ಕರ್ನಾಟಕ

karnataka

ETV Bharat / international

ಇಸ್ರೇಲ್ - ಹಮಾಸ್ ಕದನ ವಿರಾಮ: 33 ಇಸ್ರೇಲಿ ಒತ್ತೆಯಾಳು, 1,890 ಪ್ಯಾಲೆಸ್ಟೈನ್ ಕೈದಿಗಳ ಬಿಡುಗಡೆಗೆ ಸಿದ್ಧತೆ - GAZA CEASEFIRE DEAL

ಇಸ್ರೇಲ್ ಮತ್ತು ಹಮಾಸ್ ನಡುವಣ ಕದನವಿರಾಮ ಜಾರಿಗೆ ಕ್ಷಣಗಣನೆ ಆರಂಭವಾಗಿದೆ.

ಇಸ್ರೇಲ್ - ಹಮಾಸ್ ಕದನವಿರಾಮ: 33 ಇಸ್ರೇಲಿ ಒತ್ತೆಯಾಳು, 1,890 ಪ್ಯಾಲೆಸ್ಟೈನ್ ಕೈದಿಗಳ ಬಿಡುಗಡೆಗೆ ಸಿದ್ಧತೆ
ಇಸ್ರೇಲ್ - ಹಮಾಸ್ ಕದನವಿರಾಮ: 33 ಇಸ್ರೇಲಿ ಒತ್ತೆಯಾಳು, 1,890 ಪ್ಯಾಲೆಸ್ಟೈನ್ ಕೈದಿಗಳ ಬಿಡುಗಡೆಗೆ ಸಿದ್ಧತೆ (ians)

By ETV Bharat Karnataka Team

Published : Jan 19, 2025, 1:49 PM IST

ಕೈರೋ: ಗಾಜಾ ಕದನ ವಿರಾಮ ಒಪ್ಪಂದದ ಮೊದಲ ಹಂತ ಜಾರಿಯ ಸಂದರ್ಭದಲ್ಲಿ ಇಸ್ಲಾಮಿಕ್ ರೆಸಿಸ್ಟೆನ್ಸ್ ಮೂವ್ ಮೆಂಟ್ ಅಥವಾ ಹಮಾಸ್ 33 ಇಸ್ರೇಲಿ ಕೈದಿಗಳನ್ನು ಬಿಡುಗಡೆ ಮಾಡುವುದಕ್ಕೆ ಪ್ರತಿಯಾಗಿ ಇಸ್ರೇಲ್ 1,890ಕ್ಕೂ ಹೆಚ್ಚು ಪ್ಯಾಲೆಸ್ಟೈನ್ ಕೈದಿಗಳನ್ನು ಬಿಡುಗಡೆ ಮಾಡಲಿದೆ ಎಂದು ಈಜಿಪ್ಟ್ ಘೋಷಿಸಿದೆ. ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ಈಜಿಪ್ಟ್ ಮಧ್ಯಸ್ಥಿಕೆಯ ಮೂಲಕ ತಲುಪಿದ ಈ ಒಪ್ಪಂದವು ಸ್ಥಳೀಯ ಸಮಯ ಭಾನುವಾರ ಬೆಳಗ್ಗೆ 8: 30 ಕ್ಕೆ (0630 ಜಿಎಂಟಿ) ಪ್ರಾರಂಭವಾಗಲಿದೆ ಎಂದು ಈಜಿಪ್ಟ್ ವಿದೇಶಾಂಗ ಸಚಿವಾಲಯ ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.

