ವಾಷಿಂಗ್ಟನ್: ಚುನಾವಣೆಯ ಫಲಿತಾಂಶವನ್ನು ಒಪ್ಪಿಕೊಳ್ಳೋಣ. ರಾಷ್ಟ್ರದ ಬಗೆಗಿನ ನಮ್ಮ ದೂರದೃಷ್ಟಿಗಾಗಿ ಹೋರಾಟ ಮುಂದುವರಿಸೋಣ ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಎದುರು ಸೋಲನುಭವಿಸಿದ ಕಮಲಾ ಹ್ಯಾರಿಸ್ ತಮ್ಮ ಬೆಂಬಲಿಗರಿಗೆ ತಿಳಿಸಿದ್ದಾರೆ. ಭಾಷಣಕ್ಕೂ ಮುನ್ನ ಡೊನಾಲ್ಡ್ ಟ್ರಂಪ್ಗೆ ಕರೆ ಮಾಡಿದ ಅವರು ಅಭಿನಂದನೆ ತಿಳಿಸಿದರು.
ಹಾರ್ವರ್ಡ್ ವಿಶ್ವವಿದ್ಯಾಲಯದ ಆವರಣದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಕಮಲಾ ಹ್ಯಾರಿಸ್, "ಮತಗಟ್ಟೆ, ಕೋರ್ಟ್ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ನಮ್ಮ ಹೋರಾಟ ಮುಂದುವರಿಯುತ್ತದೆ. ನಾವು ಗೆಲ್ಲಲ್ಲ ಅಂತಲ್ಲ. ಕೆಲವೊಮ್ಮೆ ಹೋರಾಟ ಸಮಯ ತೆಗೆದುಕೊಳ್ಳುತ್ತದೆ" ಎಂದರು.
ಫಲಿತಾಂಶದ ಬಳಿಕ ಇದೇ ಸ್ಥಳದಲ್ಲಿ ಕಮಲಾ ಹ್ಯಾರಿಸ್ ವಿಜಯದ ಭಾಷಣ ಮಾಡಲು ಉದ್ದೇಶಿಸಿದ್ದರು. ಆದರೆ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಭರ್ಜರಿ ಜಯಭೇರಿ ಬಾರಿಸಿದ್ದಾರೆ.
ಸದ್ಯ ದುಃಖ ಮತ್ತು ನಿರಾಸೆಯನ್ನು ಅನುಭವಿಸುವುದು ಸರಿ. ಆದರೆ ಮುಂದೆ ಇದು ಸರಿಯಾಗಲಿದೆ ಎಂದು ನೀವೆಲ್ಲರೂ ತಿಳಿದುಕೊಳ್ಳಿ ಎಂದು ಹ್ಯಾರಿಸ್ ತಿಳಿಸಿದರು. ಈ ವೇಳೆ ಕೆಲ ಬೆಂಬಲಿಗರು ಭಾವುಕರಾದರು.
"ವಿಜೇತರಿಗೆ ನಾವು ಶಾಂತಿಯುತವಾಗಿ ಅಧಿಕಾರ ಹಸ್ತಾಂತರಿಸಲಿದ್ದೇವೆ" ಎಂದು ಸೋಲಿನ ಬಳಿಕದ ಭಾಷಣದಲ್ಲಿ ಕಮಲಾ ಹ್ಯಾರಿಸ್ ತಿಳಿಸಿದರು.
ಕಳೆದ ನಾಲ್ಕು ವರ್ಷಗಳ ಹಿಂದೆ ಸೋತಾಗ ಅಧಿಕಾರ ಹಸ್ತಾಂತರಿಸಲು ಟ್ರಂಪ್ಗೆ ಇಷ್ಟವಿರಲಿಲ್ಲ. ದೇಶದ ಮೊದಲ ಕಪ್ಪು ಮಹಿಳಾ ಅಧ್ಯಕ್ಷೆಯಾಗಿ ಇತಿಹಾಸ ನಿರ್ಮಿಸಲು ಕಮಲಾ ಹ್ಯಾರಿಸ್‌ಗೆ ಸಾಧ್ಯವಾಗಲಿಲ್ಲ ಎಂದು ಸಭಿಕರಲ್ಲಿ ಕೆಲವರು ನಿರಾಶೆ ವ್ಯಕ್ತಪಡಿಸಿದರು.
ಕಮಲಾ ಹ್ಯಾರಿಸ್ ಗೆದ್ದಿದ್ದರೆ ದಕ್ಷಿಣ ಏಷ್ಯಾ ಮೂಲದ ಮೊದಲ ವ್ಯಕ್ತಿ ಅಮೆರಿಕ ಅಧ್ಯಕ್ಷರಾದ ಶ್ರೇಯಕ್ಕೆ ಪಾತ್ರರಾಗುತ್ತಿದ್ದರು.
ಕಮಲಾ ಹ್ಯಾರಿಸ್ ಭಾಷಣದ ಬಳಿಕ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಪ್ರಕಟಣೆ ಹೊರಡಿಸಿದ್ದಾರೆ. "ಸದುದ್ದೇಶ, ಶ್ರದ್ಧೆ ಮತ್ತು ಸಂತೋಷದಿಂದ ಕಮಲಾ ಹ್ಯಾರಿಸ್ ತಮ್ಮ ಹೋರಾಟವನ್ನು ಮುಂದುವರಿಸಲಿದ್ದಾರೆ. ಅವರು ಅಮೆರಿಕನ್ನರ ಚಾಂಪಿಯನ್. ಎಲ್ಲದಕ್ಕಿಂತ ಹೆಚ್ಚಾಗಿ ಅಮೆರಿಕ ಭವಿಷ್ಯದ ಅಚ್ಚೊತ್ತಲಿರುವ ಹ್ಯಾರಿಸ್ ನಮ್ಮ ಮಕ್ಕಳ ಬಲಿಷ್ಠ ನಾಯಕರಾಗಿ ಮುಂದುವರಿಯಲಿದ್ದಾರೆ" ಎಂದು ಹೊಗಳಿದ್ದಾರೆ.
ಚುನಾವಣಾ ಫಲಿತಾಂಶದ ಬಳಿಕ ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ಜೊತೆ ಜೋ ಬೈಡನ್ ಮಾತನಾಡಿದ್ದಾರೆ. ಫಲಿತಾಂಶದ ಬಗ್ಗೆ ಬೈಡನ್ ಇಂದು ಸಾರ್ವಜನಿಕವಾಗಿ ಭಾಷಣ ಮಾಡಲಿದ್ದಾರೆ ಮತ್ತು ಭೇಟಿಗೆ ಟ್ರಂಪ್ ಅವರನ್ನು ಆಹ್ವಾನಿಸಲಿದ್ದಾರೆ.