ಜೆರುಸಲೇಂ : ಹಮಾಸ್ ವಶದಲ್ಲಿರುವ ಇಸ್ರೇಲ್ ಒತ್ತೆಯಾಳುಗಳ ಪೈಕಿ ನಾಲ್ವರನ್ನು ಇಸ್ರೇಲ್ ಸೈನ್ಯ ರಕ್ಷಿಸಿ ದೇಶಕ್ಕೆ ವಾಪಸು ಕರೆದುಕೊಂಡು ಬಂದಿದೆ. ಕಳೆದ ವರ್ಷ ಅಕ್ಟೋಬರ್ 7ರಿಂದ ಗಾಜಾದಲ್ಲಿ ಹಮಾಸ್ ವಶದಲ್ಲಿದ್ದ 25 ವರ್ಷದ ಯುವತಿ ನೋವಾ ಅರ್ಗಮಾನಿ ಸೇರಿದಂತೆ ನಾಲ್ವರು ಇಸ್ರೇಲಿ ಒತ್ತೆಯಾಳುಗಳನ್ನು ತನ್ನ ಪಡೆಗಳು ಎರಡು ಪ್ರತ್ಯೇಕ ವಿಶೇಷ ಕಾರ್ಯಾಚರಣೆಗಳಲ್ಲಿ ರಕ್ಷಿಸಿವೆ ಎಂದು ಇಸ್ರೇಲ್ ಶನಿವಾರ ಪ್ರಕಟಿಸಿದೆ.
ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್), ಇಸ್ರೇಲ್ ಭದ್ರತಾ ಸಂಸ್ಥೆ (ಐಎಸ್ಎ) ಮತ್ತು ಇಸ್ರೇಲ್ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಅರ್ಗಮಾನಿ, ಅಲ್ಮೋಗ್ ಮೀರ್ ಜಾನ್ (21), ಆಂಡ್ರೆ ಕೊಜ್ಲೋವ್ (27) ಮತ್ತು ಶ್ಲೋಮಿ ಜಿವ್ (40) ಸೇರಿದಂತೆ ನಾಲ್ವರನ್ನು ನುಸೇರಾತ್ನ ಕೇಂದ್ರ ಭಾಗದ ಎರಡು ಪ್ರತ್ಯೇಕ ಸ್ಥಳಗಳಿಂದ ರಕ್ಷಿಸಲಾಗಿದೆ.
ನೋವಾ ಸಂಗೀತ ಉತ್ಸವದ ಮೇಲೆ ದಾಳಿ ಮಾಡಿದ್ದ ಹಮಾಸ್ ಉಗ್ರರು ಈ ನಾಲ್ವರನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡು ಹೋಗಿದ್ದರು. ಕಳೆದ ಎಂಟು ತಿಂಗಳುಗಳಿಂದ ಇವರು ಹಮಾಸ್ ವಶದಲ್ಲಿದ್ದರು.
ದಾಳಿಯ ಸಮಯದಲ್ಲಿ ಮೋಟಾರುಬೈಕಿನಲ್ಲಿ ಬಂದ ಭಯೋತ್ಪಾದಕರು ಅರ್ಗಮಾನಿ ಅವರನ್ನು ಅಪಹರಿಸಿಕೊಂಡು ಹೋಗುತ್ತಿರುವ ಆಘಾತಕಾರಿ ವೀಡಿಯೊ ಪ್ರಪಂಚದಾದ್ಯಂತ ಭಾರಿ ಟೀಕೆಗೆ ಗುರಿಯಾಗಿತ್ತು. ಶನಿವಾರದ ರಕ್ಷಣಾ ಕಾರ್ಯಾಚರಣೆಯ ನಂತರ ದೇಶದ ರಕ್ಷಣಾ ಪಡೆಗಳು ಬಿಡುಗಡೆ ಮಾಡಿದ ಮೊದಲ ಚಿತ್ರಗಳಲ್ಲಿ, ಅರ್ಗಮಾನಿ ತನ್ನ ತಂದೆಯನ್ನು ನೋಡಿದ ತಕ್ಷಣ ಭಾವನಾತ್ಮಕವಾದ ದೃಶ್ಯಗಳು ಕಂಡು ಬಂದಿವೆ.