42 ದಿನಗಳ ಕಾಲ ಮುಂದುವರಿಯಲಿರುವ ಕದನ ವಿರಾಮದ ಮೊದಲ ಹಂತದಲ್ಲಿ, ಇಸ್ರೇಲ್ 1,890 ಕ್ಕೂ ಹೆಚ್ಚು ಪ್ಯಾಲೆಸ್ಟೈನ್ ಕೈದಿಗಳನ್ನು ಬಿಡುಗಡೆ ಮಾಡುವುದಕ್ಕೆ ಪ್ರತಿಯಾಗಿ ಹಮಾಸ್ 33 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಿದೆ ಎಂದು ಸಚಿವಾಲಯ ತಿಳಿಸಿದೆ. ಒಪ್ಪಂದದ ಎಲ್ಲ ಮೂರು ಹಂತಗಳಲ್ಲಿ ಸಂಪೂರ್ಣ ಮತ್ತು ಸಮಯೋಚಿತ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಮಧ್ಯವರ್ತಿಗಳ ಬದ್ಧತೆಯನ್ನು ಅದು ಒತ್ತಿಹೇಳಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಕದನ ವಿರಾಮ ಒಪ್ಪಂದವು ಪ್ಯಾಲೆಸ್ಟೈನ್ ಜನರ ಸಂಕಟವನ್ನು ನಿವಾರಿಸುವ ಮಾರ್ಗದ ಆರಂಭದ ಮುನ್ಸೂಚನೆಯಾಗಿದೆ ಎಂದು ಈಜಿಪ್ಟ್ ಭರವಸೆ ವ್ಯಕ್ತಪಡಿಸಿದೆ. ಒಪ್ಪಂದವನ್ನು ಬೆಂಬಲಿಸುವಂತೆ ಮತ್ತು ಶಾಶ್ವತ ಕದನ ವಿರಾಮವನ್ನು ಸ್ಥಾಪಿಸಲು ಅಂತಾರಾಷ್ಟ್ರೀಯ ಸಮುದಾಯಕ್ಕೆ, ವಿಶೇಷವಾಗಿ ಯುನೈಟೆಡ್ ಸ್ಟೇಟ್ಸ್​ಗೆ ಈಜಿಪ್ಟ್ ಕರೆ ನೀಡಿದೆ.

ಇದಲ್ಲದೆ, ಪ್ಯಾಲೆಸ್ಟೈನ್ ಜನತೆಗೆ ಅಗತ್ಯವಿರುವ ಎಲ್ಲ ಮಾನವೀಯ ನೆರವನ್ನು ಒದಗಿಸುವಂತೆ ಮತ್ತು ಗಾಜಾದ ಪುನರ್ ನಿರ್ಮಾಣಕ್ಕಾಗಿ ತುರ್ತು ಯೋಜನೆ ಅಭಿವೃದ್ಧಿಪಡಿಸುವಂತೆ ಈಜಿಪ್ಟ್ ಅಂತಾರಾಷ್ಟ್ರೀಯ ಸಮುದಾಯಕ್ಕೆ ಒತ್ತಾಯಿಸಿದೆ. ಅಂತಾರಾಷ್ಟ್ರೀಯ ನಿಯಮಗಳಿಗೆ ಅನುಗುಣವಾಗಿ ದ್ವಿ-ರಾಷ್ಟ್ರ ಪರಿಹಾರದ ಚೌಕಟ್ಟಿನೊಳಗೆ ಪ್ಯಾಲೆಸ್ಟೈನ್ ಸಮಸ್ಯೆ ಪರಿಹರಿಸಬೇಕು ಎಂದು ಅದು ಹೇಳಿದೆ.

ಈ ಪರಿಹಾರವು ಪೂರ್ವ ಜೆರುಸಲೇಂ ಅನ್ನು ರಾಜಧಾನಿಯನ್ನಾಗಿಸಿ ಜೂನ್ 4, 1967 ರ ಮಾದರಿಯಲ್ಲಿ ಸ್ವತಂತ್ರ ಪ್ಯಾಲೆಸ್ಟೈನ್ ರಾಷ್ಟ್ರವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕದನ ವಿರಾಮ ಜಾರಿಯ ಪ್ರಕ್ರಿಯೆಗಳ ಬಗ್ಗೆ ಮೇಲ್ವಿಚಾರಣೆ ಮಾಡಲು ಕತಾರ್ ಮತ್ತು ಯುನೈಟೆಡ್ ಸ್ಟೇಟ್ಸ್ ಸಹಯೋಗದೊಂದಿಗೆ ಈಜಿಪ್ಟ್​ ತನ್ನ ದೇಶದಲ್ಲಿ ಜಂಟಿ ಕಾರ್ಯಾಚರಣೆ ಕಚೇರಿ ಸ್ಥಾಪಿಸಲಿದೆ. ಈ ಕಚೇರಿಯು ಬಂಧಿತರು ಮತ್ತು ಕೈದಿಗಳ ವಿನಿಮಯ, ಮಾನವೀಯ ನೆರವಿನ ಪೂರೈಕೆ ಮತ್ತು ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆದ ನಂತರ ವ್ಯಕ್ತಿಗಳ ಚಲನೆಯನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:ಭ್ರಷ್ಟಾಚಾರ ಪ್ರಕರಣ: ಪಾಕ್​ ಮಾಜಿ ಪ್ರಧಾನಿ ಇಮ್ರಾನ್ ಖಾನ್​​, ಪತ್ನಿ ಬುಶ್ರಾಗೆ ಜೈಲು ಶಿಕ್ಷೆ - IMRAN KHAN

ABOUT THE AUTHOR

...view details