ ವಿರಾಮ ಕೊನೆಗೊಳ್ಳುತ್ತದೆ. ಹಮಾಸ್‌ನ ಅಂತಿಮ ಸೋಲಿನವರೆಗೂ ಐಡಿಎಫ್ ತೀವ್ರ ಹೋರಾಟ ಪುನರಾರಂಭಿಸಲಿದೆ ಎಂದು ಸಚಿವ ಸಂಪುಟದಲ್ಲಿ ಸರ್ವಾನುಮತದ ಅಂಗೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.