ಕರ್ನಾಟಕ

karnataka

ETV Bharat / international

ಹಿಜ್ಬುಲ್ಲಾ ಉಗ್ರರಿಂದ ಸಂಭಾವ್ಯ ದಾಳಿ: ಇಸ್ರೇಲ್​ನಾದ್ಯಂತ 48 ಗಂಟೆಗಳ ತುರ್ತು ಪರಿಸ್ಥಿತಿ ಜಾರಿ - Israel Hezbollah War - ISRAEL HEZBOLLAH WAR

ಇಸ್ರೇಲ್​ನಲ್ಲಿ 48 ಗಂಟೆಗಳ ಕಾಲ ತುರ್ತು ಪರಿಸ್ಥಿತಿ ಜಾರಿಗೊಳಿಸಲಾಗಿದೆ.

ರಾಕೆಟ್​ ದಾಳಿ (ಸಂಗ್ರಹ ಚಿತ್ರ)
ರಾಕೆಟ್​ ದಾಳಿ (ಸಂಗ್ರಹ ಚಿತ್ರ) (IANS)

By ETV Bharat Karnataka Team

Published : Aug 25, 2024, 12:08 PM IST

ಟೆಲ್ ಅವೀವ್ : ಯುದ್ಧ ಪರಿಸ್ಥಿತಿಗಳು ತೀವ್ರತೆ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಇಸ್ರೇಲ್​ ದೇಶಾದ್ಯಂತ 48 ಗಂಟೆಗಳ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಲೆಬನಾನ್​ನಲ್ಲಿನ ಹಿಜ್ಬುಲ್ಲಾ ನೆಲೆಗಳ ಮೇಲೆ ಇಸ್ರೇಲ್ ಸೇನೆ ಮುಂಜಾಗ್ರತಾ ದಾಳಿಗಳನ್ನು ಆರಂಭಿಸಿದ್ದು, ಇದಕ್ಕೆ ಹಿಜ್ಬುಲ್ಲಾ ಕೂಡ ಪ್ರತಿಕ್ರಿಯೆ ನೀಡಬಹುದಾದ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಬೆಳಿಗ್ಗೆ 6:00 ರಿಂದ (ಇಸ್ರೇಲಿ ಸಮಯ) ತುರ್ತು ಪರಿಸ್ಥಿತಿ ಜಾರಿಯಾಗಿದೆ. ಬಾಹ್ಯ ದಾಳಿಗಳಿಗೆ ತುತ್ತಾಗಬಹುದಾದ ದೇಶದಲ್ಲಿನ ಪ್ರದೇಶಗಳನ್ನು ಮುಚ್ಚುವುದು, ಸಾರ್ವಜನಿಕರು ಸಮಾರಂಭಗಳನ್ನು ನಿರ್ಬಂಧಿಸುವುದು ಸೇರಿದಂತೆ ಅಗತ್ಯವಾದ ಪ್ರಮುಖ ಆದೇಶಗಳನ್ನು ಜಾರಿಗೆ ತರಲು, ತುರ್ತು ಪರಿಸ್ಥಿತಿಯು ಇಸ್ರೇಲಿ ರಕ್ಷಣಾ ಪಡೆಗಳಿಗೆ (ಐಡಿಎಫ್) ಅನುವು ಮಾಡಿಕೊಡುತ್ತದೆ.

ಉತ್ತರ ಇಸ್ರೇಲ್ ಮೇಲೆ 320 ಕ್ಕೂ ಹೆಚ್ಚು ರಾಕೆಟ್​ಗಳು ಮತ್ತು ಹಲವಾರು ಸ್ಫೋಟಕ ತುಂಬಿದ ಡ್ರೋನ್​ಗಳ ಮೂಲಕ ದಾಳಿ ನಡೆಸಿರುವುದಾಗಿ ಹಿಜ್ಬುಲ್ಲಾ ಹೇಳಿಕೊಂಡಿದೆ. ಹೀಗಾಗಿ ಮತ್ತಷ್ಟು ಸಂಭಾವ್ಯ ದಾಳಿಗಳನ್ನು ಸಮರ್ಥವಾಗಿ ಎದುರಿಸಲು ದೇಶಾದ್ಯಂತ ತುರ್ತು ಪರಿಸ್ಥಿತಿ ವಿಧಿಸಲಾಗಿದೆ.

