ಮೈಸೂರು: ಭಾರತದಲ್ಲಿನ ಪ್ರತಿಯೊಂದು ರಾಜ್ಯವು ತನ್ನದೆಯಾದ ವಿಭಿನ್ನ ಸಂಸ್ಕೃತಿ, ಭಾಷೆ ಹಾಗೂ ಸಂಗೀತದ ಪರಂಪರೆ ಹೊಂದಿದ್ದು, ಪ್ರತಿಯೊಂದು ದೇಶದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿವೆ ಹಾಗೂ ಸಂಗೀತ ಕ್ಷೇತ್ರಕ್ಕೆ ಮೈಸೂರಿನ ಕೊಡುಗೆ ಅಪಾರ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಪ್ರವಾಸೋದ್ಯಮ ಸಚಿವಾಲಯದ ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಘಟಿಕೋತ್ಸವ ಸಭಾಂಗಣದಲ್ಲಿ ಇಂದು ನಡೆದ ''ಮೈಸೂರು ಸಂಗೀತ ಸುಗಂಧ ಉತ್ಸವ''ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತದ ಸಂಗೀತ ಪರಂಪರೆಗೆ ಕರ್ನಾಟಕ ಸಂಗೀತದ ಕೊಡುಗೆ ಮಹತ್ವವಾಗಿದ್ದು, ಜಾತಿ, ಧರ್ಮ ಹಾಗೂ ಭಾಷೆ ಮೀರಿ ಇಂದು ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿದೆ ಎಂದು ಮೈಸೂರಿನ ಕೊಡುಗೆಯನ್ನು ಕೊಂಡಾಡಿದರು.
ಸಂಗೀತ ಕ್ಷೇತ್ರದಲ್ಲಿ ವಿಜಯನಗರ ಸಾಮ್ರಾಜ್ಯದ ಪಾತ್ರ: ಇಂದು ಸಂಗೀತ ಸುಗಂಧ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಆಯೋಜಿಸಿರುವ ಮುಖ್ಯ ಉದ್ದೇಶ, ಇಲ್ಲಿನ ವಿಜಯನಗರ ಸಾಮ್ರಾಜ್ಯದಂತಹ ರಾಜ ಮನೆತನಗಳ ಒಡೆಯರು ಸಂಗೀತಕ್ಕೆ ಹಾಗೂ ಅದರ ಬೆಳವಣಿಗೆಗೆ ನೀಡುರುವ ಪ್ರೋತ್ಸಾಹವೇ ಕಾರಣ. ಅಲ್ಲದೇ ಮೈಸೂರು ಸಂಗೀತದ ನಾಡು, ಹಾಗೆಯೇ ಚಂದನದ ನಾಡು ಆಗಿದೆ. ಹಾಗಾಗಿ ಇಂತಹ ಉತ್ತಮ ಕಾರ್ಯಕ್ರಮ ಆಯೋಜಿಸಿ ಆ ಕಾರ್ಯಕ್ರಮದಲ್ಲಿ ದಾಸ ಸಂಗೀತದ ಬಗ್ಗೆ ಮಾತಾಡವುದು ಹೆಮ್ಮೆಯ ವಿಷಯ ಎಂದು ಹೇಳಿದರು.
12ನೇ ಮತ್ತು 16ನೇ ಶತಮಾನದ ನಡುವೆ, ವಿಜಯನಗರ ಸಾಮ್ರಾಜ್ಯದ ಆಶ್ರಯದಲ್ಲಿ ಕರ್ನಾಟಕ ಸಂಗೀತವು ಪ್ರವರ್ಧಮಾನಕ್ಕೆ ಬಂದಿತು. ಈ ಸಮಯದಲ್ಲಿ "ಕರ್ನಾಟಿಕ್ ಸಂಗೀತದ ಪಿತಾಮಹ" ಎಂದು ಕರೆಯಲ್ಪಡುವ ಸಂತ ಪುರಂದರದಾಸರು ಲಕ್ಷಾಂತರ ಕೀರ್ತನೆಗಳು, ಭಕ್ತಿಗೀತೆಗಳನ್ನು ರಚಿಸಿದ್ದಾರೆ. ಕರ್ನಾಟಕ ಸಂಗೀತದ ಮೂಲಭೂತ ಪಾಠಗಳನ್ನು ಸಹ ರೂಪಿಸಿದ್ದಾರೆ. 18ನೇ ಶತಮಾನವನ್ನು ಕರ್ನಾಟಕ ಸಂಗೀತದ ಸುವರ್ಣಯುಗವೆಂದು ಪರಿಗಣಿಸಬಹುದು. ಪುರಂದರ ದಾಸರ ನಂತರ ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತರ್ ಮತ್ತು ಶ್ಯಾಮ ಶಾಸ್ತ್ರಿ ಈ ಮೂವರು ಸಂಯೋಜಕರು ಸಮಕಾಲೀನರಾಗಿದ್ದರು. ಅವರ ಸಂಯೋಜನೆಗಳಿಂದ ಕರ್ನಾಟಿಕ್ ಸಂಗೀತ ಸಂಗ್ರಹವನ್ನು ಶ್ರೀಮಂತಗೊಳಿಸಿದರು. ಅವರು ಮಧುರ ಸೌಂದರ್ಯ, ಲಯಬದ್ಧ ಮತ್ತು ಭಕ್ತಿಯ ಉತ್ಸಾಹಕ್ಕೆ ಹೆಸರುವಾಸಿಯಾಗಿದ್ದಾರೆ ಎಂದರು.
