ಕರ್ನಾಟಕ

karnataka

ETV Bharat / international

ಇರಾನ್​ ಅಧ್ಯಕ್ಷ ಇಬ್ರಾಹಿಂ ರೈಸಿ ಅಂತ್ಯಕ್ರಿಯೆ: ಉಪ ರಾಷ್ಟ್ರಪತಿ ಜಗದೀಪ್ ಧನಕರ್​​​​​​ರಿಂದ​ ಅಂತಿಮ ನಮನ - IRAN PRESIDENT FUNERAL - IRAN PRESIDENT FUNERAL

ಹೆಲಿಕಾಪ್ಟರ್​ ದುರಂತದಲ್ಲಿ ಸಾವನ್ನಪ್ಪಿದ್ದ ಇರಾನ್​ ಅಧ್ಯಕ್ಷ ಸೈಯದ್​ ಇಬ್ರಾಹಿಂ ರೈಸಿ ಅವರ ಅಂತ್ಯಕ್ರಿಯೆ ಇಂದು ರಾಷ್ಟ್ರದ ಪವಿತ್ರ ಶಿಯಾ ಸ್ಥಳದಲ್ಲಿ ನೆರವೇರಿತು.

ಇರಾನ್​ ಅಧ್ಯಕ್ಷ ಇಬ್ರಾಹಿಂ ರೈಸಿ ಅಂತ್ಯಕ್ರಿಯೆ
ಇರಾನ್​ ಅಧ್ಯಕ್ಷ ಇಬ್ರಾಹಿಂ ರೈಸಿ ಅಂತ್ಯಕ್ರಿಯೆ (AP Photo)

By ETV Bharat Karnataka Team

Published : May 23, 2024, 10:42 PM IST

ಅಜರ್‌ಬೈಜಾನ್:ಇರಾನ್​ ಮತ್ತು ಇರಾಕ್​ ಮಧ್ಯೆ ತಿಕ್ಕಾಟ ನಡೆಯುತ್ತಿರುವ ನಡುವೆಯೇ ಇರಾನ್​ ಅಧ್ಯಕ್ಷರು ಈಚೆಗೆ ವಿಮಾನ ದುರಂತದಲ್ಲಿ ಸಾವಿಗೀಡಾಗಿದ್ದಾರೆ. ಈ ಅಪಘಾತ ಹಿಂದೆ ಯಾರ ಕೈವಾಡವಿದೆ ಎಂದು ತಿಳಿದುಬಂದಿಲ್ಲವಾದರೂ, ಹವಾಮಾನ ವೈಪರೀತ್ಯದಿಂದ ನಡೆದ ದುರಂತ ಎಂದು ಹೇಳಲಾಗಿದೆ.

ಇರಾನ್​ನ ಖಡಕ್​ ಅಧ್ಯಕ್ಷರಾಗಿ ಗುರುತಿಸಿಕೊಂಡಿದ್ದ ದಿವಂಗತ ಇಬ್ರಾಹಿಂ ರೈಸಿ ಅವರು, ಮೇ 19 ರಂದು ದೇಶದ ಪೂರ್ವ ಅಜರ್‌ಬೈಜಾನ್ ಪ್ರಾಂತ್ಯದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ನಡೆದ ದುರ್ಘಟನೆಯಲ್ಲಿ ಸಾವಿಗೀಡಾಗಿದ್ದರು. ಅವರ ಅಂತ್ಯಕ್ರಿಯೆ ಗುರುವಾರ ರಾಷ್ಟ್ರದ ಪವಿತ್ರ ಶಿಯಾ ಸ್ಥಳದಲ್ಲಿ ನೆರವೇರಿತು.

ಶಿಯಾ ಇಸ್ಲಾಂನ ಎಂಟನೇ ಇಮಾಮ್ ಅವರನ್ನು ಸಮಾಧಿ ಮಾಡಲಾದ ಸ್ಥಳದ ಪಕ್ಕದಲ್ಲಿ ರೈಸಿ ಅವರನ್ನು ಮಣ್ಣು ಮಾಡಲಾಗಿದೆ. ಇದು ಮುಸ್ಲಿಂ ಯಾತ್ರಿಕರಿಗೆ ಪವಿತ್ರ ಸ್ಥಳವಾಗಿದ್ದು, ಪ್ರತಿ ವರ್ಷ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಕಪ್ಪು ವಸ್ತ್ರವನ್ನು ಧರಿಸಿದ ಶೋಕತಪ್ತ ಜನರು ಶಿಯಾ ಪವಿತ್ರ ಸ್ಥಳದಲ್ಲಿ ನೆರೆದಿದ್ದರು. ಶಿಯಾ ಸಂಪ್ರದಾಯದಂತೆ ಶೋಕದ ವೇಳೆ ದುಃಖದಿಂದ ಎದೆಯನ್ನು ಬಡಿದುಕೊಳ್ಳುತ್ತಿದ್ದರು.