"ದೇಶದ ನಾಗರಿಕ ವಸತಿ ಪ್ರದೇಶಗಳ ಮೇಲೆ ಈ ಬಾರಿ ಹಿಜ್ಬುಲ್ಲಾ ದಾಳಿ ಮಾಡಲಿದೆ ಎಂಬುದು ನಮಗೆ ಖಚಿತವಾಗಿದೆ" ಎಂದು ಎಚ್ಚರಿಕೆ ನೀಡಿರುವ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಕಳೆದ ತಿಂಗಳು ಲೆಬನಾನ್​ನ ಹಿಜ್ಬುಲ್ಲಾ ನೆಲೆಗಳ ಮೇಲೆ ದಾಳಿ ನಡೆಸಿದ್ದ ಐಡಿಎಫ್ ಅದರ ಟಾಪ್ ಕಮಾಂಡರ್ ಫವಾದ್ ಶುಕೂರ್ ನನ್ನು ಕೊಂದು ಹಾಕಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಹಿಜ್ಬುಲ್ಲಾ ಇಸ್ರೇಲ್ ವಿರುದ್ಧ ನಿರಂತರವಾಗಿ ರಾಕೆಟ್​ ದಾಳಿಗಳನ್ನು ನಡೆಸುತ್ತಿದೆ.

ಹಿಜ್ಬುಲ್ಲಾ ಇಸ್ರೇಲ್​ನ ನಾಗರಿಕ ಬಡಾವಣೆಗಳ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಐಡಿಎಫ್ ವಕ್ತಾರ ಡೇನಿಯಲ್ ಹಗರಿ ಕೂಡ ಈ ಮುನ್ನ ಹೇಳಿರುವುದು ಗಮನಾರ್ಹ. "ಇಸ್ರೇಲ್ ಮೇಲೆ ಕ್ಷಿಪಣಿ ಮತ್ತು ರಾಕೆಟ್​ಗಳನ್ನು ಉಡಾಯಿಸಲು ಉಗ್ರಗಾಮಿ ಸಂಘಟನೆ ಹಿಜ್ಬುಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿರುವುದು ನಮಗೆ ತಿಳಿದಿದೆ. ಹೀಗಾಗಿ ಆ ಅಪಾಯವನ್ನು ತಡೆಗಟ್ಟುವ ಸಲುವಾಗಿ ನಾವು ಪೂರ್ವಭಾವಿ ದಾಳಿಗಳನ್ನು ನಡೆಸುತ್ತಿದ್ದೇವೆ" ಎಂದು ಅವರು ಹೇಳಿದರು.

"ಹಿಜ್ಬುಲ್ಲಾದ ದಾಳಿಗಳನ್ನು ಹಿಮ್ಮೆಟ್ಟಿಸುವ ಸಲುವಾಗಿ ಮತ್ತು ಆತ್ಮರಕ್ಷಣಾ ಕ್ರಮವಾಗಿ ಐಡಿಎಫ್ ಲೆಬನಾನ್​ನಲ್ಲಿರುವ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸುತ್ತಿದೆ" ಎಂದು ಐಡಿಎಫ್ ವಕ್ತಾರರು ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ ಮತ್ತೊಂದು ವೀಡಿಯೊದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಪ್ರಧಾನಿ ಮೋದಿ, ಅಧ್ಯಕ್ಷ ಜೆಲೆನ್ ಸ್ಕಿ ಮಾತುಕತೆ: 4 ದ್ವಿಪಕ್ಷೀಯ ಒಪ್ಪಂದಗಳಿಗೆ ಉಕ್ರೇನ್, ಭಾರತ ಸಹಿ - Ukraine India Bilateral Agreements

For All Latest Updates

ABOUT THE AUTHOR

...view details