ಸಂಗೀತ ಪರಂಪರೆ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಇಲಾಖೆಯ ರಾಜ್ಯ ಸಚಿವ ಸುರೇಶ್ ಗೋಪಿ ಮಾತನಾಡಿ, ಕಳೆದ ಬಾರಿ ಆಂಧ್ರ ಪ್ರದೇಶದಲ್ಲಿ ಈ ರೀತಿಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವರ್ಷ ಕರ್ನಾಟಕದ ಮೈಸೂರಿನಲ್ಲಿ ಮಾಡಲಾಗುತ್ತಿದೆ. ಕರ್ನಾಟಕ ತೆಲಂಗಾಣ, ಕೇರಳ ಹಾಗೂ ಇನ್ನಿತರ ರಾಜ್ಯಗಳು ತನ್ನದೇ ಆದ ಸಂಗೀತ ಪರಂಪರೆಯನ್ನು ಹೊಂದಿದ್ದು, ಕರ್ನಾಟಕದ ದಾಸ ಸಂಗೀತವು ದೇಶದಾದ್ಯಂತ ಪ್ರಸಿದ್ಧಿ ಪಡೆದಿದೆ ಎಂದು ಹೇಳಿದರು.
ಕರ್ನಾಟಿಕ್ ಸಂಗೀತದ ಪ್ರಭಾವ: ಭಾರತೀಯ ಚಿತ್ರರಂಗದಲ್ಲಿ ಕರ್ನಾಟಿಕ್ ಸಂಗೀತದ ಪ್ರಭಾವ ನೋಡುವುದಾದರೆ ಶಂಕರನ್, ಎಸುದಾಸ್ ಅವರ ಅವರು ಕೊಡುಗೆ ಅಪಾರ. ಕರ್ನಾಟಿಕ್ ಸಂಗೀತದ ಬಗ್ಗೆ ಅರಿವೇ ಇಲ್ಲದ ಎಸ್ಪಿಬಿ ಅವರು ಕರ್ನಾಟಿಕ್ ಸಂಗೀತದ ಲೋಕದಲ್ಲಿ ಮಾಡಿದ ಸಾಧನೆ ಅವಿಸ್ಮರಣೀಯ. ಎಸ್ ಜಾನಕಿ, ಸುಶೀಲ, ಕೆಎಸ್ ಚಿತ್ರ, ಜಯಚಂದ್ರನ್ ಸೇರಿದಂತೆ ಹಲವಾರು ಸಂಗೀತಾ ದಿಗ್ಗಜರರು ಕರ್ನಾಟಿಕ್ ಸಂಗೀತದಲ್ಲಿ ಪರಿಣಿತರಾಗಿದ್ದು, ಅವರು ಚಿತ್ರರಂಗಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಇನ್ನೂ ಮಲಯಾಳಂ ಸಿನಿಮಾದಲ್ಲಿ ಕರ್ನಾಟಿಕ್ ಸಂಗೀತವು ಒಂದು ಅಲೆಯನ್ನೇ ಸೃಷ್ಟಿ ಮಾಡಿತ್ತು ಎಂದು ಕರ್ನಾಟಿಕ್ ಸಂಗೀತದ ಕೊಡುಗೆಯನ್ನು ಸುರೇಶ್ ಗೋಪಿ ಇದೇ ವೇಳೆ ವರ್ಣಿಸಿದರು.
ಸಚಿವ ಡಾ. ಹೆಚ್ ಸಿ ಮಹದೇವಪ್ಪ, ಸಂಸದ ಯಧುವೀರ್ ಒಡೆಯರ್ ಮಾತನಾಡಿ, ಮೈಸೂರಿನಲ್ಲಿ ಸಂಗೀತ ಸುಗಂಧ ಉತ್ಸವ ಕಾರ್ಯಕ್ರಮ ನಡೆಯುತ್ತಿರುವುದು ಖುಷಿ ಪಡುವ ವಿಚಾರ. ಇದೊಂದು ಅವಿಸ್ಮರಣೀಯ ದಿನ. ಧರ್ಮ ಜಾತಿ ಮೀರಿದ ಮನಸ್ಸುಗಳನ್ನ ಒಗ್ಗೂಡಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕೀರ್ತನೆ ಹಾಡಿದ ಕೇಂದ್ರ ಸಚಿವೆ: ಸುಗಂಧ ಸಂಗೀತ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಗೀತದ ಪಿತಾಮಹ ಪುರಂದರದಾಸರ ಜನಪ್ರಿಯ ಕೀರ್ತನೆಯಾದ ''ರಾಗಿ ತನ್ನಿರಿ ಭಿಕ್ಷೆಗೆ ರಾಗಿ ತನ್ನಿರಿ, ''ಭೋಗ್ಯರಾಗಿ'', ''ಯೋಗ್ಯರಾಗಿ'', ''ಭಾಗ್ಯವಂತರಾಗಿ'', ''ನೀವು ಭಿಕ್ಷೆಗೆ ರಾಗಿ ತನ್ನಿರಿ'' ಎಂಬ ಕೀರ್ತನೆಯನ್ನು ಹಾಡಿ ಕಾರ್ಯಕ್ರಮಕ್ಕೆ ಮೆರಗು ತಂದರು.
