ಜೆರುಸಲೇಂ(ಇಸ್ರೇಲ್):ಗಾಜಾದಲ್ಲಿ ಮೂರು ತಿಂಗಳ ಹಿಂದೆ ನಡೆಸಿದ ದಾಳಿಯಲ್ಲಿ ಹಮಾಸ್ ಸರ್ಕಾರದ ಮುಖ್ಯಸ್ಥ ಸೇರಿ ಮೂವರು ನಾಯಕರನ್ನು ಹೊಡೆದುರುಳಿಸಲಾಗಿದೆ. ಇತ್ತ ಲೆಬನಾನ್ನಲ್ಲಿ ಹಿಜ್ಬುಲ್ಲಾದ 15 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಗುರುವಾರ ಹೇಳಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಇಸ್ರೇಲ್ ಸೇನಾಪಡೆ, 'ಮೂರು ತಿಂಗಳ ಹಿಂದೆ ಹಮಾಸ್ ಸರ್ಕಾರದ ಮುಖ್ಯಸ್ಥ ರಾವ್ಹಿ ಮುಷ್ತಾಹ್, ಹಮಾಸ್‌ನ ಭದ್ರತಾ ಇಲಾಖೆಯ ಮುಖ್ಯಸ್ಥ ಸಮೆಹ್ ಅಲ್ ಸಿರಾಜ್, ಹಮಾಸ್ ಕಮಾಂಡರ್ ಸಮಿ ಔದೆಹ್ ಹತ್ಯೆಯಾಗಿದ್ದಾರೆ' ಎಂದು ತಿಳಿಸಿದೆ.
'ಉತ್ತರ ಗಾಜಾದ ನೆಲದಡಿ ಇರುವ ಬಂಕರ್ನಲ್ಲಿ ಮೂವರು ನಾಯಕರು ಅಡಗಿದ್ದ ಬಗ್ಗೆ ಐಡಿಎಫ್ ಮತ್ತು ಐಎಸ್ಎ ಗುಪ್ತಚರ ದಳ ನೀಡಿದ ಖಚಿತ ಮಾಹಿತಿ ಆಧರಿಸಿ ಇಸ್ರೇಲ್ ವಾಯುಪಡೆ ದಾಳಿ ನಡೆಸಿತ್ತು. ಈ ವೇಳೆ ಮೂವರೂ ಹತರಾಗಿದ್ದಾರೆ. ಈ ರಹಸ್ಯ ತಾಣವು ಹಮಾಸ್ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವಾಗಿತ್ತು. ದಾಳಿಯ ನಂತರ ಉಗ್ರರ ಸ್ಥೈರ್ಯ ಕುಸಿಯದಂತೆ ತಡೆಯಲು ತನ್ನ ನಾಯಕರ ಸಾವನ್ನು ಹಮಾಸ್ ಮುಚ್ಚಿಟ್ಟಿದೆ' ಎಂದು ಇಸ್ರೇಲ್ ಮಾಹಿತಿ ನೀಡಿದೆ.