ಅಂತ್ಯಕ್ರಿಯೆಯಲ್ಲಿ ಉಪ ರಾಷ್ಟ್ರಪತಿ ಭಾಗಿ:ಇರಾನ್​ ಅಧ್ಯಕ್ಷ ರೈಸಿ ಅವರ ಅಂತ್ಯಕ್ರಿಯೆಯಲ್ಲಿ ಭಾರತದ ಪರವಾಗಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್​ ಅವರು ಭಾಗವಹಿಸಿದ್ದರು. ಸಮಾಧಿಗೂ ಮೊದಲು ಅವರು ರೈಸಿ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಸಯ್ಯದ್ ಇಬ್ರಾಹಿಂ ರೈಸಿ ಅವರಿಗೆ ಅಂತಿಮ ನಮನ ಸಲ್ಲಿಸಲು ಭಾರತದ ಪರವಾಗಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಮೇ 22 ರಂದು ಟೆಹ್ರಾನ್​ಗೆ ತೆರಳಿದ್ದರು.

ಇರಾನ್​ ಜೊತೆಗೆ ಭಾರತ ಅತ್ಯುತ್ತಮ ಬಾಂಧವ್ಯ ಹೊಂದಿದೆ. ರೈಸಿ ಅವರ ಆಡಳಿತದಲ್ಲಿ ಉಭಯ ರಾಷ್ಟ್ರಗಳು ಹಲವಾರು ಮಹತ್ವದ ಒಪ್ಪಂದಗಳನ್ನು ಮಾಡಿಕೊಂಡಿದ್ದರು. ಈ ನಡುವೆ ಮೇ 19 ರಂದು ನಡೆದ ದುರಂತದಲ್ಲಿ ರೈಸಿ ಅವರು ಅಸುನೀಗಿದ್ದಾರೆ. ದುರಂತಕ್ಕೀಡಾದ ಹೆಲಿಕಾಪ್ಟರ್​ನಲ್ಲಿ ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದೊಲ್ಲಾಹಿಯಾನ್, ಇತರ ಹಲವು ಹಿರಿಯ ನಾಯಕರು ಸೇರಿ 9 ಮಂದಿ ದುರ್ಮರಣಕ್ಕೀಡಾಗಿದ್ದರು.

ಅಜರ್‌ಬೈಜಾನ್ ಗಣರಾಜ್ಯದೊಂದಿಗೆ ಸೇರಿ ಇರಾನ್‌ನ ಗಡಿಯಲ್ಲಿ ನಿರ್ಮಿಸಲಾಗಿದ್ದ ನೂತನ ಅಣೆಕಟ್ಟನ್ನು ಉದ್ಘಾಟಿಸಿ ಇಬ್ರಾಹಿಂ ರೈಸಿ ಅವರು ಹಿಂದಿರುಗುತ್ತಿದ್ದರು. ಈ ವೇಳೆ ಅವರಿದ್ದ ಹೆಲಿಕಾಪ್ಟರ್ ಅರಣ್ಯ ಪ್ರದೇಶದಲ್ಲಿ ಪತನವಾಗಿತ್ತು. ವಿಷಯ ತಿಳಿದ ತಕ್ಷಣ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿತ್ತು. ಪ್ರತಿಕೂಲ ಹವಾಮಾನದ ನಡುವೆ, ಪೂರ್ವ ಅಜರ್‌ಬೈಜಾನ್ ಪ್ರಾಂತ್ಯದ ವರ್ಜೆಕಾನ್ ಕೌಂಟಿಯಲ್ಲಿ ಅಪಘಾತದ ಸ್ಥಳವನ್ನು ತಲುಪಲಾಗಿತ್ತು.

46 ತಂಡಗಳನ್ನು ರಕ್ಷಣಾ ಕಾರ್ಯಗಳಿಗಾಗಿ ನಿಯೋಜಿಸಲಾಗಿತ್ತು. ಇರಾನ್‌ನ ಸೈನ್ಯದ ಮುಖ್ಯಸ್ಥರು, ಸೈನ್ಯದ ವಿವಿಧ ಪಡೆಗಳು, ರೆವಲ್ಯೂಷನರಿ ಗಾರ್ಡ್‌ಗಳನ್ನು ಶೋಧ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಇರಾನ್​ ಜನರ ಪ್ರಾರ್ಥನೆ ಫಲಿಸಿಲ್ಲ. ಅಧ್ಯಕ್ಷರು ದುರಂತ ಅಂತ್ಯ ಕಂಡಿದ್ದರು.

ಇದನ್ನೂ ಓದಿ:ಇರಾನ್​ನ ದಿವಂಗತ ಅಧ್ಯಕ್ಷ ರೈಸಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಟೆಹ್ರಾನ್​ಗೆ ಆಗಮಿಸಿದ ಉಪರಾಷ್ಟ್ರಪತಿ ಧನಕರ್ - Raisi funeral

ABOUT THE AUTHOR

...view details