ಅಡಚಣೆ ಮಾಡಿದ ವ್ಯಕ್ತಿ ವಶಕ್ಕೆ: ನಗರದ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವದ ಸಭಾಂಗಣದಲ್ಲಿ ಇಂದು ನಡೆಯುತ್ತಿದ್ದ ''ಮೈಸೂರು ಸಂಗೀತ ಸುಗಂಧ ಉತ್ಸವ'' ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬ ಅಡಚಣೆ ಉಂಟು ಮಾಡಿದ ಪ್ರಸಂಗ ನಡೆಯಿತು. ಕಾರ್ಯಕ್ರಮದ ನಡುವೆ ''ಯಾವುದೇ ಕಾರಣಕ್ಕೂ ಮಹಾರಾಷ್ಟ್ರದಲ್ಲಿ ಗ್ಯಾರಂಟಿ ಯೋಜನೆ ಘೋಷಣೆ ಮಾಡಬೇಡಿ'' ಎಂದು ವೇದಿಕೆ ಮುಂಭಾಗದಲ್ಲಿ ಎದ್ದು ನಿಂತು ಅಡಚಣೆ ಉಂಟು ಮಾಡಿದ್ದು, ಆ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದರು.
ರೈತರ ಪರವಾಗಿ ಮನವಿ: ಕಾರ್ಯಕ್ರಮದ ಬಳಿಕ ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್ ಅವರಿಗೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ರೈತರ ಪರವಾಗಿ ಮನವಿ ಪತ್ರ ಸಲ್ಲಿಸಿದರು. ಕೃಷಿ ಸಾಲಕ್ಕೆ ರೈತರ ಸಿಬಿಲ್ ಸ್ಕೋರ್ ಪರಿಗಣಿಸುವ ನಿಯಮ ರದ್ದು, ಕೃಷಿ ಉತ್ಪನ್ನ ಮೇಲಿನ ಜಿಎಸ್ಟಿ ತೆರಿಗೆ ರದ್ದು, ರೈತ ಉತ್ಪಾದಕ ಸಂಸ್ಥೆಗಳ ವರಮಾನ ತೆರಿಗೆ ಹಾಗೂ ಎಂಐಟಿ ತೆರಿಗೆ ಕಾನೂನು ರದ್ದು ಮಾಡುವಂತೆ ಶಾಂತಕುಮಾರ್ ಅವರು ಮನವಿ ಸಲ್ಲಿಸಿದರು.
ಮನವಿ ಪತ್ರ ಸ್ವೀಕರಿಸಿದ ಸಚಿವರು, ಕೃಷಿ ಚಟುವಟಿಕೆ ಮಾಡುವ ರೈತರಿಗೆ ಯಾವುದೇ ತೆರಿಗೆ ವಿಧಿಸಿಲ್ಲ. ಜಿಎಸ್ಟಿ ಬಗ್ಗೆ ನಿಮ್ಮ ರಾಜ್ಯದ ಸಚಿವರು ಮಂಡಳಿ ಸಭೆಯಲ್ಲಿ ಚರ್ಚೆ ಮಾಡಲು ಅವಕಾಶವಿದೆ. ರೈತರ ಉತ್ಪಾದಕ ಸಂಸ್ಥೆಗಳಿಗೆ ಎಂಎಟಿ ತೆರಿಗೆ ಕೂಡ ಇರುವುದಿಲ್ಲ. ಇಲಾಖೆ ವತಿಯಿಂದ ನೋಟಿಸ್ ಬಂದಿದ್ದರೆ ದಾಖಲಾತಿ ಕೊಡಿ ಎಂದರು.
ಇದನ್ನೂ ಓದಿ: ಸರ್ಕಾರಿ ಶಾಲೆ ಮಕ್ಕಳಿಗೆ ಸ್ವಂತ ಖರ್ಚಿನಲ್ಲಿ ವಿಮಾನದಲ್ಲಿ ಹೈದರಾಬಾದ್ ಪ್ರವಾಸ: ಹಾಜರಾತಿ ಹೆಚ್ಚಿಸಲು ಶಿಕ್ಷಕನ ಐಡಿಯಾ